ಡಾ. ಮೃತ್ಯುಂಜಯ ಕಪ್ಪಾಳಿಇಂಟ್ರೊ: ಧಾರಾವಾಡದಲ್ಲಿನಡೆದ ರಂಗೋತ್ಸವದಲ್ಲಿವಿಭಿನ್ನ ಭಾವಗಳನ್ನು ಮೀಟುವ ನಾಟಕಗಳು ಪ್ರದರ್ಶನಗೊಂಡವು.
ಒಳ್ಳೆಯ ರಂಗೋತ್ಸವವೆಂದರೆ ಒಂದಿಷ್ಟು ನಾಟಕಗಳನ್ನು ಒಂದರ ಹಿಂದೆ ಮತ್ತೊಂದು ಪ್ರದರ್ಶಿಸುವುದಲ್ಲ್ಲ. ಅದು ಪ್ರೇಕ್ಷಕನ ರಂಗಾನುಭವದ ಪರಿಧಿಯನ್ನು ವಿಸ್ತರಿಸಬೇಕು. ಒಂದು ಪ್ರದರ್ಶನ ನಗಿಸಿದರೆ, ಮತ್ತೊಂದು ಒಳಗೆ ಪ್ರಶ್ನೆಯೊಂದನ್ನು ಬಿತ್ತಬೇಕು; ಇನ್ನೊಂದು ಸೌಂದರ್ಯದ ಅನುಭೂತಿ ನೀಡಿದರೆ, ಮತ್ತೊಂದು ಬದುಕಿನ ಸಂಕೀರ್ಣತೆಯ ಎದುರು ನಿಲ್ಲಿಸಬೇಕು. ಅಲ್ಲಿಗೆ ರಂಗೋತ್ಸವ ಸಾರ್ಥಕ. ಇಂಥದ್ದೇ ಸಾರ್ಥಕ ಅನುಭವ ನೀಡಿದ್ದು ಧಾರವಾಡದ ಅಭಿನಯ ಭಾರತಿ ಮತ್ತು ಜನತಾ ಶಿಕ್ಷಣ ಸಮಿತಿ ಸಹಯೋಗದಲ್ಲಿಇತ್ತೀಚೆಗೆ ಧಾರಾವಾಡದಲ್ಲಿನಡೆದ ‘ ವಜ್ರಸಿರಿ ರಂಗೋತ್ಸವ ’. ದಿವಂಗತ ಪ್ರೊ. ನ. ವಜ್ರಕುಮಾರ ಸ್ಮರಣೆಯಲ್ಲಿಆಯೋಜಿಸಿದ್ದ ಉತ್ಸವ ಆರು ನಾಟಕಗಳನ್ನು ಧಾರವಾಡದ ಸಹೃದಯರ ಮುಂದಿಟ್ಟಿತು. ಎಲ್ಲವೂ ವಿಭಿನ್ನ ನೆಲೆಯಲ್ಲಿಪ್ರದರ್ಶನಗೊಂಡವು.
ಸಂಶಯಕ್ಕೂ ಒಂದು ರಂಗರೂಪ
ಬೆಳಗಾವಿಯ ರಂಗಸಂಪದ ತಂಡ ಪ್ರಸ್ತುತಪಡಿಸಿದ ಶ್ರೀರಂಗರ ‘ಗೆಳೆಯ ನಾನು ಹಳೆಯ ನೀನು’ ಡಾ. ಅರವಿಂದ ಕುಲಕರ್ಣಿ ನಿರ್ದೇಶನದಲ್ಲಿಗಮನ ಸೆಳೆಯಿತು. ಮೇಲ್ನೋಟಕ್ಕೆ ಇದು ಕಳೆದು ಹೋದ ಉಂಗುರದ ಕಥೆ. ಆದರೆ ಉಂಗುರ ಇಲ್ಲಿನೆಪ ಮಾತ್ರ. ನಾಟಕದ ನಿಜವಾದ ವಸ್ತು ಸಂಶಯ. ದುಷ್ಯಂತ ಶಕುಂತಲೆಯ ಉಂಗುರದ ನೆನಪನ್ನು ಎಲ್ಲೋ ಹಿನ್ನೆಲೆಯಲ್ಲಿಟ್ಟುಕೊಂಡೇ ಆಧುನಿಕ ದಾಂಪತ್ಯದೊಳಗೆ ಸಂಶಯ ಹೇಗೆ ಪ್ರವೇಶಿಸುತ್ತದೆ ಎಂಬುದನ್ನು ನಾಟಕ ವಿಡಂಬನಾತ್ಮಕವಾಗಿ ಅನಾವರಣಗೊಳಿಸುತ್ತದೆ. ಹಾಸ್ಯಕ್ಕಾಗಿ ಪಾತ್ರಗಳನ್ನು ವಿಕೃತಗೊಳಿಸದೆ, ಸಂದರ್ಭದೊಳಗಿಂದಲೇ ನಗುವನ್ನು ಹುಟ್ಟಿಸಲಾಗಿದೆ. ಗಂಡನ ಸಂಶಯಕ್ಕೆ ಎದುರಾಗಿ ಹೆಂಡತಿಯ ಪ್ರೀತಿಯ ವಿಶಾಲ ಗ್ರಹಿಕೆ ನಿಂತಾಗ ನಾಟಕ ಸರಳ ದಾಂಪತ್ಯ ಹಾಸ್ಯವಾಗಿ ಉಳಿಯುವುದಿಲ್ಲ. ಪ್ರೊಫೆಸರ್ ಪಾತ್ರ ಸಂಶಯಕ್ಕೆ ಪ್ರೇರಕವಾದರೆ, ಕೊಡೆ ಅದರ ದೃಶ್ಯರೂಪಕವಾಗುತ್ತದೆ. ಕೊನೆಯಲ್ಲಿಗಂಡ ಹೆಂಡತಿ ಒಂದಾಗಿ ಅದೇ ಕೊಡೆಯೊಂದಿಗೆ ನಿಲ್ಲುವುದು ಮತ್ತು ಅವರೊಂದಿಗೆ ಜೀವಂತಿಕೆಯ ಸಂಕೇತವಾಗಿ ಹೂಗಳು ಕಾಣಿಸಿಕೊಳ್ಳುವುದು ನಾಟಕದ ಸುಂದರ ದೃಶ್ಯಪ್ರತಿಮೆಗಳಲ್ಲಿಒಂದು. ಪ್ರಶ್ನೆ ಇರುವವರೆಗೆ ಸಂಶಯವಿದೆ. ಮನುಷ್ಯ ಸಂಬಂಧಗಳಲ್ಲಿಎಲ್ಲಪ್ರಶ್ನೆಗಳಿಗೂ ಅಂತಿಮ ಉತ್ತರ ಸಿಗುವುದಿಲ್ಲ. ಆದರೂ ಸಂಬಂಧ ಮುಂದುವರಿಯುತ್ತದೆ. ಇದೇ ನಾಟಕದ ಅಂತರಧ್ವನಿ. ಕೆಲವು ಸಂದರ್ಭಗಳಲ್ಲಿಸಂಭಾಷಣೆಯಲ್ಲಿರುವ ವಿಚಾರವನ್ನು ಮತ್ತೊಮ್ಮೆ ದೃಶ್ಯಾತ್ಮಕವಾಗಿ ವಿವರಿಸುವ ಪ್ರವೃತ್ತಿ ಕಡಿಮೆಯಾಗಿದ್ದರೆ ನಾಟಕ ಇನ್ನಷ್ಟು ಬಿಗಿಯಾಗಬಹುದಿತ್ತು. ಆದರೂ ಹಿತಮಿತವಾದ ರಂಗಸಜ್ಜಿಕೆ, ನಿಯಂತ್ರಿತ ಅಭಿನಯ ಮತ್ತು ರೂಪಕಗಳ ಬಳಕೆ ಪ್ರದರ್ಶನವನ್ನು ಪರಿಣಾಮಕಾರಿಯಾಗಿಸಿದವು.
