ಪ್ರಸಕ್ತ ಹಂಗಾಮಿನಲ್ಲಿಸಂಕೋನಟ್ಟಿಯ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಪೂರ್ಣ ಸಾಮರ್ಥ್ಯದಲ್ಲಿಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗಿದ್ದು, 7ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ ಎಂದು ಅಧ್ಯಕ್ಷ ಪರಪ್ಪ ಸವದಿ ವಿಶ್ವಾಸ ವ್ಯಕ್ತಪಡಿಸಿದರು.ಕಾರ್ಖಾನೆ ಆವರಣದಲ್ಲಿಸೋಮವಾರ ಜರುಗಿದ 2026-27ನೇ ಸಾಲಿನ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘‘ಕಳೆದ ಹಂಗಾಮಿನಲ್ಲಿಕಾರ್ಖಾನೆಯಲ್ಲಿ6ರಿಂದ 7 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿಕಬ್ಬು ಲಭ್ಯವಾಗದೆ ಸುಮಾರು 5 ಲಕ್ಷ ಟನ್ ನಷ್ಟು ಕಬ್ಬು ಮಾತ್ರ ನುರಿಸಲು ಸಾಧ್ಯವಾಯಿತು. ಇದರಿಂದ ಕಾರ್ಖಾನೆಗೆ ನಷ್ಟವಾಗಿದೆ. 11.5 ರಿಕವರಿ ನೀಡುವ ಗುಣಮಟ್ಟದ ಕಬ್ಬನ್ನು ರೈತರು ಕಾರ್ಖಾನೆಗೆ ಪೂರೈಸಿದಲ್ಲಿಸಕ್ಕರೆ ಇಳುವರಿ ಹೆಚ್ಚಳವಾಗುವುದರೊಂದಿಗೆ ಕಾರ್ಖಾನೆಯ ಆರ್ಥಿಕ ಸ್ಥಿತಿಗೂ ಬಲ ಬರಲಿದೆ,’’ ಎಂದು ಅವರು ಹೇಳಿದರು.
‘‘ರೈತರ ಹಿತಾಸಕ್ತಿಯೇ ಕಾರ್ಖಾನೆಯ ಪ್ರಮುಖ ಆದ್ಯತೆಯಾಗಿದ್ದು, ರೈತರು ಮತ್ತು ಕಾರ್ಖಾನೆ ಪರಸ್ಪರ ಸಹಕಾರದಿಂದ ಮುನ್ನಡೆಯಬೇಕು. ಕಬ್ಬು ಪೂರೈಸಿದ ರೈತರಿಗೆ ಹಣ ಪಾವತಿಯಲ್ಲಿವಿಳಂಬವಾಗದಂತೆ ಸರಬರಾಜು ಮಾಡಿದ 15 ದಿನಗಳೊಳಗಾಗಿ ಬಿಲ್ ಪಾವತಿಸುವ ವ್ಯವಸ್ಥೆ ಮಾಡಲಾಗಿದೆ,’’ ಎಂದು ಅವರು ತಿಳಿಸಿದರು.