ಇಂಟ್ರೊಸ್ಯಾಂಡಲ್ ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಯಾವುದೇ ಹಬ್ಬ ಮಾಡಿದರೂ ಅದು ವರ್ಣರಂಜಿತ ಮತ್ತು ಅಷ್ಟೇ ಅರ್ಥಪೂರ್ಣವಾಗಿರುತ್ತದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅವರು ಈ ಹಬ್ಬದ ಪರಿಕಲ್ಪನೆ ಹಾಗೂ ಈಗಿನ ಪೀಳಿಗೆಯವರಿಗೆ ಹಬ್ಬಗಳ ಆಚರಣೆಯ ಬಗ್ಗೆ ವಿವರಿಸಿದ್ದಾರೆ.
ಶ್ವೇತಾ ಶ್ರೀವಾತ್ಸವ
ನನ್ನ ಬಾಲ್ಯದ ಕೃಷ್ಣಾಷ್ಟಮಿ ನೆನಪು ಎಂದರೆ ಅಮ್ಮ ಬಾಲಕೃಷ್ಣನ ಮೂರ್ತಿಯನ್ನು ಚೆನ್ನಾಗಿ ಸಿಂಗರಿಸಿ, ತೊಟ್ಟಿಲಲ್ಲಿಕೂರಿಸಿ ವೈವಿಧ್ಯಮಯ ಖಾದ್ಯಗಳನ್ನು ಮಾಡಿ ಕೃಷ್ಣನಿಗೆ ಅರ್ಪಿಸುತ್ತಿದ್ದರು. ಆಗಿನ ಹಬ್ಬದ ಸಂಭ್ರಮವೇ ಬೇರೆ. ಈಗ ನಾನು ನನ್ನ ಮಗಳು ಅಶ್ಮಿತಾ ಜತೆಗೆ ಮಾಡುವ ಕೃಷ್ಣನ ಹಬ್ಬದ ಶೈಲಿಯೇ ಬೇರೆ. ಮಕ್ಕಳು ಹುಟ್ಟಿದ ಮೊದಲ ಮೂರು ವರ್ಷ ಮಗು ಹೆಣ್ಣಾಗಲಿ, ಗಂಡಾಗಲಿ ಅಮ್ಮಂದಿರುವ ಅವರನ್ನು ಕೃಷ್ಣ ಎಂದೇ ಭಾವಿಸಿ ಮುರಳಿಕೃಷ್ಣನ ವೇಷಭೂಷಣ ತೊಡಿಸಿ ಖುಷಿ ಪಡುತ್ತಾರೆ. ಅವರ ಪುಟ್ಟ ಕಾಲಿನಿಂದ ಮನೆಯಲ್ಲಿಹೆಜ್ಜೆಗಳನ್ನು ಇರಿಸಿ ಕೃಷ್ಣನ ರೂಪವೇ ಅವರೆಂದು ಸಂಭ್ರಮಿಸುತ್ತಾರೆ.
