ಉತ್ತರ ಕರ್ನಾಟಕದ ಬಾಣಂತನ

Contributed bybabitha.salian@timesgroup.com|Vijaya Karnataka
Vijay Karnataka
ಉತ್ತರ ಕರ್ನಾಟಕದ ಬಾಣಂತನ

ಸೌಮ್ಯಶ್ರೀ ವಿಜಯ್ , ಬೆಂಗಳೂರು
ರಾಯಚೂರು ಜಿಲ್ಲೆಯಲ್ಲಿರುವ ನಮ್ಮೂರು ಲಿಂಗಸುಗೂರು ಕಡೆ ‘ಬಸುರಿ ಹೆಣ್ಣಿಗೆ ತಿನ್ನಬೇಕೆನಿಸಿದ್ದೆಲ್ಲಾ ತಿನ್ಸಿ, ಇಲ್ಲಂದ್ರೆ ಹೊಟ್ಯಾಗಿರೋ ಕೂಸಿನ ಕಿವಿ ಸೋರ್ತದ’ ಎಂದು ಹೆರಿಗೆಯಾಗುವವರೆಗೂ ಬಯಸಿದ್ದೆಲ್ಲಾ ತಿಂದು ಆರಾಮಾಗಿರ್ತಾರೆ ಗರ್ಭಿಣಿಯರು. ಹೆರಿಗೆಯಾದ ಮಾರನೇ ದಿನದಿಂದ ಶುರುವಾಗುತ್ತದೆ ನೋಡಿ ದಿಗ್ಬಂಧನದ ಬದುಕು. ನಸುಕು 3 ಅಥವಾ ಧಿ4 ಗಂಟೆಗೆ ಏಳಬೇಕು, ಹಸುಳೆಗೆ ಹಾಲುಣಿಸಿ ತುಪ್ಪದಲ್ಲಿಮಾಡಿದ ಕೊಬ್ಬರಿ ಬೆಲ್ಲದ ಉಂಡೆ ತಿನ್ನಬೇಕು. ನಂತರ ಅಮ್ಮ ಬಟ್ಟಲಲ್ಲಿಕೊಬ್ಬರಿ ಎಣ್ಣೆ, ಅರಿಶಿಣ, ಬೇವಿನ ರಸದ ಮಿಶ್ರಣ ತರುತ್ತಾಳೆ, ಅದನ್ನು ಮೈಗೆಲ್ಲಾ ಹಚ್ಚಿಕೊಂಡ ಮೇಲೆ ಕುದಿಯುವ ನೀರಿನಿಂದ ಅಜ್ಜಿ ಸ್ನಾನ ಮಾಡಿಸುತ್ತಾಳೆ. ಸೋಪು, ಶ್ಯಾಂಪೂ ಬಳಸುವಂತಿಲ್ಲ, ಕಡಲೆಹಿಟ್ಟು ಬಳಸಬೇಕು.

