ಬೆಂಗಳೂರು: ಕಸ್ತೂರಿರಂಗನ್ ವರದಿ ಯಿಂದ ಗೊಂದಲ ನಿವಾರಣೆಗೆ ಸರಕಾರ ಕೇರಳ ಮಾದರಿಯಲ್ಲಿತಜ್ಞರ ಸಮಿತಿ ರಚಿಸಿ, ಭೌತಿಕ ಸರ್ವೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ವಿಧಾನಪರಿಷತ್ ನಲ್ಲಿಎಲ್ಲಸದಸ್ಯರೂ ಒಕ್ಕೂರಲಿನಿಂದ ಆಗ್ರಹಿಸಿದರು. ಬಿಜೆಪಿ ಹಿರಿಯ ಸದಸ್ಯ ಸಿ.ಟಿ.ರವಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಬಿ.ಕೆ.ಹರಿಪ್ರಸಾದ್ , ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಇದಕ್ಕೆ ಪೂರಕವಾಗಿ ಮಾತನಾಡಿ,‘‘ಭೌತಿಕ ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿ ಅದನ್ನು ಕೇಂದ್ರಕ್ಕೆ ಕಳುಹಿಸಿ ಪರಿಹಾರ ಕಂಡುಕೊಳ್ಳಬೇಕು,’’ ಎಂದು ಆಗ್ರಹಿಸಿದರು. ಮೊದಲಿಗೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರೂ ಆಗಿರುವ ಡಾ.ಜಿ.ಪರಮೇಶ್ವರ್ ಕಸ್ತೂರಿರಂಗನ್ ವರದಿ ಹಿನ್ನೆಲೆಯನ್ನು ವಿವರಿಸಿದರು. ವರದಿಯ ಸಾಧಕ-ಬಾಧಕಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಬಿಜೆಪಿ ಸದಸ್ಯ ಸಿ.ಟಿ.ರವಿ ಮಾತನಾಡಿ,‘‘ಕಸ್ತೂರಿರಂಗನ್ ವರದಿಯ ಬಗ್ಗೆ ಅತಿರೇಕದ ತೀರ್ಮಾನ ಬೇಡ. ಇಡೀ ಕಸ್ತೂರಿರಂಗನ್ ವರದಿಯನ್ನೇ ಸಂಪೂರ್ಣವಾಗಿ ತಿರಸ್ಕರಿಸಿದರೆ ನಾಳೆ ಸುಪ್ರೀಂಕೋರ್ಟ್ ಮಾಧವ್ ಗಾಡ್ಗೀಳ್ ವರದಿ ಜಾರಿಗೊಳಿಸಿ ಎಂದರೆ ಏನು ಮಾಡುವುದು? ವರದಿ ವಿಚಾರದಲ್ಲಿಸರಕಾರ ಪರಿಸರ ಮತ್ತು ಜನವಸತಿ ಎರಡನ್ನೂ ಕಾಪಾಡುವ ಮಾರ್ಗ ಅನುಸರಿಸಬೇಕು. ಈ ಹಿನ್ನೆಲೆಯಲ್ಲಿಸರಕಾರ ಭಾವನಾತ್ಮಕವಾಗಿ ಅಲ್ಲದೆ ವೈಜ್ಞಾನಿಕವಾಗಿ ನಿರ್ಧಾರ ಕೈಗೊಳ್ಳಬೇಕು. ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು,’’ ಎಂದು ಒತ್ತಾಯಿಸಿದರು.