ನನ್ನ ಮಗಳಿಗೆ ನಾಲ್ಕು ವರ್ಷವಾಗುವವರೆಗೂ ನನಗೆ ಜನ್ಮಾಷ್ಟಮಿ ಸೇರಿ ಎಲ್ಲಾಹಬ್ಬಗಳೂ ಕಲರ್ ಫುಲ್ . ಈಗಲೂ ಅವಳಿಗೆಂದೇ ಹಬ್ಬ ಮಾಡುತ್ತೇನೆ. ಆದರೆ ಈಗ ಹಬ್ಬದ ಪರಿಭಾಷೆಯೇ ಬದಲಾಗಿದೆ. ಹಬ್ಬದ ದಿನ ರಜೆ, ನಮಗೆ ಫ್ರೀ ಡೇ ಎಂದುಕೊಳ್ಳುತ್ತಾರೆ. ದೈನಂದಿನ ಜಂಜಾಟದಿಂದ ಅಂದು ಸಮಯ ಸಿಕ್ಕಿದೆ, ರಿಲ್ಯಾಕ್ಸ್ ಮಾಡೋಣ ಎಂದುಕೊಳ್ಳುತ್ತಾರೆ. ಈಗ ತಿಂಡಿಗಳಿಂದ ಹಿಡಿದು ಎಲ್ಲವೂ ಕ್ಷಣಾರ್ಧದಲ್ಲೇ ಕೈ ಸೇರುವ ಕಾರಣ ಹಬ್ಬ ಎಂದರೆ ಬರೀ ಸೋಶಿಯಲ್ ಮೀಡಿಯಾದಲ್ಲಿ, ಮಕ್ಕಳ ಕೃಷ್ಣವೇಷದ ಫೋಟೊ ತೆಗೆಸಿ ಅಥವಾ ತಾವೇ ಹಬ್ಬಕ್ಕೆ ಸುಂದರವಾಗಿ ರೆಡಿಯಾಗಿ ಮನೆಯಲ್ಲಿಕೃಷ್ಣ ಕೂರಿಸಿದ್ದರೆ ಅದರ ಜತೆಗೊಂದು ಫೋಟೊ ಪೋಸ್ಟ್ ಮಾಡುವುದು ಎಂದುಕೊಂಡಿದ್ದಾರೆ. ಹಬ್ಬದ ಆಧ್ಯಾತ್ಮಿಕ, ನೈಸರ್ಗಿಕ ಹಾಗೂ ವೈಜ್ಞಾನಿಕ ಹಿನ್ನೆಲೆ ಎಷ್ಟೋ ಜನರಿಗೆ ಗೊತ್ತಿಲ್ಲ. ಆ ಮಾಸ, ಋುತುವಿನಲ್ಲೇ ಯಾಕೆ ಹಬ್ಬ ಆಚರಿಸಲಾಗುತ್ತದೆ, ಸನಾತನ ಧರ್ಮದಲ್ಲಿಅದರ ಉಲ್ಲೇಖ ಏನಿದೆ ಎಂಬುದೇ ಬಹುತೇಕರಿಗೆ ಗೊತ್ತಿಲ್ಲ. ಅದನ್ನು ನಾವು ಮೊದಲು ಕಲಿತು ಮುಂದಿನ ಜನಾಂಗಕ್ಕೂ ತಲುಪಿಸಬೇಕು ಎನ್ನುವುದು ನನ್ನ ಆಲೋಚನೆ.
ಬಾಕ್ಸ್
ಭಗವದ್ಗೀತೆ ಮತ್ತು ಮಗಳು
ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾಳಿಗೆ ಭಗವದ್ಗೀತೆಯ ಬಗ್ಗೆ ಅಪಾರ ಒಲವಿದೆ. ಈ ಬಗ್ಗೆ ಹೇಳಿರುವ ಅವರು, ‘ಶಾಲೆಯಲ್ಲಿನಡೆಯುವ ಯಾವುದೇ ಸ್ಪರ್ಧೆಗೂ ಮೊದಲು ಹೆಸರು ಕೊಟ್ಟು ಬರುವ ನನ್ನ ಮಗಳು ಒಂದನೇ ತರಗತಿಯಲ್ಲಿರುವಾಗ ಭಗವದ್ಗೀತೆ ಶ್ಲೋಕಗಳನ್ನು ಹೇಳುವ ಸ್ಪರ್ಧೆಗೆ ತನ್ನ ಹೆಸರು ಬರೆಸಿದ್ದಳು. ನಮ್ಮ ಮನೆಯಲ್ಲಿದೇವರನಾಮ, ಹರಿಕಥೆ ಕೇಳುತ್ತಾ ಬೆಳೆದ ನಾವು ಭಗವದ್ಗೀತೆ ಶ್ಲೋಕಗಳನ್ನು ಅಷ್ಟಾಗಿ ಕಲಿತಿರಲಿಲ್ಲ. ಮಗಳು ನನಗೆ ಈ ಸ್ಪರ್ಧೆಯ ಬಗ್ಗೆ ಹೇಳಿದಾಗ ನಾನು, ‘ಸ್ಪರ್ಧೆಗೆ ಇನ್ನು 15 ದಿನಗಳು ಮಾತ್ರ ಇವೆ. ಭಗವದ್ಗೀತೆಯ 10 ಶ್ಲೋಕಗಳನ್ನು ಕಲಿತು ಹೇಳುವುದು ಅಷ್ಟು ಸುಲಭವಲ್ಲ. ಅದು ಬೇರೆ ಸ್ಪರ್ಧೆಗಳಂತೆ ಅಲ್ಲ, ಹೆಸರು ಕೊಟ್ಟಿರುವ ನಿನ್ನ ಸ್ನೇಹಿತರು ಹಲವು ದಿನಗಳು ಅದನ್ನು ಅಭ್ಯಾಸ ಮಾಡಿರುತ್ತಾರೆ’ ಎಂದೆ. ಅದಕ್ಕೆ ಅವಳು, ‘ಶ್ರೀಕೃಷ್ಣ ನಮ್ಮ ಜತೆ ಇರುತ್ತಾನೆ ಅಮ್ಮ, ನೀನು ಕಲಿಸಿಕೊಡು’ ಎಂದಳು. ಆ ಮಾತು ಕೇಳಿ ನನಗೆ ಅಚ್ಚರಿಯಾಗಿತ್ತು. ಅಷ್ಟು ಪುಟ್ಟ ಮಗುವಿನ ಬಾಯಲ್ಲಿಬಂದ ಆ ಮಾತು ದೈವಪ್ರೇರಿತ ಎಂದೆನಿಸಿ ಪ್ರತಿದಿನ ಸಂಜೆ ವಿಡಿಯೊ ನೋಡಿ ಅವಳಿಗೆ ಶ್ಲೋಕಗಳನ್ನು ಹೇಳಿಕೊಟ್ಟೆ. ಅವಳು ಕೂಡ ಸೊಗಸಾಗಿ ಅತ್ಯಂತ ಸ್ಪಷ್ಟವಾಗಿ ಭಗವದ್ಗೀತೆ ಶ್ಲೋಕಗಳನ್ನು ಹೇಳಲು ಕಲಿತಳು. ಇದರ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿಹಾಕಿದೆ. ಇದನ್ನು ನೋಡಿದ ಹಲವು ವಿದ್ವಾಂಸರು ‘ನಿಮ್ಮ ಮಗಳಿಗೆ ನಾವೇ ಭಗವದ್ಗೀತೆ ಕಲಿಸುತ್ತೇವೆ’ ಎಂದು ಕೇಳಿಕೊಂಡರು. ಆಗ ಅವಳನ್ನು ತರಗತಿಗೆ ಸೇರಿಸಲು ನನಗೆ ಸಾಧ್ಯವಾಗಲಿಲ್ಲ. ಈಗ ಮೂರು ತಿಂಗಳಿಂದ ಅಭ್ಯಾಸ ಮಾಡುತ್ತಿದ್ದಾಳೆ. ನಾನು ಯಾವತ್ತೂ ಅವಳಿಗೆ ಯಾವುದನ್ನೂ ಒತ್ತಾಯಪೂರ್ವಕವಾಗಿ ಕಲಿಸಲು, ಮಾಡಿಸಲು ಹೋಗಲ್ಲ. ಅವಳು ಕೇಳಿದ್ದನ್ನು ಸಾಧ್ಯವಾದಷ್ಟು ಕಲಿಸಲು ಪ್ರಯತ್ನಿಸುತ್ತೇನೆ’ ಎಂದಿದ್ದಾರೆ.