ಸ್ನಾನದ ನಂತರ ಮೊದಲೇ ನೇಯ್ದಿಟ್ಟ ವರಸಿನ ಮೇಲೆ ಬಟ್ಟೆ ಇಲ್ಲದೇ ಮಲಗಬೇಕು. ಅಮ್ಮ ಅಷ್ಟರಲ್ಲಾಗಲೇ ದೊಡ್ಡ ಮಡಕೆಯಲ್ಲಿಇದ್ದಿಲಿನಿಂದ ಬೆಂಕಿ ರೆಡಿ ಮಾಡಿರುತ್ತಾಳೆ. ದೇಹಕ್ಕೆ ಬೆಂಕಿಯ ಶಾಖ ತಾಕಲು ಹೇಳಿಮಾಡಿಸಿದ ಮಂಚವೇ (ಬಾಣಂತಿಯರಿಗೆ ಮಾತ್ರ ಬಳಕೆ) ಈ ವರಸು. ಇದರ ಕೆಳಗೆ ಬೆಂಕಿ ತಂದಿಡುತ್ತಾರೆ. ಅದರ ಶಾಖಕ್ಕೆ ಸಂಪೂರ್ಣ ಮೈಯೊಡ್ಡಿ, ಬೆಳ್ಳುಳ್ಳಿಯ ಸಿಪ್ಪೆ ಅದರಲ್ಲಿಹಾಕಿ ಬರುವ ಹೊಗೆಯಿಂದ ಮತ್ತೆ ಮೈಪೂರ ಕಾಯಿಸಿಕೊಳ್ಳಬೇಕು. ಹೆರಿಗೆ ಆದಾಗ ಹೆಣ್ಣಿನ ದೇಹ ಪೂರ್ತಿ ಗಾಳಿ ಹೊರಹೋದ ಟಯರ್ ನಂತಾಗಿರುತ್ತದೆ, ಬಿಸಿ ಬೆಂಕಿಯ ಶಾಖ ಮೈಗೆ ತುಂಬಾ ಕೊಟ್ಟಾಗಲೇ ಮತ್ತೆ ದೇಹ ಕಬ್ಬಿಣದಂತಾಗುತ್ತದೆ ಎನ್ನುತ್ತಾರೆ. ಅದೆಷ್ಟು ಬಿಸಿ ಅಂದ್ರೆ ಆ ಶಾಖಕ್ಕೆ ಎಂಥ ಚಳಿಯಲ್ಲೂಮೈಯಿಂದ ಬೆವರಿಳಿದು ಆ ಬೆವರಿನ ನೀರು ವರಸಿನ ಸಂದುಗಳಿಂದ ಬೆಂಕಿಯ ಮೇಲೆ ಬೀಳುತ್ತಿರುತ್ತದೆ. ಕೊನೆಯಲ್ಲಿಲೋಬಾನ ಹಾಕಿ ಕೂದಲಿಗೆ ಶಾಖ ತಾಕಿಸಿಕೊಳ್ಳಬೇಕು. ಮೈ ಕಾಯಿಸುವುದು ಬೇಡ ಎಂದು ಹಠ ಮಾಡಿದರೆ ಅಜ್ಜಿಯಿಂದ ಧರ್ಮದೇಟು ಕಟ್ಟಿಟ್ಟ ಬುತ್ತಿ.

ಅಷ್ಟೊತ್ತಿಗಾಗಲೇ ಹೊಟ್ಟೆ ಹಸಿದು ತಾಳಹಾಕುತ್ತಿರುತ್ತದೆ. ಆಗ ಅಜ್ಜಿ ಬಿಸಿ ಬಿಸಿ ಜೋಳದ ರೊಟ್ಟಿ, ಸಪ್ಪನೆಯ ಬೇಳೆಯ ಕಟ್ಟಿನಲ್ಲಿನೆನೆಸಿಟ್ಟ ಊಟ ಕೊಡುತ್ತಾಳೆ. ರೊಟ್ಟಿಯ ಜೊತೆ ಸಬ್ಬಸಿಗೆ ಸೊಪ್ಪಿನ ಪಲ್ಯ, ಬೆಂಡೆಕಾಯಿ ಪಲ್ಯ, ಬೆಳ್ಳುಳ್ಳಿ ಹಾಕಿ ಮಾಡಿರುತ್ತಾರೆ. ಬೆಳ್ಳುಳ್ಳಿ ಹೆಚ್ಚು ಬಳಸಿದಷ್ಟು ಹಾಲು ಹೆಚ್ಚುತ್ತದೆ ಎಂದು ಅಜ್ಜಿ ಗುನುಗುತ್ತಾರೆ. ಸಣ್ಣ ರವೆಯನ್ನು ತುಪ್ಪದಲ್ಲಿಹುರಿದು ಬೆಲ್ಲಹಾಕಿ ಮಾಡಿದ ಸಜ್ಜಕ ದಿನಕ್ಕೊಮ್ಮೆಯಾದರೂ ತಿನ್ನಬೇಕು. ಸಿಹಿ ತಿನ್ನು, ಮಗುವಿಗೆ ಹಾಲು ಸಿಹಿಯಾಗಿ ಬರುತ್ತದೆ ಎಂಬ ಕರಾರು.

