ವಿ.ವಿಜಯೇಂದ್ರ ರಾವ್ ಒಂದು ಬೃಹತ್ ಕಾಡಿನಲ್ಲಿ ಪ್ರಾಣಿಪಕ್ಷಿಗಳು, ಕ್ರೂರ ಮೃಗಗಳು, ಹುಳು ಹುಪ್ಪಟೆಗಳು ಸಂತಸದಿಂದ ವಾಸವಾಗಿದ್ದವು. ಕಾಡಿನ ಹೊರಭಾಗದಲ್ಲಿಒಂದು ದೊಡ್ಡ ಕೊಳವಿತ್ತು. ಬಾಯಾರಿದಾಗ ಅದರ ಬಳಿ ಹೋಗಿ ನೀರು ಕುಡಿಯುತ್ತಾ ಆರಾಮವಾಗಿ ಕಾಲ ಕಳೆಯುತ್ತಿದ್ದವು.
ಒಮ್ಮೆ ಆ ಕಾಡಿಗೆ ಕಾಡ್ಗಿಚ್ಚು ತಾಕಿ, ಇಡೀ ಕಾಡಿಗೆ ಕಾಡೇ ಹೊತ್ತಿ ಉರಿಯುತ್ತಿತ್ತು. ತಕ್ಷಣವೇ ಎಲ್ಲಾಪ್ರಾಣಿ, ಪಕ್ಷಿಗಳು, ಮೃಗಗಳು ಹೊರಭಾಗದಲ್ಲಿದ್ದ ಕೊಳದ ಬಳಿ ನಿಂತು ಉರಿಯುತ್ತಿದ್ದ ಕಾಡನ್ನು ಅಸಹಾಯಕತೆಯಿಂದ ನೋಡುತ್ತಾ ನಿಂತವು. ಆದರೆ ಒಂದು ಪುಟ್ಟ ಗುಬ್ಬಚ್ಚಿ ಮಾತ್ರ, ನೀರಲ್ಲಿಒಮ್ಮೆ ಮುಳುಗಿ, ತನ್ನ ಪುಟ್ಟ ಕೊಕ್ಕಿನಲ್ಲಿಎಷ್ಟು ಸಾಧ್ಯವೋ ಅಷ್ಟು ನೀರನ್ನು ತೆಗೆದುಕೊಂಡು ಆ ಉರಿಯುತ್ತಿದ್ದ ಕಾಡಿನ ಹತ್ತಿರ ಹೋಗಿ ತನ್ನ ಮೈಯನ್ನು ಕೊಡವಿ, ಕೊಕ್ಕಿನಲ್ಲಿದ್ದ ನೀರಿನ ಬಿಂದುಗಳನ್ನು ಆ ಉರಿಗೆ ಚುಮುಕಿಸಿತು. ಮತ್ತೆ ಆ ಕೊಳಕ್ಕೆ ಬಂದು ನೀರಲ್ಲಿಮುಳುಗಿ, ಕೊಕ್ಕಿನಲ್ಲಿನೀರನ್ನು ತುಂಬಿಕೊಂಡು ಆ ಕಾಡಿನ ಬೆಂಕಿಗೆ ಚುಮುಕಿಸಿ ಬರುತ್ತಿತ್ತು. ಹೀಗೆಯೇ ಹಲವಾರು ಸಾರಿ ಮಾಡಿ ಬರುತ್ತಿದ್ದದ್ದನ್ನು ನೋಡಿ ಇತರ ಪ್ರಾಣಿ, ಪಕ್ಷಿ, ಮೃಗಗಳು ‘ಓ ಗುಬ್ಬಚ್ಚಿಯೇ...