- ಸೆ. 22ರಂದು ಪ್ರಶಸ್ತಿ ಪ್ರಧಾನಭಾರತೀಯ ಚಿತ್ರರಂಗದ ಅತ್ಯುನ್ನತ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಕನ್ನಡದ ಮೇರುನಟ ಅನಂತನಾಗ್ ಆಯ್ಕೆಯಾಗಿದ್ದಾರೆ. ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿಸಕ್ರಿಯರಾಗಿದ್ದು, ಭಾರತೀಯ ಸಿನಿಮಾ ರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಬುಧವಾರ 2024ನೇ ಸಾಲಿನ ಗೌರವವನ್ನು ಘೋಷಿಸಿದೆ. ಸೆಪ್ಟೆಂಬರ್ 22ರಂದು ಗುಜರಾತ್ ನ ಕೆವಾಡಿಯಾದಲ್ಲಿನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಅನಂತನಾಗ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಲಾಗುತ್ತದೆ.
ಡಾ.ರಾಜ್ ಕುಮಾರ್ (1995) ಹಾಗೂ ಛಾಯಾಗ್ರಾಹಕ ವಿ.ಕೆ. ಮೂರ್ತಿ (2010) ಅವರ ನಂತರ ಪ್ರಶಸ್ತಿಗೆ ಭಾಜನರಾದ ಮೂರನೇ ಕನ್ನಡಿಗ ಎಂಬ ಕೀರ್ತಿಗೆ ಅನಂತನಾಗ್ ಅವರು ಪಾತ್ರರಾಗಿದ್ದಾರೆ. ಕನ್ನಡ, ಹಿಂದಿ, ತೆಲುಗು, ಮಲಯಾಳ, ತಮಿಳು ಹಾಗೂ ಮರಾಠಿ ಭಾಷೆಗಳಲ್ಲಿ300ಕ್ಕೂ ಅಧಿಕ ಸಿನಿಮಾಗಳಲ್ಲಿಅಭಿನಯಿಸಿರುವ ಅವರು, ಇತ್ತೀಚೆಗಷ್ಟೇ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ಚಿತ್ರರಂಗ ಮಾತ್ರವಲ್ಲದೆ ರಂಗಭೂಮಿ ಹಾಗೂ ರಾಜಕೀಯ ರಂಗದಲ್ಲೂಸಕ್ರಿಯರಾಗಿದ್ದ ಅನಂತನಾಗ್ , ವಿಧಾನ ಪರಿಷತ್ ಸದಸ್ಯರಾಗಿ, ಶಾಸಕರಾಗಿ ಹಾಗೂ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅನಂತನಾಗ್ ಅವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿ ‘‘ಅನಂತನಾಗ್ ಅವರ ಸಹಜ ಅಭಿನಯ ಮತ್ತು ಬಹುಮುಖ ಪ್ರತಿಭೆ ಭಾರತೀಯ ಚಿತ್ರರಂಗದ ಮೇಲೆ ಅವಿಸ್ಮರಣೀಯ ಛಾಪು ಮೂಡಿಸಿದೆ. ಅವರು ಅಭಿನಯಿಸಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ. ಇದು ಒಬ್ಬ ಶ್ರೇಷ್ಠ ಕಲಾವಿದನಿಗೆ ಸಲ್ಲಬೇಕಾದ ಅರ್ಹ ಗೌರವ’’ ಎಂದು ಹೇಳಿದ್ದಾರೆ.