ಕಸ್ತೂರಿರಂಗನ್ ವರದಿ ಸಾಧಕ-ಬಾಧಕಗಳ ಸಭೆ ವಿವಿಧ ಕ್ಷೇತ್ರಗಳ ಗಣ್ಯರಿಂದ ಸಿಎಂಗೆ ಬೇಡಿಕೆ ಸಲ್ಲಿಕೆ

Contributed byvkhebri@gmail.com|Vijaya Karnataka
kasturirangan report protest to cm huge public demands
ವಿಕ ಸುದ್ದಿಲೋಕ ಹೆಬ್ರಿ

ಕಸ್ತೂರಿರಂಗನ್ ವರದಿ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕರೊಂದಿಗೆ ನೇರ ಸಂವಾದ ಸಭೆಯನ್ನು ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿಶುಕ್ರವಾರ ನಡೆಸಿದರು.
ಕಾರ್ಕಳ, ಹೆಬ್ರಿ, ಬೈಂದೂರು, ಕುಂದಾಪುರ ತಾಲೂಕಿನ 24 ಗ್ರಾಪಂ ವ್ಯಾಪ್ತಿಯ 35 ಗ್ರಾಮಗಳ ಬಾಧಿತ ಜನರು ಪಾಲ್ಗೊಂಡಿದ್ದರು. ಸಭೆಯಲ್ಲಿಹಲವು ಗಣ್ಯರು ನಾನಾ ಬೇಡಿಕೆಗಳನ್ನಿಟ್ಟರು.

ನಾಡ್ಪಾಲು ಗ್ರಾಪಂ ಮಾಜಿ ಅಧ್ಯಕ್ಷ ದಿನೇಶ್ ಹೆಗ್ಡೆ ನಾಡ್ಪಾಲು ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಕಸ್ತೂರಿರಂಗನ್ ವರದಿ ಅನುಷ್ಠಾನ ಜನರಲ್ಲಿಆತಂಕ ಮೂಡಿಸಿದೆ. ಕೃಷಿ ಬದುಕಿಗೆ, ಇಲ್ಲಿನ ಮೂಲ ನಿವಾಸಿಗಳಿಗೆ ಆಗುವ ತೊಂದರೆಗಳ ಕುರಿತು ಆತಂಕ ನಿವಾರಿಸಿ ಜನರಿಗೆ ಸಮಸ್ಯೆಯಾಗದಂತೆ ವರದಿ ಅನುಷ್ಠಾನವಾಗಲಿ ಎಂದರು.

ಉದ್ಯಮಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಗೆ ತರುವ ಮುನ್ನ ವರದಿ ವ್ಯಾಪ್ತಿಗೆ ಬರುವ ಪರಿಸರ ಸೂಕ್ಷತ್ರ್ಮವಲಯ, ಅರಣ್ಯ ಪ್ರದೇಶ, ಕಂದಾಯ ಭೂಮಿ ಮತ್ತು ಜನವಸತಿ ಪ್ರದೇಶದ ಭೌತಿಕ ಸರ್ವೆ ನಡೆಸಿ ವರದಿ ಕುರಿತು ಇರುವ ಭೀತಿಗೆ ತಾತ್ವಿಕ ಅಂತ್ಯ ಹಾಡಬೇಕು. ಹೆಬ್ರಿ ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣ ವ್ಯವಸ್ಥೆ ಮಾಡಬೇಕು. ಕಾರ್ಕಳದಲ್ಲಿತುಳು ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು. ಯಕ್ಷಗಾನ ಕಲಾವಿದರಿಗೆ, ದೈವ ಚಾಕರಿ ಮಾಡುವವರಿಗೆ ಮಾಸಾಶನ ನೀಡಬೇಕು ಎಂದರು.

ಜಿಲ್ಲಾರೈತ ಸಂಘ ಮುಖಂಡ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಕಸ್ತೂರಿರಂಗನ್ ವರದಿಯನ್ನು ಪರಿಸರ ಸೂಕ್ಷತ್ರ್ಮ ವಲಯ, ಸಾಮಾಜಿಕ ಅರಣ್ಯ, ಬಫರ್ ಝೋನ್ ಮೀಸಲು ಅರಣ್ಯ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ಕೃಷಿ ಭೂಮಿ, ಅರಣ್ಯ ನಿವಾಸಿಗಳು ಮತ್ತು ಜನವಸತಿ ಪ್ರದೇಶಗಳನ್ನು ವರದಿ ವ್ಯಾಪ್ತಿಯಿಂದ ಹೊರಗಿಡಿ ಎಂದರು.

