ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಆಲಿಸಲು ಸೆ.19ರಂದು ಬಾಳೆಹೊನ್ನೂರಿಗೆ ಆಗಮಿಸಲಿದ್ದು, ಆ ಸಂದರ್ಭ ಮಲೆನಾಡಿನ ಭೂ ಹಿಡುವಳಿ, ಕಾಡು ಪ್ರಾಣಿ ಹಾವಳಿ ಕುರಿತ ಎಲ್ಲಸಮಸ್ಯೆಗಳ ಕುರಿತು ಚರ್ಚಿಸಿ ಸಮಸ್ಯೆ ಪರಿಹರಿಸಲು ಕೋರಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಕುನ್ನಳ್ಳಿ ಹೇಳಿದರು.ಅವರು ಶುಕ್ರವಾರ ಸುದ್ದಿಗೋಷ್ಢಿಯಲ್ಲಿಮಾತನಾಡಿ, ಕಸ್ತೂರಿರಂಗನ್ ವರದಿ ಅನುಷ್ಠಾನದಿಂದ ಮಲೆನಾಡಿನ ಜನರು ಹಾಗೂ ಕೃಷಿಕರಿಗೆ ತೀವ್ರ ತೊಂದರೆ ಎದುರಾಗುತ್ತದೆ. ಫಾರಂ ನಂ. 50, 53, 57ರ ಅರ್ಜಿ ವಿಲೆ, ಕಾಫಿ ಬೆಳೆಗಾರರ ಸಮಸ್ಯೆಗಳು, ಅರಣ್ಯ ಹಾಗೂ ಕಂದಾಯ ಭೂಮಿ ವಿಚಾರ, ರಸ್ತೆ ಮತ್ತು ಮೂಲಸೌಕರ್ಯ, ಕಾಡು ಪ್ರಾಣಿಗಳ ಹಾವಳಿ, ಬೆಳೆಗಳಿಗೆ ಸೂಕ್ತ ಬೆಲೆ ಸೇರಿದಂತೆ ಮಲೆನಾಡಿನ ಹಲವು ಸಮಸ್ಯೆಗಳ ಕುರಿತು ಮುಖ್ಯಮಂತ್ರಿಯವರ ಮುಂದೆ ನೇರವಾಗಿ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.
ಗೋಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ ಮಾತನಾಡಿ, ಹಲವು ವರ್ಷದಿಂದ ಬಗೆಹರಿಯದೆ ಉಳಿದಿರುವ ಸಮಸ್ಯೆಗಳಿಗೆ ಸರಕಾರದಿಂದ ಶಾಶ್ವತ ಪರಿಹಾರ ದೊರಕಿಸಲು ಜಿಲ್ಲೆಯ ಎಲ್ಲಶಾಸಕರು » ಮುಖ್ಯಮಂತ್ರಿಯವರ ಗಮನ ಸೆಳೆಯಲಿದ್ದಾರೆ. ರೈತರು, ಬೆಳೆಗಾರರು ಹಾಗೂ ವಿವಿಧ ಪಕ್ಷಗಳ ಮುಖಂಡರು ಪಕ್ಷ ಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಿ ಜಿಲ್ಲೆಯ ಸಮಸ್ಯೆಗಳನ್ನು ಮಂಡಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಮುಖಂಡರಾದ ಸುಬ್ರಹ್ಮಣ್ಯ, ರಘು ಮಗ್ಗಲಮಕ್ಕಿ, ಯಾಕೂಬ್ , ಜಯಮ್ಮ, ಅನಿಲ್ ಗುತ್ತಿ, ಅರುಣ್ ಉಪಸ್ಥಿತರಿದ್ದರು.