ವಿಕ ಸುದ್ದಿಲೋಕ ಚನ್ನಗಿರಿಧರ್ಮ ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗದೆ ಸಮಾಜವನ್ನು ಸನ್ಮಾರ್ಗದಲ್ಲಿಮುನ್ನಡೆಸುವ ಶಕ್ತಿಯಾಗಬೇಕು. ಧರ್ಮ ಮತ್ತು ಸಮಾಜ ಒಂದಕ್ಕೊಂದು ಪೂರಕವಾಗಿವೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠದ ಸಭಾಂಗಣದಲ್ಲಿಗುರುವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
‘‘ಧಾರ್ಮಿಕ ಮೌಲ್ಯಗಳ ಜೊತೆಗೆ ಆಧುನಿಕ ಶಿಕ್ಷಣ ಜ್ಞಾನ ಮತ್ತು ಕೌಶಲ್ಯಗಳನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸುವ ಚಿಂತನೆ ಇರಬೇಕು. ಯುವಕರು ಸಂಸ್ಕೃತಿ, ಸಂಸ್ಕಾರ ಮತ್ತು ರಾಷ್ಟ್ರಪ್ರಜ್ಞೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುವಂತೆ ಪ್ರೇರೇಪಿಸಬೇಕು. ಜಾತಿ, ವರ್ಣ ಭೇದ ಭಾವಗಳನ್ನು ಮೀರಿ ಪರಸ್ಪರ ಗೌರವ ಪ್ರೀತಿ ಮತ್ತು ಸಹಬಾಳ್ವೆಯ ಮನೋಭಾವ ಬೆಳೆಯಬೇಕು’’ ಎಂದರು.
ಸಾನ್ನಿಧ್ಯ ವಹಿಸಿದ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘‘ನಾಡಿನ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು. ನೀರು, ಮರ, ಮಣ್ಣು ಮತ್ತು ಪ್ರಕೃತಿಯನ್ನು ರಕ್ಷಿಸುವುದು ಇಂದಿನ ಸಮಾಜದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ’’ ಎಂದರು.
ಕಾಶಿ ಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಮಾತನಾಡಿ, ‘‘ಯುವಜನರನ್ನು ದುಶ್ಚಟಗಳಿಂದ ದೂರವಿಟ್ಟು ಆರೋಗ್ಯಕರ ಹಾಗೂ ಸಾತ್ವಿಕ ಜೀವನದ ಕಡೆಗೆ ಕೊಂಡೊಯ್ಯುವ ಜಾಗೃತಿ ಮೂಡಿಸಬೇಕಾಗಿದೆ. ಸಮಾಜ ನಿರ್ಮಾಣದಲ್ಲಿಪುರುಷರು ಮತ್ತು ಮಹಿಳೆಯರು ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಾಗಿದೆ. ಆಧುನಿಕತೆ ಹೆಸರಿನಲ್ಲಿಪೂಜೆ ಹೋಮ ಹವನ ಯಜ್ಞ ಯಾಗಾದಿಗಳನ್ನು ವಿರೋಧಿಸುವ ಪ್ರವೃತ್ತಿ ಒಳ್ಳೆಯದಲ್ಲ. ಜನರ ಒಳಿತಿಗಾಗಿಯೇ ಇವೆಲ್ಲಆಚರಣೆಗಳು ಬೆಳೆದು ಬಂದಿವೆ’’ ಎಂದರು.
ಶಾಸಕ ಬಸವರಾಜು ಶಿವಗಂಗಾ, ಮಾಜಿ ಶಾಸಕರಾದ ಮಹಿಮಾ ಜೆ.ಪಟೇಲ್ , ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು. ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಸ್ವಾಮೀಜಿ, ವಿರಕ್ತಮಠದ ಡಾ.ಬಸವ ಜಯಚಂದ್ರ ಸ್ವಾಮೀಜಿ, ಡಾ.ಕೇದಾರ ಶಿವಶಾಂತವೀರ ಸ್ವಾಮೀಜಿ ಸೇರಿ 20 ಜನ ಮಠಾಧೀಶರು ಪಾಲ್ಗೊಂಡಿದ್ದರು. ‘ಗುರುಪಥ ದರ್ಶಿನಿ’ ಕೃತಿಯನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು.
-----
17ಸಿಎಚ್ ಎನ್ ಪಿ1
ಚನ್ನಗಿರಿಯ ಹಿರೇಮಠದ ಸಭಾಂಗಣದಲ್ಲಿಗುರುವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದಲ್ಲಿ‘ಗುರುಪಥ ದರ್ಶಿನಿ’ ಕೃತಿಯನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಬಿಡುಗಡೆಗೊಳಿಸಿದರು.