ಅನಂತ ಪದ್ಮನಾಭ ವ್ರತ (ಪು.3)

Contributed byShridevi Ambekallu|Vijaya Karnataka
importance and rituals of ananta padmanabha vrat
ಅನಂತ ಫಲ ನೀಡುವ ವ್ರತ

----
ಭಾದ್ರಪದ ಮಾಸದ ಚತುರ್ದಶಿಯಂದು (ಸೆ. 25ರಂದು)ಆಚರಿಸುವ ಅನಂತ ಪದ್ಮನಾಭ ವ್ರತದ ಮಹತ್ವ, ವ್ರತ ವಿಧಾನ ಕುರಿತ ಮಾಹಿತಿ ಇಲ್ಲಿದೆ.

----

*ವಾರುಣಿ ಜಿ. ರಾಂ

-----

ಲೋಕಪಾಲಕ ಶ್ರೀ ವಿಷ್ಣುವಿಗೆ ಅನಂತ ಎಂಬ ಹೆಸರೂ ಇದೆ. ಅನಂತ ವ್ರತವನ್ನು ಭಾದ್ರಪದ ಮಾಸದ ಶುಕ್ಲಚತುರ್ದಶಿ ಮಾಡುವ ನಿಯಮವಿದೆ. ಅನಂತ ದೇವನು ತನ್ನನ್ನು ಭಕ್ತಿಯಿಂದ ಪೂಜಿಸುವವರಿಗೆ ಅನಂತ ಕೀರ್ತಿ ಸಂಪತ್ತು, ಸುಖಶಾಂತಿ, ಸೌಭಾಗ್ಯವನ್ನು ಅನಂತಕಾಲದವರೆಗೂ ಕೊಡುತ್ತಾನೆ ಎಂಬ ಪ್ರತೀತಿಯಿದೆ.

ವ್ರತಾಚರಣೆ ದಿನದಂದು ಅನಂತನ ದಾರ ಧರಿಸಿ ಅನಂತ ಶಯನ ವ್ರತ ಮಾಡುವುದು ವಿಶೇಷ. ಅನಂತ ಚತುರ್ದಶಿ ವ್ರತಕ್ಕೆ ನೊಂಪು ಎಂದೂ ಕರೆಯುತ್ತಾರೆ. ಈ ದಿನವು ಗಣೇಶ ಚತುರ್ಥಿ ಆಚರಣೆಗೆ ಮಂಗಳ ಹಾಡುವ ದಿನವೂ ಹೌದು. ಅಂದು ಶ್ರೀ ವಿಷ್ಣುವು ಅನಂತ ಪದ್ಮನಾಭನಾಗಿ ಅವತಾರ ಮಾಡಿದ ಎನ್ನಲಾಗಿದೆ.

ಭವಿಷ್ಯೋತ್ತರ ಪುರಾಣದಲ್ಲಿಈ ವ್ರತ- ಕತೆ ಮತ್ತು ಫಲಶ್ರುತಿಗಳ ಉಲ್ಲೇಖಗಳಿವೆ. ವಿಷ್ಣುವು ಅನಂತ ಪದ್ಮನಾಭನಾಗಿ, ಶೇಷಶಯನನಾಗಿ ಯೋಗನಿದ್ರಾ ಸ್ವರೂಪದಿಂದ ದೇವತೆಗಳಾದಿಯಾಗಿ ಸರ್ವರಿಗೂ ದರ್ಶನವನ್ನು ನೀಡುತ್ತಾನೆ ಎನ್ನುವುದು ಶಾಸ್ತ್ರ ಸಾರವಾಗಿದೆ. ಅದಕ್ಕಾಗಿಯೇ ಅನಂತ ಶಯನನಾಗಿರುವ ನಾರಾಯಣನ ಭಾವಚಿತ್ರ ಇರಿಸಿ ಪೂಜಿಸುವುದು ಈ ಸಂದರ್ಭಕ್ಕೆ ಪೂರಕವಾಗಿದೆ.

*

ಪುರಾಣೋಕ್ತ ಕಥೆ:

ಕೌಂಡಿಲ್ಯ ಮುನಿಯು ಸುಶೀಲೆಯೊಂದಿಗೆ ವಿವಾಹವಾದ. ನಂತರ ಸಪತ್ನೀಕನಾಗಿ ಮನೆಯಿಂದ ಸಂಚಾರ ಹೊರಟ. ದಾರಿಯಲ್ಲಿನದಿಯ ತೀರದಲ್ಲಿಅವರು ನಿತ್ಯ ಕರ್ಮಗಳಿಗೆ ನಿಂತಾಗ, ಕೆಲವು ಮಹಿಳೆಯರು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ಆತನ ಪತ್ನಿಯು ನೋಡಿದಳು. ಆ ಮಹಿಳೆಯರನ್ನು ಕೇಳಿದಾಗ,‘ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ’ ಎಂದು ಹೇಳಿ ಅದರ ಫಲಗಳನ್ನು ತಿಳಿಸಿದರು.

ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯು ಶೇಷಶಯನನಾದ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು. ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿದ. ಈ ಬಗ್ಗೆ ವಿಚಾರಿಸಿದ. ಪತ್ನಿಯು ಇದು ಅನಂತ ವ್ರತದ ದಾರ ಎಂದು ವಿವರಿಸಿ,‘ಈ ವ್ರತದಿಂದಲೇ ದೇವರು ನಮಗೆ ಸುಖ ಸಂಪತ್ತನ್ನು ನೀಡಿದ್ದಾನೆ’ ಎಂದಳು. ಇದನ್ನು ಕೇಳಿ ಕೌಂಡಿಲ್ಯ ಮುನಿ ಕೋಪಗೊಂಡು, ‘ನನ್ನ ಶ್ರಮದಿಂದಲೇ ಸಂಪತ್ತು ದೊರಕಿದೆ. ದಾರದಲ್ಲಿಏನೂ ಇಲ್ಲ’ ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕತ್ತರಿಸಿ ಎಸೆದ. ನಂತರದ ದಿನಗಳಲ್ಲಿಅವರ ಸಂಪತ್ತು ಕ್ಷೀಣಿಸತೊಡಗಿತು. ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ನಂತರ ಆತ ಅಖಂಡ ತಪಸ್ಸನ್ನು ಆಚರಿಸಿದ. ವಿಷ್ಣುವನ್ನು ಪ್ರಸನ್ನಗೊಳಿಸಿದ. ವಿಷ್ಣುವು ಕೌಂಡಿಲ್ಯ ಮುನಿಗೆ ವೃದ್ಧನ ರೂಪದಲ್ಲಿದರ್ಶನ ನೀಡಿದ.

ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ, ಪಾಂಡವರು 14 ವರ್ಷಗಳ ಕಾಲ ವನವಾಸದಲ್ಲಿಇದ್ದರು. ಈ ಸಮಯದಲ್ಲಿ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಮಾಡಿಸಿದ. ಇದರ ಫಲವಾಗಿಯೇ ಅವರಿಗೆ ರಾಜ್ಯ, ಕೋಶಾದಿಗಳು ಮರಳಿ ದೊರೆಯಿತು ಎಂಬ ನಂಬಿಕೆ ಇದೆ.

*

ಕೌಟುಂಬಿಕ ಸಾಮರಸ್ಯದ ಪ್ರತೀಕ:

ದೇವರು ವೃದ್ಧ ಬ್ರಾಹ್ಮಣ ರೂಪಿಯಾಗಿ ಕೌಂಡಿಲ್ಯ ದಂಪತಿಗೆ ದರ್ಶನ ನೀಡಿದ ಎಂಬ ಪುರಾಣೋಕ್ತ ಕಥೆ ಅನ್ವಯ ನೈವೇದ್ಯದ ಭಕ್ಷಗಳೆಲ್ಲಾಮೆತ್ತಗೆ ಮತ್ತು ಮೃದುವಾಗಿರಬೇಕ, ತಟ್ಟೆಇಡ್ಲಿ, ಹಿಟ್ಟಿನಕಡುಬು, ಹಾಲುಬಾಯಿ, ಗೋಧಿನುಚ್ಚಿನ ಪಾಯಸ ಸೇರಿದಂತೆ ಮೃದುವಾಗಿರುವ ನಾನಾ ವಿಧದ ಫಲಗಳನ್ನೂ ನಿವೇದನೆ ಮಾಡಲಾಗುತ್ತದೆ. ವ್ರತವನ್ನು ಪತಿ- ಪತ್ನಿ ಇಬ್ಬರೂ ಒಟ್ಟಾಗಿ ಆಚರಿಸಬೇಕು. ಪೂಜಾ ಸಂದರ್ಭದಲ್ಲೂಒಟ್ಟಿಗೆಯೇ ಇರಬೇಕಾದದ್ದು ಕಡ್ಡಾಯ. ಒಬ್ಬರೇ ಕುಳಿತು ವ್ರತಾಚರಣೆ ಮಾಡುವಂತಿಲ್ಲ.

ವ್ರತದ ಕಥೆ- ಉಪ ಕಥೆ ಮತ್ತು ಪೂರಕ ನಿಯಮಾವಳಿಗೂ ದಂಪತಿಗಳು ಹೇಗೆ ಬದುಕಬೇಕು ಎಂಬ ಸಂದೇಶವನ್ನು ನೀಡುತ್ತದೆ. ಕಷ್ಟ- ಸುಖಗಳನ್ನು ಸಮನಾಗಿ ಸ್ವೀಕರಿಸಿ, ವ್ರತ- ನಿಯಮ ಮತ್ತು ಹಬ್ಬಗಳನ್ನು ದಂಪತಿ ಸಮೇತರಾಗಿಯೇ ಆಚರಣೆ ಮಾಡಿದರೆ ಮಾತ್ರ ಪೂರ್ಣ ಫಲ ಪ್ರಾಪ್ತಿ. ಇದಕ್ಕೆ ಕುಟುಂಬದ ಎಲ್ಲರೂ ಸಹಕಾರ ನೀಡಬೇಕು ಎಂಬ ಸೂಚನೆಯನ್ನೂ ಪುರಾಣಗಳು ತಿಳಿಸಿವೆ.

