ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Contributed bysrameshshashitnp@gmail.com|Vijaya Karnataka
Vijay Karnataka
ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

ವಿಕ ಸುದ್ದಿಲೋಕ ತಿ.ನರಸೀಪುರ
ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯಗಳನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು, ಸಂವಿಧಾನ ನೀಡಿರುವ ಹಕ್ಕುಗಳನ್ನು ಸಮರ್ಥವಾಗಿ ಬಳಸುವುದರ ಜತೆಗೆ ಕರ್ತವ್ಯಗಳನ್ನೂ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲು ಸಾಧ್ಯ ಎಂದು ಪ್ರಾಧ್ಯಾಪಕ ಮಂಜು ಹೇಳಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಹಯೋಗದಲ್ಲಿಆಯೋಜಿಸಿದ್ದ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

‘‘ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶ ಕಲ್ಪಿಸುವುದರ ಜತೆಗೆ, ತನ್ನ ಪ್ರತಿನಿಧಿಯನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಮಹತ್ವದ ಹಕ್ಕನ್ನು ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿದೆ. ಹೀಗಾಗಿ ಮತದಾನದ ಮಹತ್ವವನ್ನು ಅರಿತುಕೊಳ್ಳಬೇಕು. ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಹಾಗೂ ಸಹೋದರತ್ವವನ್ನು ಜೀವನದಲ್ಲಿಅಳವಡಿಸಿಕೊಂಡು ಸಮಾಜದಲ್ಲಿಬೆಳೆಸಬೇಕು,’’ ಎಂದು ತಿಳಿಸಿದರು.

ವಿಚಾರವಾದಿ ಕೆ.ಎನ್ . ಪ್ರಭುಸ್ವಾಮಿ ಮಾತನಾಡಿ, ‘‘ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಹಿಂಸೆಯ ಮಾರ್ಗಕ್ಕಿಂತ ಪ್ರಜಾಪ್ರಭುತ್ವದ ಮಾರ್ಗವೇ ಪರಿಣಾಮಕಾರಿ ಹಾಗೂ ಶ್ರೇಷ್ಠವಾಗಿದೆ. ಡಾ.ಬಿ.ಆರ್ . ಅಂಬೇಡ್ಕರ್ ಅವರು ಸಾಮಾಜಿಕ ಪರಿವರ್ತನೆಗೆ ರಕ್ತರಹಿತ ಕ್ರಾಂತಿಯ ರೂಪದಲ್ಲಿಪ್ರಜಾಪ್ರಭುತ್ವದ ಮಾರ್ಗವನ್ನು ಪ್ರತಿಪಾದಿಸಿದ್ದರು,’’ ಎಂದರು.

‘ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವ ಸರ್ಕಾರ’ ಎಂಬ ಅಬ್ರಹಾಂ ಲಿಂಕನ್ ಅವರ ವ್ಯಾಖ್ಯಾನ ಪ್ರಜಾಪ್ರಭುತ್ವದ ಮೂಲ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಆಡಳಿತದ ಕೇಂದ್ರದಲ್ಲಿಜನರೇ ಇರಬೇಕು. ಅವರ ಹಕ್ಕುಗಳು, ಆಶಯಗಳು ಹಾಗೂ ಅಗತ್ಯಗಳಿಗೆ ಸರಕಾರ ಆದ್ಯತೆ ನೀಡಬೇಕು,’’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ರಂಗಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕಾಧಿಕಾರಿ ಕೆ.ಡಿ. ವಿನುತಾ, ಬಿಆರ್ ಸಿ ನಾಗೇಶ್ , ಉಪ ತಹಸೀಲ್ದಾರ್ ರಾಜಾಕಾಂತ್ , ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎಚ್ .ವಿ. ಉದಯ್ ಕುಮಾರ್ , ಬನ್ನೂರು ಪುರಸಭೆ ಮುಖ್ಯಾಧಿಕಾರಿ ಸತೀಶ್ , ತಲಕಾಡು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಲಕ್ಷ್ಮಿ, ವಕೀಲರ ಸಂಘದ ಅಧ್ಯಕ್ಷ ಜಗದೀಶ್ , ಅಂಬೇಡ್ಕರ್ ಸಂಘದ ಅಧ್ಯಕ್ಷ ಕರೋಹಟ್ಟಿ ಮಾದೇವಯ್ಯ, ಕೆ.ಎನ್ . ಪ್ರಭುಸ್ವಾಮಿ, ಜಗದೀಶ್ , ಶಿವಕುಮಾರ್ ಬಡ್ಡು ಸೋಸಲೆ, ಮೂಗೂರು ಸಿದ್ದರಾಜು ಇತರರಿದ್ದರು.