ನಿನಗಿಂತ ದೊಡ್ಡವರು, ಬಲಶಾಲಿಗಳಾದ ನಾವೇ ಆ ಬೃಹತ್ ಬೆಂಕಿಯ ಜ್ವಾಲೆಯನ್ನು ನೋಡಿ ಏನೂ ಮಾಡಲಾಗದೆ ಕೈ ಕೈ ಹಿಸುಕಿಕೊಂಡು ಅಸಹಾಯಕತೆಯಿಂದ ಸುಮ್ಮನೆ ನಿಂತು ನೋಡುತ್ತಿದ್ದೇವೆ. ಆದರೆ, ನೀನು ಮಾತ್ರ ನಿನ್ನ ಪುಟ್ಟ ಕೊಕ್ಕಿನಿಂದ ಎರಡು ಹನಿ ನೀರನ್ನು ತೆಗೆದುಕೊಂಡು ಹೋಗಿ ಚುಮುಕಿಸಿ ಬರುತ್ತಿದ್ದೀಯ. ಅದರಿಂದ ಬೆಂಕಿಯನ್ನು ನಂದಿಸಲು ಆಗುತ್ತಾ?’ ಎಂದು ಹೇಳಿ ಆ ಪುಟ್ಟ ಗುಬ್ಬಚ್ಚಿಗೆ ಅಪಹಾಸ್ಯ ಮಾಡಿ ನಗಾಡಿದಾಗ, ಆ ಗುಬ್ಬಚ್ಚಿಯು ‘ಹೌದಪ್ಪ, ನಾನು ನಿಮ್ಮೆಲ್ಲರಿಗಿಂತ ಪುಟ್ಟ ಪಕ್ಷಿ. ನಿಮ್ಮಷ್ಟು ಶಕ್ತಿ ಸಹ ನನ್ನಲ್ಲಿಲ್ಲ. ಒಪ್ಪುತ್ತೀನಿ ಮತ್ತು ನನ್ನ ಎರಡು ಹನಿ ನೀರಿನ ಸಿಂಪಡಿಕೆಯಿಂದ ಕಾಡಿನ ಬೆಂಕಿಯನ್ನು ಆರಿಸಲಾಗದು ಎಂದು ಸಹ ನನಗೆ ಗೊತ್ತಿದೆ. ಆದರೆ ಈ ಸಂದರ್ಭದಲ್ಲಿಏನೂ ಮಾಡದೆ ಸುಮ್ಮನಿರದೆ, ನನ್ನ ಕೈಲಾದ ಮಟ್ಟಿಗೆ ನನ್ನನ್ನು ಇಷ್ಟು ದಿನಗಳ ಕಾಲ, ಸಾಕಿ ಸಲುಹಿದ ಕಾಡನ್ನು ಸಂರಕ್ಷಿಸಲು ಪ್ರಯತ್ನ ಪಟ್ಟಿದ್ದೀನಿ. ಇದು ಕೊಡುವ ತೃಪ್ತಿ ಎದುರು ಬೇರೇನೂ ಇಲ್ಲ’ ಎಂದಾಗ ಮತ್ತೆಲ್ಲಾಪ್ರಾಣಿ, ಪಕ್ಷಿಗಳಿಗೆ ಆ ಪುಟ್ಟ ಗುಬ್ಬಚ್ಚಿಗಿಂತ ತಾವು ಇನ್ನೂ ಕುಬ್ಜರು ಎಂದೆನಿಸಿ ಆ ಗುಬ್ಬಚ್ಚಿಯತ್ತ ಅಭಿಮಾನದಿಂದ ನೋಡಿ ಅದರ ಪ್ರಯತ್ನವನ್ನು ಶ್ಲಾಘಿಘಿಸಿದರು.
ಅದಕ್ಕೆ ಹೇಳೋದು. ಯಾವುದೇ ಸಂದರ್ಭದಲ್ಲಿ ಹಿಂಜರಿತವಿಲ್ಲದೆ ನಮ್ಮ ಕೈಲಾದ ಸಹಾಯವನ್ನು ನಿಸ್ವಾರ್ಥವಾಗಿ ಮಾಡಬೇಕು.