ಮಳೆ ಕೊರತೆಯಿಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಬರ ಘೋಷಣೆ ವೇಳೆ ಸರಕಾರ ಇದನ್ನು ಪರಿಗಣಿಸಿಲ್ಲ. ಹೀಗಾಗಿ ಕೂಡಲೇ ಧಾರವಾಡ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪ್ರತಿ ಎಕರೆಗೆ 50ಸಾವಿರ ರೂ. ಪರಿಹಾರ ಬಿಡುಗಡೆ ಮಾಡಬೇಕು ಎಂದು ಮಾಜಿ ಶಾಸಕ ಅಮೃತ್ ದೇಸಾಯಿ ಆಗ್ರಹಿಸಿದರು.
ನಗರದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಎಲ್ಲತಾಲೂಕುಗಳಂತೆ ಇಲ್ಲಿಯೂ ಮಳೆ ಆಗಿಲ್ಲ. ಆದರೂ ಆರಂಭದಲ್ಲಿಸುರಿದ ಮಳೆ ನಂಬಿದ ರೈತರು ಉದ್ದು, ಸೋಯಾಬಿನ್ ನಂತಹ ಬೆಳೆ ಬಿತ್ತನೆ ಮಾಡಿದ್ದಾರೆ. ನಂತರದಲ್ಲಿಮಳೆ ಸುರಿಯದ್ದರಿಂದ ತೇವಾಂಶ ಇಲ್ಲದೆ ಬೆಳೆಗಳು ಒಣಗಿವೆ. ಬಿತ್ತನೆಗೆ ಮಾಡಿದ ಖರ್ಚು ಕೂಡ ಸಿಕ್ಕಿಲ್ಲ. ಈ ಅಂಶವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿಭ್ರಷ್ಟಾಚಾರ ಮಿತಿಮೀರಿದೆ. ಧಾರವಾಡ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ್ ಅವರು 50 ಲಕ್ಷ ಹಣ ಪಡೆಯುವವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿಕೆಲ ಪ್ರಭಾವಿಗಳೂ ಭಾಗಿಯಾಗಿರುವ ಸಂದೇಹಗಳಿವೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಭ್ರಷ್ಟಾಚಾರದಲ್ಲಿಭಾಗಿಯಾಗಿರುವ ರಾಜಕೀಯ ಮುಖಂಡರನ್ನೂ ಬಂಧಿಸಬೇಕು ಎಂದರು.
ಹೊಸವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯಿಂದ ಎದುರಿಸುತ್ತಿರುವ ಸಮಸ್ಯೆ ಬಗೆಹರಿಸಿ ಪರಿಹಾರ ನೀಡಬೇಕು. ವೃದ್ಧಾಪ್ಯ, ಅಂಗವಿಕಲ ಹಾಗೂ ವಿಧವಾ ಪಿಂಚಣಿಗಳು ಧಾರವಾಡ ತಾಲೂಕಿನಲ್ಲಿಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ. ತಾಂತ್ರಿಕ ಕಾರಣ ನೀಡಿ ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಪರಿಣಾಮ ಬಡ ಫಲಾನುಭವಿಗಳು ತೊಂದರೆಗೆ ಸಿಲುಕಿದ್ದಾರೆ. ಸರಕಾರ ಕೂಡಲೇ ಬಾಕಿ ಇರುವ ಪಿಂಚಣಿ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಎಲ್ಲಬೇಡಿಕೆಗೆ ತಕ್ಷಣ ಸ್ಪಂದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿಮಾಜಿ ಶಾಸಕಿ ಸೀಮಾ ಮಸೂತಿ, ಶಂಕರ ಮುಗದ, ಶಂಕರ ಶೇಳಕೆ, ಶಂಕರಕುಮಾರ ದೇಸಾಯಿ, ಮಹದೇವಪ್ಪ ದಂಡಿನ, ಸಿದ್ದನಗೌಡ ಪಾಟೀಲ ಇತರರಿದ್ದರು.
.....ಬಾಕ್ಸ್ ...
ಪ್ರತ್ಯಕ ಪಾಲಿಕೆ ಬಗ್ಗೆ ಮೌನ ಏಕೆ?:
ಧಾರವಾಡ ಪ್ರತ್ಯೇಕ ಪಾಲಿಕೆ ರಚಿಸುವ ವಿಚಾರದಲ್ಲಿಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ರಾಜ್ಯಪಾಲರ ಒಪ್ಪಿಗೆ ಪಡೆಯುವಲ್ಲೂಅವರ ಪಾತ್ರ ಹಿರಿದಾಗಿದೆ. ಆದರೆ, ಬೆಂಗಳೂರಿನಲ್ಲಿಕುಳಿತ ಕೆಲವರು ಪ್ರತ್ಯೇಕ ಪಾಲಿಕೆ ನಾವೇ ಮಾಡಿದ್ದು ಎಂದು ಹೇಳಿಕೊಂಡಿದ್ದರು. ಇನ್ನೇನು ಪಾಲಿಕೆ ವಿಭಜನೆ ಆಗಿಯೇ ಬಿಡಲಿದೆ ಎಂದು ಹೇಳಿದ್ದರು. ಆದರೆ, ಅವರೀಗ ಊರಲ್ಲಿಯೇ ಓಡಾಡುತ್ತಿದ್ದಾರೆ. ಅವರು ಏನು ಮಾಡಿದ್ದಾರೆ? ಹೋರಾಟಗಾರರು ಗಡುವು ನೀಡಿದ್ದರೂ ಮೌನ ವಹಿಸಿದ್ದಾರೆ ಎಂದು ಮಾಜಿ ಶಾಸಕ ಅಮೃತ ದೇಸಾಯಿ ಹರಿಹಾಯ್ದರು.