--

ಬಾಕ್ಸ್ ಮಾಡಿ

ಅನಂತನ ಚತುರ್ದಶಿಗೆ 14ರ ನಂಟು

ಅನಂತನ ಚತುರ್ದಶಿ ಆಚರಣೆಗೂ 14 ಎಂಬ ಸಂಖ್ಯೆಗೂ ವಿಶಿಷ್ಟ ರೀತಿಯ ನಂಟು ಇದೆ. ವ್ರತದ ಆಚರಣೆಯ ತಿಥಿ ಬರುವುದು ಭಾದ್ರಪದ ಮಾಸದ 14ನೇ ದಿನ. (ಚತುರ್ದಶಿ). ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಅದರಲ್ಲೂವಿಶೇಷವಾಗಿ ಸಂಪತ್ತು ಹಾಗೂ ಸಂತಾನ ಪ್ರಾಪ್ತಿಗೆ ಕೈಗೊಳ್ಳುವ ವ್ರತವಿದು. ವ್ರತ ಮಾಡಲು ಆರಂಭಿಸಿದವರು 14 ವರ್ಷಗಳವರೆಗೆ ಕಡ್ಡಾಯವಾಗಿ ಆಚರಿಸಬೇಕೆಂಬ ನಿಯಮವಿದೆ. ಇಂದು 14 ಬಗೆಯ ಭಕ್ಷ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುತ್ತಾರೆ. ಹದಿನಾಲ್ಕು ಎಳೆಗಳ ಮತ್ತು 14 ಗಂಟುಗಳುಳ್ಳ ಕೆಂಪುದಾರವನ್ನು ಧರಿಸಿಯೇ ವ್ರತ ಮಾಡಬೇಕು. ಇದಕ್ಕೆ ‘ಅನಂತನ ದಾರ’ ಎಂದೇ ಹೆಸರು. (ಮಹಿಳೆಯರು ಕೊರಳಿಗೆ, ಪುರುಷರು ತೋಳಿಗೆ ದಾರ ಕಟ್ಟಿಕೊಳ್ಳುತ್ತಾರೆ. ಇದನ್ನು ಕಟ್ಟಿಕೊಂಡರೆ ವ್ರತಾಚರಣೆಗೆ ಯಾವುದೇ ಅಡಚಣೆಗಳು ಬಾರದೇ ಸಾಂಗವಾಗಿ ನೆರವೇರಿವುದು ಎಂದು ಪ್ರಾಜ್ಞರು ನಂಬಿದ್ದಾರೆ) 14 ಕೆಂಪು ವಸ್ತ್ರವನ್ನು ಪೂಜಾ ಸಂದರ್ಭ ಅನಂತನಿಗೆ ಸಮರ್ಪಣೆ ಮಾಡುವ ನಿಯಮ ಇದೆ. 14 ರೀತಿಯ ಹೂವು, ಹಣ್ಣು ಮತ್ತು 14 ಬಗೆಯ ಪತ್ರೆಗಳನ್ನು ದೇವರಿಗೆ ಪೂಜಾ ಸಂದರ್ಭ ಏರಿಸಲಾಗುತ್ತದೆ.

ಮಹಾಮಂಗಳಾರತಿ ನಂತರ ಮಂತ್ರ ಪುಷ್ಪಗಳನ್ನು ಹಾಕಿ 14 ಪ್ರದಕ್ಷಿಣೆ ನಮಸ್ಕಾರ ಮಾಡಬೇಕು. ವ್ರತಾಚರಣೆ ಮಾಡಲಾಗದವರು ಪೂಜೆ ನಡೆಯುವ ಸ್ಥಳಕ್ಕೆ ತೆರಳಿ ದೇವರಿಗೆ 14 ನಮಸ್ಕಾರ ಹಾಕಿದರೂ ಫಲವು ಸಿದ್ಧಿಯಾಗುವುದು ಎಂಬ ನಂಬಿಕೆ ಇದೆ.

------------

(***ಇದು ಬೇಡ....)

ವ್ರತದ ಮಹತ್ವ ಸಾರುವ ಶ್ಲೋಕ

ಅನಂತ ಕಾಮದಂ ದೇವಂ ಸರ್ವ ಪಾಪ ಪ್ರಣಾಶನ

ಅನಂತ ದೋರ ರೂಪೇಣ ಪುತ್ರ ಪೌತ್ರ ಪ್ರವರ್ಧಯ

ಅನಂತ ಸಂಸಾರ ಮಹಾ ಸಮುದ್ರೇ ಮಗ್ನಂ

ಸಮುಭ್ಯುದ್ಧರ ವಾಸುದೇವ

ಅನಂತ ರೂಪಿನ್ ವಿನಿಯೋಜಯಸ್ವ-

ಹ್ಯನಂತ ಸೂತ್ರಾಯ ನಮೋ ನಮಸ್ತೇ ..

*********

ರೇಖಾಚಿತ್ರ: ಕೌಸಲ್ಯಾ