ರಂಗಸಾಧಕನನ್ನು ರಂಗವೇ ನೆನಪಿಸಿಕೊಂಡಾಗ
ಶ್ರೀಪತಿ ಮಂಜನಬೈಲು ಮತ್ತು ಪ್ರಸಾದ ರಚನೆಯ ಡಾ. ನಾಗಾಭರಣ ನಿರ್ದೇಶನದ ನಾಟಕ ‘ಬಾಬಾ ಕಾರಂತ’. ಬಿ.ವಿ. ಕಾರಂತರಂತಹ ಬಹುಮುಖ ರಂಗಸಾಧಕನ ಬದುಕನ್ನು ನಾಟಕದ ಅವಧಿಯೊಳಗೆ ಹಿಡಿದಿಡುವುದು ಸುಲಭದ ಕೆಲಸವಲ್ಲ. ಜೀವನಚರಿತ್ರೆ ಹೇಳುವ ಆತುರ ಹೆಚ್ಚಾದರೆ ನಾಟಕ ದಾಖಲೆ ಚಿತ್ರವಾಗಬಹುದು; ನಾಟಕೀಯತೆಯನ್ನು ಹೆಚ್ಚಿಸಿದರೆ ವ್ಯಕ್ತಿಯ ನಿಜ ಸ್ವರೂಪ ಮಸುಕಾಗಬಹುದು.‘ಬಾಬಾ ಕಾರಂತ’ ಈ ಎರಡರ ನಡುವಿನ ಸಮತೋಲನ ಸಾಧಿಸಲು ಪ್ರಯತ್ನಿಸುತ್ತದೆ. ಕಾರಂತರ ವ್ಯಕ್ತಿತ್ವವನ್ನು ಅನುಕರಿಸುವುದಕ್ಕಿಂತ ಅವರೊಳಗಿನ ರಂಗಚೈತನ್ಯವನ್ನು ಹಿಡಿಯಲು ಪಾತ್ರ ಪ್ರಯತ್ನಿಸುವುದು ಪ್ರದರ್ಶನದ ಪ್ರಮುಖ ಶಕ್ತಿ. ಕಾರಂತರ ಪಾತ್ರಾಭಿನಯದಲ್ಲಿಕಂಡ ಜೀವಂತಿಕೆ ಒಂದು ಕಾಲಘಟ್ಟದ ಭಾರತೀಯ ರಂಗಭೂಮಿಯನ್ನು ನೆನಪಿಸುತ್ತದೆ. ಆದರೆ ಜೀವನಾಧರಿತ ನಾಟಕಗಳ ಸಹಜ ಮಿತಿ ಇಲ್ಲಿಯೂ ಕಾಣಿಸುತ್ತದೆ. ಘಟನಾವಳಿಗಳ ಆಯ್ಕೆ ಮತ್ತು ವ್ಯಕ್ತಿತ್ವದ ಅನೇಕ ಮುಖಗಳನ್ನು ಸೀಮಿತ ಅವಧಿಯಲ್ಲಿತೋರಿಸುವ ಅನಿವಾರ್ಯತೆಯಿಂದ ಕೆಲವು ಪ್ರಸಂಗಗಳು ಇನ್ನಷ್ಟು ಆಳಕ್ಕೆ ಇಳಿಯುವ ಮುನ್ನವೇ ಮುಂದಕ್ಕೆ ಸಾಗುತ್ತವೆ.ಆದರೂ ರಂಗಭೂಮಿಯೇ ತನ್ನ ಮಹಾನ್ ಸಾಧಕನಿಗೆ ಸಲ್ಲಿಸಿದ ಸ್ಮರಣನಮನದಂತೆ ‘ಬಾಬಾ ಕಾರಂತ’ ಮನಸ್ಸಿಗೆ ಹತ್ತಿರವಾಗುತ್ತದೆ.
ಇದೇ ಸಂದರ್ಭದಲ್ಲಿಗಮನ ಸೆಳೆದ ನಾಟಕಗಳೆಂದರೆ ಡಾ. ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’. ಬಿ.ವಿ. ಕಾರಂತರ ಮೂಲ ನಿರ್ದೇಶನದ ಈ ಕೃತಿಯನ್ನು ಡಾ. ನಾಗಾಭರಣ ಪ್ರಸ್ತುತಿಗೊಳಿಸಿದರು. ಇದು ಜಾನಪದ, ಸಂಗೀತ ಮತ್ತು ಸಾಮಾಜಿಕ ಒಳನೋಟವನ್ನು ಸಾಮೂಹಿಕ ರಂಗಾನುಭವವಾಗಿ ರೂಪಿಸಿತು.