ಅಕ್ರಮ ಸಕ್ರಮ ಸಮಿತಿ ಸದಸ್ಯ ನವೀನ್ ಕೆ.ಅಡ್ಯಂತಾಯ ಮಾತನಾಡಿ, ಅರಣ್ಯ ಭಾಗದಲ್ಲಿವಾಸಿಸುವ ಜನರಿಗೆ ಕೃಷಿ ಭೂಮಿ, ಮನೆ ಕಟ್ಟಲು ತೊಂದರೆಯಾಗುತ್ತಿದೆ. ಹೆಬ್ರಿ ತಾಲೂಕಿನಲ್ಲಿಅಕ್ರಮ ಸಕ್ರಮ, 94ಸಿ, 94ಸಿಸಿ, ಕಂದಾಯ ಭೂಮಿಯಲ್ಲಿಪರಂಬೋಕು ಅರಣ್ಯ ಸೇರಿರುವ ಮೊದಲಾದ ಸಮಸ್ಯೆಗಳಿಂದ ನಿವಾಸಿಗಳಿಗೆ ಹಕ್ಕುಪತ್ರ ದೊರೆಯುತ್ತಿಲ್ಲಎಂದರು.

ಆದಿವಾಸಿ ಸಮುದಾಯದ ಮುಖಂಡ ಶ್ರೀಧರ ಗೌಡ ಮಾತನಾಡಿ, ದಶಕಗಳಿಂದ ಪಶ್ಚಿಮಘಟ್ಟ ಪ್ರದೇಶಗಳಲ್ಲಿವಾಸಿಸುವ ಆದಿವಾಸಿಗಳು, ರೈತರು, ಮಲೆಕುಡಿಯರ ಜೀವನ ವಿಶೇಷ ಆರ್ಥಿಕ ವಲಯ, ಹುಲಿ ಯೋಜನೆ ಮೊದಲಾದ ವರದಿ ಜಾರಿಯಿಂದ ನಿರ್ಭೀತ ಜೀವನ ಕಷ್ಟಸಾಧ್ಯವಾಗಲಿದೆ. ಆದಿವಾಸಿಗಳು ಪ್ರಕೃತಿಯನ್ನು ಉಳಿಸಿ ಬೆಳೆಸುವವರಾಗಿದ್ದು, ನೆಲ, ಜಲ, ಸಂರಕ್ಷಣೆ ನಮ್ಮಿಂದಲೇ. ನಮ್ಮನ್ನು ಕಡೆಗಣಿಸಬೇಡಿ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್ , ಶಾಸಕರಾದ ವಿ.ಸುನಿಲ್ ಕುಮಾರ್ , ಯಶಪಾಲ್ ಎ.ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಬಿ.ರಮಾನಾಥ ರೈ, ಗೋಪಾಲ ಪೂಜಾರಿ, ವಿನಯ ಕುಮಾರ್ ಸೊರಕೆ, ಮಂಜುನಾಥ್ ಪೂಜಾರಿ, ಕೆ.ಜಯಪ್ರಕಾಶ ಹೆಗ್ಡೆ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸ್ವಾಗತಿಸಿದರು. ಕೆ.ಸಿ.ರಾಜೇಶ್ ಹಾಗೂ ಡಾ.ರೋಷನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಶ್ರೀನಿವಾಸಲು ಪ್ರಾಸ್ತಾವಿಕ ಮಾತನಾಡಿದರು.

ವರದಿ ತಿರಸ್ಕಾರ: ರೆಡ್ಡಿ

ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಕಸ್ತೂರಿರಂಗನ್ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಿದ್ದು ವಿಧಾನಸಭೆಯಲ್ಲಿಉತ್ತರ ನೀಡಲಾಗಿದೆ. ಸೆ.21ರಿಂದ 23ರವರೆಗೆ ವಿಧಾನಸಭೆ ವಿಶೇಷ ಅಧಿವೇಶನ ನಡೆಯಲಿದ್ದು, ಕಸ್ತೂರಿರಂಗನ್ ವರದಿ ಹಾಗೂ ಬರಗಾಲದ ಬಗ್ಗೆ ಚರ್ಚಿಸಲಾಗುವುದು. ಜನರಿಗೆ ಆತಂಕ ಬೇಡ ಎಂದರು.

