Vice Chancellor Of Mysore University Students Should Develop A Questioning Mindset
ಮೈಸೂರು/ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು / ಫೋಟೊ
Contributed by: Beeresha M|Vijaya Karnataka•
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು
ಮೈಸೂರು ವಿವಿ ಕುಲಪತಿ ಪ್ರೊ.ಎನ್ .ಕೆ.ಲೋಕನಾಥ್ ಹೇಳಿಕೆವಿಕ ಸುದ್ದಿಲೋಕ ಮೈಸೂರು
ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್ .ಕೆ.ಲೋಕನಾಥ್ ಸಲಹೆ ನೀಡಿದರು.
ನಗರದ ಮಾನಸ ಗಂಗೋತ್ರಿ ಕ್ಯಾಂಪಸ್ ನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ಅಧ್ಯಯನ ವಿಭಾಗದಲ್ಲಿಶುಕ್ರವಾರ ಏರ್ಪಡಿಸಿದ್ದ ಡಾ.ಸರ್ವೋತ್ತಮ ವೈ.ಅಂಬೇಕರ್ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ವಿದ್ಯಾರ್ಥಿಗಳಿಗೆ ಶಿಕ್ಷಕರು ಅನೇಕ ಪ್ರಶ್ನೆ ಕೇಳುತ್ತಾರೆ. ಆದರೆ, ವಿದ್ಯಾರ್ಥಿಗಳು ತಾವು ಎಷ್ಟು ಪ್ರಶ್ನೆ ಕೇಳುತ್ತಿದ್ದೇವೆ ಎಂಬುದನ್ನು ಯೋಚಿಸಬೇಕು. ವಿಶೇಷವಾಗಿ ಹಿಂಬದಿಯ ಸಾಲಿನಲ್ಲಿಕುಳಿತುಕೊಳ್ಳುವ ವಿದ್ಯಾರ್ಥಿಗಳು ಮುಂದೆ ಕುಳಿತು, ಪ್ರಶ್ನೆ ಕೇಳಿ, ಶಿಕ್ಷಕರೊಂದಿಗೆ ಸಂವಾದ ನಡೆಸಬೇಕು. ಸಂವಾದದಿಂದಲೇ ಜ್ಞಾನ ವಿಸ್ತರಿಸುತ್ತದೆ. ಓದುವಾಗ ಕೇವಲ ಉತ್ತರಗಳನ್ನು ಹುಡುಕದೆ, ಪ್ರಶ್ನೆ ಕೇಳುವುದನ್ನು ಕಲಿಯಬೇಕು. ಒಂದು ಪ್ರಶ್ನೆ ಮತ್ತೊಂದು ಪ್ರಶ್ನೆಯನ್ನು ಹುಟ್ಟುಹಾಕಿ ಆಲೋಚನಾ ಸಾಮರ್ಥ್ಯ ವೃದ್ಧಿಸುತ್ತದೆ,’’ ಎಂದರು.
ತಂತ್ರಜ್ಞಾನ ಮತ್ತು ಮಾಹಿತಿ ಯುಗದಲ್ಲಿಮೊಬೈಲ್ , ಯೂಟ್ಯೂಬ್ ಹಾಗೂ ಇಂಟರ್ ನೆಟ್ ಮೂಲಕ ಮಾಹಿತಿ ಸುಲಭವಾಗಿ ದೊರೆಯುತ್ತಿದೆ. ಆದರೆ, ಸಣ್ಣ ವಿಷಯವೊಂದನ್ನು ತಿಳಿಯಲು ವಿದ್ಯಾರ್ಥಿಗಳು ಗಂಟೆಗಟ್ಟಲೆ ಇಂಟರ್ ನೆಟ್ ನಲ್ಲಿಹುಡುಕುವ ಬದಲು ಶಿಕ್ಷಕರು ಅಥವಾ ಹಿರಿಯ ಪ್ರಾಧ್ಯಾಪಕರನ್ನು ಕೇಳಿದರೆ ಕೆಲವೇ ನಿಮಿಷಗಳಲ್ಲಿಉತ್ತರ ದೊರೆಯಬಹುದು. ತಂತ್ರಜ್ಞಾನ ಬಳಕೆ ಹೆಚ್ಚಾದರೂ ವಿದ್ಯಾರ್ಥಿ-ಶಿಕ್ಷಕರ ನೇರ ಸಂವಾದ ಕಡಿಮೆಯಾಗಬಾರದು. ಕೃತಕ ಬುದ್ಧಿಮತ್ತೆಯ ಯುಗದಲ್ಲಿದ್ದರೂ ಶಿಕ್ಷಕರ ಸ್ಥಾನವನ್ನು ಕೃತಕ ಬುದ್ಧಿಮತ್ತೆ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಶಿಕ್ಷಕರು ಯಾವಾಗಲೂ ಶಿಕ್ಷಕರೇ,’’ ಎಂದರು.
ಮೈಸೂರು ವಿಶ್ವವಿದ್ಯಾಲಯದ ಎಲ್ಲಅಧ್ಯಯನ ವಿಭಾಗಗಳ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಬಲಪಡಿಸುವ ಅವಶ್ಯಕತೆ ಇದೆ. ಜತೆಗೆ ಇಂಟರ್ನ್ ಶಿಪ್ ಮತ್ತಿತರರ ಅಗತ್ಯಗಳಿಗೆ ಅವರಿಂದ ಮಾರ್ಗದರ್ಶನ ದೊರೆಯುತ್ತದೆ. ತನ್ಮೂಲಕ ಮೈಸೂರು ವಿಶ್ವವಿದ್ಯಾಲಯದ 110 ವರ್ಷಗಳ ಶೈಕ್ಷಣಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಎಲ್ಲರ ಜವಾಬ್ದಾರಿ,’’ ಎಂದು ಲೋಕನಾಥ್ ತಿಳಿಸಿದರು.
‘‘ಸೌಲಭ್ಯಗಳ ಕೊರತೆಯಿದ್ದರೂ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿರಿಯ ಪ್ರಾಧ್ಯಾಪಕರು ಹಾಗೂ ಅನುಭವ ಹೊಂದಿರುವ ಶಿಕ್ಷಕರ ಅನುಭವವನ್ನು ಬಳಸಿಕೊಂಡು ಒಟ್ಟಾಗಿ ಕೆಲಸ ಮಾಡಿದಾಗ ಉತ್ತಮ ತಂಡ ನಿರ್ಮಾಣವಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿಗುರಿಯ ಜತೆಗೆ ಸರಿಯಾದ ಮಾರ್ಗದರ್ಶನ ನೀಡುವ ಗುರು ಕೂಡ ಅಗತ್ಯ,’’ ಎಂದರು.
ವಿಭಾಗದ ಮುಖ್ಯಸ್ಥ ಪ್ರೊ.ಎಂ.ಪಿ.ಸದಾಶಿವ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಆರ್ .ಪ್ರಭು, ಡಾ.ಪಿ.ಎಂ.ರಾಧಾಕೃಷ್ಣ ದತ್ತಿ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಸಂಚಾಲಕರಾದ ಡಾ.ಎ.ಆರ್ .ರಮೇಶ್ , ಪ್ರೊ.ಕೆ.ಮಂಟೇಲಿಂಗು ವೇದಿಕೆಯಲ್ಲಿಇದ್ದರು.