ಬೆಂಗಳೂರಿನ ಬೆನಕ ತಂಡ ಪ್ರದರ್ಶಿಸಿದ ಗಿರೀಶ ಕಾರ್ನಾಡರ ‘ಹಯವದನ’ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಡಾ. ಟಿ.ಎಸ್ . ನಾಗಾಭರಣ ಅವರ ಮರುಪ್ರಸ್ತುತಿಯಲ್ಲಿಕಾರ್ನಾಡರ ಪ್ರಸಿದ್ಧ ಕೃತಿ ಮತ್ತೊಮ್ಮೆ ರಂಗದ ಮೇಲೆ ಜೀವಂತವಾಯಿತು. ಡಾ. ಶ್ರೀಪಾದ ಭಟ್ ನಿರ್ದೇಶನದ, ಪ್ರೊ. ಶಿವಕುಮಾರ ಮಾವಲಿ ರಚನೆಯ ನಾಟಕ ‘ದಿ ಪೆನ್ ’. ಇದನ್ನು ಶಿವಮೊಗ್ಗೆಯ ಹೊಂಗಿರಣ ತಂಡ ಪ್ರದರ್ಶಿಸಿತು. ಪಂ. ಪ್ರವೀಣ ಗೋಡ್ಖಿಂಡಿ ಅವರ ರಚನೆ, ನಿರ್ದೇಶನದ ‘ಕೊಳಲು.್ಚಟಞ(ಛಿdy)’ ರಂಗದ ಮೇಲೆ ಹಾಸ್ಯದ ಲೋಕವೊಂದನ್ನು ಕಟ್ಟಿಕೊಡುವಲ್ಲಿಯಶಸ್ವಿ ಆಯಿತು.
//////////////
ಮನಸೂರೆಗೊಂಡ ಟು ಬೈ ಪುಣ್ಯ
ಸಾಯಿಭದ್ರಾ ರೈ
ಕನ್ನಡ ಸಂಘ ಪುಣೆ ಹಾಗೂ ಕಾವೇರಿ ಕಲಾಕ್ಷೇತ್ರ ಮತ್ತು ಪುಣ್ಯ ಡಾಸ್ಸ್ ಕಂಪನಿ ಸಹಯೋಗದಲ್ಲಿನಡೆದ ‘ಟು ಬೈ ಪುಣ್ಯ’ ಕಾರ್ಯಕ್ರಮ ಕಲಾ ರಸಿಕರ ಸೆಳೆಯಿತು.
ಕಾರ್ಯಕ್ರಮದ ಮೊದಲ ಪ್ರದರ್ಶನವಾಗಿ ‘ಆಭಾ’ ನೃತ್ಯರೂಪಕ ಪ್ರದರ್ಶನಗೊಂಡಿತು. ಸಾಂಪ್ರದಾಯಿಕ ಮಾರ್ಗಂ ಶೈಲಿಯಲ್ಲಿರೂಪುಗೊಂಡಿರುವ ಈ ಕೃತಿಯಲ್ಲಿಉತ್ತರ ರಾಮಾಯಣ ಹಾಗೂ ಲವಕುಶರ ಕಥಾನಕ ಸೇರಿದಂತೆ ರಾಮಾಯಣದ ವಿವಿಧ ಆಯಾಮಗಳನ್ನು ‘ತೌಲನಿಕ ಮೀಮಾಂಸೆ’ಯ ತತ್ತ$್ವದ ಮೂಲಕ ಅನಾವರಣಗೊಳಿಸಲಾಯಿತು. ನಂತರ ಗಿರೀಶ್ ಕಾರ್ನಾಡರ ‘ನಾಗಮಂಡಲ’ ನೃತ್ಯ ನಾಟಕವನ್ನು ಪ್ರದರ್ಶಿಸಲಾಯಿತು. ಉತ್ತರ ಕರ್ನಾಟಕದ ಗೀಗಿ ಪದ ಸಂಪ್ರದಾಯದ ಪ್ರೇರಣೆಯೊಂದಿಗೆ ರೂಪುಗೊಂಡಿರುವ ಈ 50 ನಿಮಿಷಗಳ ಕೃತಿಯು ಪ್ರೀತಿ, ಬಯಕೆ, ಅಸ್ತಿತ್ವ ಹಾಗೂ ಪಿತೃಪ್ರಧಾನ ವ್ಯವಸ್ಥೆಯಂತಹ ಸೂಕ್ಷ್ಮ ವಿಚಾರಗಳನ್ನು ತೆರೆದಿಟ್ಟಿತು. ‘ಟು ಬೈ ಪುಣ್ಯ’ ಪುಣೆಯ ಈ ವರ್ಷದ ಗಮನಾರ್ಹ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಲ್ಲಿಒಂದಾಗಿ ಮೂಡಿಬಂದಿದ್ದು, ಶಾಸ್ತ್ರೀಯ ಕಲೆಯೊಂದಿಗೆ ಸಮಕಾಲೀನ ಅಭಿವ್ಯಕ್ತಿಯನ್ನು ಬೆಸೆಯುವ ಪುಣ್ಯ ಡಾಸ್ಸ್ ಕಂಪನಿಯ ಪ್ರಯತ್ನಕ್ಕೆ ರಸಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.