ಭೌತಿಕ ಸಮೀಕ್ಷೆ ನಡೆಸಿ: ಟಿ.ಬಿ.ಶೆಟ್ಟಿ

ಕುಂದಾಪುರದ ನ್ಯಾಯವಾದಿ ಟಿ.ಬಿ.ಶೆಟ್ಟಿ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಗಾಗಿ ಕೇಂದ್ರ ಸರಕಾರ 7ನೇ ಅಧಿಸೂಚನೆ ಹೊರಡಿಸಿದ್ದು, ಪರಿಸರ ಸೂಕ್ಷ್ಮ ವಲಯದಲ್ಲಿ47 ಗ್ರಾಮಗಳಿರುವುದು ಜನಜೀವನಕ್ಕೆ ಮಾರಕ. ಕೇರಳ ಸರಕಾರ ಉನ್ನತ ಸಮಿತಿ ರಚಿಸಿ ಭೌತಿಕ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ 3,200 ಕಿ.ಮೀ. ಕೈಬಿಡಲಾಗಿದೆ. ಕರ್ನಾಟಕದಲ್ಲಿಕೂಡ ಭೌತಿಕ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಕಾಡು ನಾಡು ಬೇರ್ಪಡಿಸಲು ಸಮೀಕ್ಷೆ ನಡೆಸಿ: ಕೋಟ

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕೇಂದ್ರ ರಾಜ್ಯ ಪರಸ್ಪರ ದೂರು, ಆರೋಪದ ಬದಲು ಸಮಸ್ಯೆ ಪರಿಹಾರಕ್ಕೆ ಆಡಳಿತ ಪ್ರತಿಪಕ್ಷಗಳು ಒಂದಾಗಬೇಕು. ಕಾಡು ನಾಡು ಬೇರ್ಪಡಿಸಿದ ಕೇರಳದ ಉಮರ್ ಸಮಿತಿ ಮಾದರಿಯಲ್ಲಿರಾಜ್ಯದಲ್ಲೂತಜ್ಞರ ಸಮಿತಿ, ಸಮೀಕ್ಷೆ ನಡೆಸಿ ಕೇಂದ್ರ, ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಲು ನಮ್ಮ ಸಹಕಾರವಿದೆ ಎಂದರು.

ವಸತಿ, ಕೃಷಿ ಪ್ರತ್ಯೇಕಿಸಿ: ಸುನಿಲ್

ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ, ಕಸ್ತೂರಿರಂಗನ್ ವರದಿ ಸಹಿತ ಅರಣ್ಯ ಕಾಯಿದೆ/ ಯೋಜನೆಗಳಿಂದ ಜನರು ಹೈರಾಣಾಗಿದ್ದಾರೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿಯಾವುದೇ ಚಟುವಟಿಕೆ ಸಾಧ್ಯವಿಲ್ಲ. ಸರಕಾರದ ತಿರಸ್ಕಾರಕ್ಕೆ ಸಕಾರಣ ಇಲ್ಲದಿದ್ದರೆ ಸುಪ್ರೀಂ ಒಪ್ಪದು. ಗ್ರಾಮ ಸಮಿತಿ ರಚಿಸಿ ಜನ ವಸತಿ, ಕೃಷಿ ಪ್ರತ್ಯೇಕಿಸಿ ಸಮೀಕ್ಷೆ ನಡೆಸಿ. ಟೂರಿಸಂ ಮತ್ತು ಮ್ಯಾನೇಜ್ಮೆಂಟ್ ಪ್ಲಾನ್ ಮಾಡಿ ಎಂದು ಒತ್ತಾಯಿಸಿದರು. ಹೆಬ್ರಿ ನೂತನ ತಾಲೂಕಿಗೆ ತಾಲೂಕು ಆಸ್ಪತ್ರೆ, ಇಎಸ್ ಐ ಆಸ್ಪತ್ರೆ ಮಂಜೂರು ಮಾಡಿ ಎಂದು ಬೇಡಿಕೆ ಮುಂದಿಟ್ಟರು.

ಪರಿಸರದ ಜತೆಗೆ ಜನರೂ ಉಳಿಯಬೇಕು: ರಿಜ್ವಾನ್

ಉಡುಪಿ ಜಿಲ್ಲಾಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಪರಿಸರವೂ ಉಳಿಯಬೇಕು, ನಾವೂ ಉಳಿಯಬೇಕು. ಕಾಡು, ನದಿ, ಬೆಟ್ಟದ ಜತೆಗೆ ಮನುಷ್ಯರೂ ಬದುಕಬೇಕು. ನಾಡಿನ ಜನರ ವಿರುದ್ಧ ಯಾವುದೇ ಕಾನೂನು ಬಂದರೂ ಎದುರಿಸುತ್ತೇವೆ. ಸರಕಾರ ಜನರ ಜತೆಗಿದೆ ಎಂದರು.

ಫೊಟೋ: 18ಕೆಬಿ ಹೆಬ್ರಿ 1, 2, 3