ಬಾಣಂತಿಯರು ಯಾವುದೇ ಕಾರಣಕ್ಕೂ ಮೂರು ತಿಂಗಳವರೆಗೂ ಖಾರ ಉಣ್ಣುವಂತಿಲ್ಲ. ಒಂದೆರಡು ತುತ್ತು ಬಾಯಲ್ಲಿಡುವಷ್ಟರಲ್ಲಿಕಂದಮ್ಮನ ಹೊಟ್ಟೆ ನಮ್ಮೊಂದಿಗೆ ಸ್ಪರ್ಧೆಗೆ ನಿಂತು ಮಗು ರಾಗ ತೆಗೆದಾಗ ಅರ್ಧಕ್ಕೆ ಊಟ ಬಿಟ್ಟು ಮಗುವಿಗೆ ಹಾಲುಣಿಸಬೇಕು. ‘ನೀ ಉಣ್ಣುವಾಗ ದೇವರು ಪರೀಕ್ಷೆ ಮಾಡಲೆಂದೇ ಮಕ್ಕಳನ್ನು ಅಳಿಸುತ್ತಾನೆ’ ಎನ್ನುವ ಅಜ್ಜಿಯ ಮಾತು ಜೊತೆಗೂಡುತ್ತದೆ. ಮಧ್ಯಾಹ್ನದ ಊಟಕ್ಕೆ ಅನ್ನ, ಟೊಮೊಟೊ ಸಾರು, ಸಂಜೆಗೆ ಜೋಳದ ರೊಟ್ಟಿ, ಸಬ್ಬಸಿಗೆ, ಬೆಳ್ಳುಳ್ಳಿ, ತುಪ್ಪ ಹಾಕಿ ಮಾಡಿದ ಬೆಂಡೆಕಾಯಿ ಬೆಳ್ಳುಳ್ಳಿ ಉಪ್ಪಿಟ್ಟು ಮುಂತಾದವು. ಪ್ರತಿ ಊಟದ ನಂತರ ಚಿಟಿಕೆ ಅಜವಾನ ತಿನ್ನಲೇಬೇಕು. ಅಪ್ಪಿಧಿತಪ್ಪಿ ಮಧ್ಯರಾತ್ರಿ ಯಾವುದೋ ಕಾರಣಕ್ಕೆ ಮಗು ತುಂಬಾ ಅತ್ತರೆ ‘ಏನಾದ್ರೂ ಕದ್ದುಧಿಮುಚ್ಚಿ ತಿಂದಿಯೆನಲೇ? ಕೂಸಿಗೆ ಹೊಟ್ಟಿ ನೋಯ್ದು ಅಳಕತೈತಿ ನೋಡು’ ಅನ್ನೋ ಬೈಗುಳ ಅಜ್ಜಿಯಿಂದ.

ಹೆರಿಗೆಯ ನಂತರ ಹೆಣ್ಣಿನ ಜೀವನ ಸಂಪೂರ್ಣ ಬದಲಾಗುತ್ತದೆ. ಊಟದ ವಿಷಯದಲ್ಲಿತುಂಬಾನೇ ಕಟ್ಟುನಿಟ್ಟು. ತಾಸಿಗೊಮ್ಮೆ ಹಸಿವಿನಿಂದ ಅಳುತ್ತಾ ಹಾಲಿಗಾಗಿ ಚಡಪಡಿಸುವ ಕಂದಮ್ಮನಿಂದ ಸರಿಯಾದ ನಿದ್ದೆಯಿರುವುದಲ್ಲ. ಹೆಣ್ಣು ತಾಯಿಯಾಗಿ ಹುಟ್ಟುತ್ತಾಳೆ, ತನ್ನ ತಾಯಿಯ ಸಂಪೂರ್ಣ ಬೆಲೆ ಅಂದವಳಿಗೆ ತಿಳಿಯುತ್ತದೆ. ಇಲ್ಲಿಅಜ್ಜಿ ಮತ್ತು ಅಮ್ಮನ ಪಾತ್ರ ತುಂಬಾ ಮುಖ್ಯ. ಅವರು ಅಷ್ಟು ಕಷ್ಟಪಟ್ಟು ಬಾಣಂತನ ಮಾಡಿದ್ದಕ್ಕಾಗಿಯೇ ಮುಂದೆ ಆರೋಗ್ಯಕರ ಜೀವನ ಪ್ರತಿ ಹೆಣ್ಣಿನದ್ದಾಗಿರುತ್ತದೆ.