Duniya Vijays Son Abduction Case Takes A Turn Attracting Significant Attention
ದುನಿಯಾ ವಿಜಯ್ ಪುತ್ರನ ಪ್ರಕರಣಕ್ಕೆ ತಿರುವು
Contributed by: Girish J.R|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು
ಸಹಪಾಠಿಯನ್ನು ಅಪಹರಿಸಿ ಹಲ್ಲೆನಡೆಸಿದ ಸಂಬಂಧ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸೇರಿದಂತೆ ಐದು ಮಂದಿ ವಿರುದ್ಧ ಎಫ್ ಐಆರ್ ದಾಖಲಾಗಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿ ಮನೀಶ್ ಗೌಡ ವಿರುದ್ಧ ಪ್ರತಿದೂರು ದಾಖಲಿಸಲಾಗಿದೆ.ಮೈಸೂರು ರಸ್ತೆಯ ಖಾಸಗಿ ಕಾಲೇಜು ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರು ಆಧರಿಸಿ ಕೆಂಗೇರಿ ಠಾಣೆ ಪೊಲೀಸರು ಸಾಮ್ರಾಟ್ , ಆತನ ಸ್ನೇಹಿತರಾದ ಸಮೃದ್ಧ್ ಸಿಂಹ, ವಿಶ್ವಾಸ್ ಸೂಚಿ, ಸ್ಕಂದ ವೆಂಕಟೇಶ್ ಮತ್ತು ಸಮೀದ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಸಾಮ್ರಾಟ್ ನ ಸ್ನೇಹಿತ ಸಮೃದ್ಧ್ ಸಿಂಹ, ಮನೀಶ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ಪ್ರತಿದೂರು ಕೊಟ್ಟಿದ್ದಾನೆ. ಮೊದಲಿಗೆ ಮನೀಶ್ ಗೌಡ ಮತ್ತು ಆತನ ಸ್ನೇಹಿತರೇ ತಮ್ಮ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದರೆಂದು ಸಮೃದ್ಧ್ ಸಿಂಹ ದೂರಿನಲ್ಲಿಆರೋಪಿಸಿದ್ದು, ಪೊಲೀಸರು ಮನೀಶ್ ಗೌಡ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಸಾಮ್ರಾಟ್ ಮತ್ತು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರನ್ನು ಮನೀಶ್ ಗೌಡ ಹಿಂದಿಕ್ಕಿ ಮುಂದೆ ಸಾಗಿದ್ದ. ಈ ವಿಚಾರಕ್ಕೆ ಮನೀಶ್ ಗೌಡ ಹಾಗೂ ಸಾಮ್ರಾಟ್ ಗುಂಪಿನ ಮಧ್ಯೆ ಆ.31ರಂದು ಜಗಳವಾಗಿತ್ತು. ನಂತರ ಸೆ.1ರಂದು ಕಾಲೇಜಿನ ಪಾರ್ಕಿಂಗ್ ಸ್ಥಳದಲ್ಲಿಮನೀಶ್ ಗೌಡ ಒಬ್ಬನೇ ಇದ್ದಾಗ ಸಾಮ್ರಾಟ್ ಮತ್ತು ಸ್ನೇಹಿತರು ಆತನನ್ನು ಅಪಹರಿಸಿ ಕಾರಿನಲ್ಲಿಎಳೆದೊಯ್ದು ಹಲ್ಲೆ ನಡೆಸಿದ್ದರು. ಎರಡೂ ಪ್ರಕರಣಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.