ಎರಡು ಚರಣವಷ್ಟೇ ಹಾಡಿದ ಆಡಳಿತ ಪಕ್ಷ | ಪೂರ್ತಿ ಹಾಡಿದ ಪ್ರತಿಪಕ್ಷ | ಪರಿಷತ್ ನಲ್ಲಿಧರಣಿ, ಗದ್ದಲ
Contributed by: KENCHE GOWDA|Vijaya Karnataka•
ವಿಕ ಸುದ್ದಿಲೋಕ ಬೆಂಗಳೂರು ಅಧಿವೇಶನದ ಆರಂಭದಲ್ಲಿ ವಂದೇ ಮಾತರಂ ಗೀತೆ ಹಾಡುವ ವಿಚಾರದಲ್ಲಿಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತಾಳಮೇಳ ಇಲ್ಲದಂತಾಗಿ ಗೊಂದಲ ಸೃಷ್ಟಿಯಾಯಿತು. ಆದರೆ ಪರಿಷತ್ ನಲ್ಲಿವಂದೇ ಮಾತರಂ ಮೊಟಕಿನ ವಿರುದ್ಧ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಉಭಯ ಸದನದಲ್ಲಿಕಾಂಗ್ರೆಸ್ ಸದಸ್ಯರು ವಂದೇ ಮಾತರಂ ಎರಡು ಚರಣ ಹಾಡಿ ಸಂವಿಧಾನ ಪೀಠಿಕೆ ಓದಲು ಶುರು ಮಾಡಿದರು. ಆದರೆ, ಈ ಬೆಳವಣಿಗೆ ನಿರೀಕ್ಷಿಸಿದ್ದ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಂದೇ ಮಾತರಂ ಗೀತೆಯ ಮುದ್ರಿತ ಪ್ರತಿ ಹಿಡಿದುಕೊಂಡು ಆರು ಚರಣವನ್ನೂ ಪೂರ್ಣ ಹಾಡಿದರು. ಇದರಿಂದ ಸಂವಿಧಾನ ಪೀಠಿಕೆ ವಾಚನ ಮತ್ತು ವಂದೇ ಮಾತರಂ ಗೀತೆಯಿಂದ ಸದನದಲ್ಲಿಗೊಂದಲ ಸೃಷ್ಟಿಯಾಯಿತು. ಸದನದಲ್ಲಿತಾಳ -ಮೇಳವಿಲ್ಲದ ಸ್ಥಿತಿ ಕಂಡುಬಂತು. ವಿಧಾನಸಭೆ ಸ್ಪೀಕರ್ ಸಂತಾಪ ಸೂಚನೆ ನಿರ್ಣಯವನ್ನು ಪ್ರಸ್ತಾಪಿಸಲು ಶುರು ಮಾಡಿದರೆ, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ವಂದೇ ಮಾತರಂ ಪೂರ್ಣ ಹಾಡಿ, ಸಂವಿಧಾನ ಪೀಠಿಕೆ ಓದಿದ ಬಳಿಕ ಭಾರತ್ ಮಾತಾಕೀ ಜೈ.., ವಂದೇ ಮಾತರಂ..., ಜೈಭೀಮ್ .., ಘೋಷಣೆ ಕೂಗಿದರು. ಪರಿಷತ್ತಿನಲ್ಲಿಪ್ರತಿಭಟನೆ, ಧಿಕ್ಕಾರ ಘೋಷಣೆ ಪರಿಷತ್ ನಲ್ಲಿವಂದೇ ಮಾತರಂ ಗೀತೆ ಪೂರ್ಣಗೊಳಿಸಿದ ನಂತರ ಬಿಜೆಪಿ ಸದಸ್ಯರು ಸಂವಿಧಾನ ಪೀಠಿಕೆ ಓದಲಾರಂಭಿಸಿದಾಗ ಆಗ ಪರಸ್ಪರ ವಾಗ್ವಾದ, ಘೋಷಣೆಗಳು, ಧಿಕ್ಕಾರಗಳು ಮೊಳಗಿದವು. ಬಿಜೆಪಿ ಸದಸ್ಯರು ‘‘ಇದು ಕಾಂಗ್ರೆಸ್ ಸಭೆಯೋ? ವಿಧಾನ ಪರಿಷತ್ತೋ? ಇಲ್ಲಿಸಂವಿಧಾನದ ಪ್ರಕಾರ ಪೂರ್ಣಗೀತೆ ಹಾಡಲೇಬೇಕು,’’ ಎಂದು ಗದ್ದಲ ಎಬ್ಬಿಸಿದರು. ಆದರೆ, ಸಭಾನಾಯಕ ಯತೀಂದ್ರ ಮತ್ತು ಡಿಸಿಎಂ ಪರಮೇಶ್ವರ್ , ‘‘ಸರಕಾರ ಎರಡು ಚರಣಗಳಿಗೆ ಮೊಟಕುಗೊಳಿಸಿದೆ,’’ಎಂದು ಸಮರ್ಥಿಸಿಕೊಂಡರು. ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ , ‘‘2011ರವರೆಗೂ ಸದನದಲ್ಲಿವಂದೇ ಮಾತರಂ ಎರಡು ವಾಕ್ಯ ಮಾತ್ರ ಹಾಡಲಾಗುತ್ತಿತ್ತು. ಬಿಜೆಪಿ ಸಭಾಪತಿ ಬಂದ ನಂತರ ಬದಲಾವಣೆಯಾಗಿದೆ. ಈಗ ಸರಕಾರದ ಅದೇಶದಂತೆ ಹಾಡಲಾಗಿದೆ,’’ ಎಂದು ಸಮರ್ಥಿಸಿಕೊಂಡರು. ಆಗ ಮಾತಿನ ಚಕಮಕಿ ಮತ್ತಷ್ಟು ಜೋರಾಯಿತು. ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು. ಆಗ ವಾಗ್ವಾದ ತಾರಕಕ್ಕೇರಿದ ಹಿನ್ನೆಲೆಯಲ್ಲಿಸಭಾಪತಿ ಸದನದ ಕಲಾಪವನ್ನು ಕೆಲ ಕಾಲ ಮುಂದೂಡಿದರು. ಮತ್ತೆ ಕಲಾಪ ಆರಂಭವಾದ ನಂತರ ಸರಕಾರದ ಜತೆ ಚರ್ಚೆ ನಡೆಸಿ ವಂದೇ ಮಾತರಂ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸಭಾಪತಿ ಭರವಸೆ ನೀಡಿದ ಹಿನ್ನೆಲೆಯಲ್ಲಿಬಿಜೆಪಿ ಸದಸ್ಯರು ಧರಣಿ ವಾಪಸ್ ಪಡೆದರು. ಯತೀಂದ್ರ ಹೇಳಿಕೆಗೆ ಕಿಡಿ: ಸದಸ್ಯರ ವಾಗ್ವಾದದ ಮಧ್ಯೆ ಮಾತನಾಡಿದ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ, ‘‘ಈ ವಿಚಾರದಲ್ಲಿಸಭಾಪತಿಗಳ ಕೈಯಲ್ಲಿಏನೂ ಇಲ್ಲ. ಅವರ ಕೈ ಕಟ್ಟಿಹಾಕಲಾಗಿದೆ. ಸರಕಾರ ಏನು ಆದೇಶ ಮಾಡಿದೆಯೋ ಅದರಂತೆ ಅವರು ನಡೆದುಕೊಂಡಿದ್ದಾರೆ,’’ ಎಂದರು. ಅದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯರು,‘‘ಸಭಾನಾಯಕರು ಸಭಾಪತಿಯನ್ನು ಅಸಹಾಯಕರು ಎನ್ನುತ್ತಿದ್ದಾರೆ,’’ ಎಂದು ಆಕ್ರೋಶ ವ್ಯಕ್ತಪಡಿಸಿ ಸಚಿವ ಯತೀಂದ್ರ ವಿರುದ್ಧ ಮುಗಿಬಿದ್ದರು. ಸದಸ್ಯ ಸಿ.ಟಿ.ರವಿ, ‘‘ಕಾಂಗ್ರೆಸ್ ಗೆ ಜಿನ್ನಾ ಭೂತ ಆವರಿಸಿದೆ. ಸಭಾಪತಿಯವರನ್ನು ಅಸಹಾಯಕರು ಎಂದರೆ ಏನರ್ಥ? ಅದಕ್ಕೆ ಸಭಾಪತಿ ಉತ್ತರ ನೀಡಬೇಕು,’’ ಎಂದು ಪಟ್ಟು ಹಿಡಿದರು. ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ‘‘ಸರಕಾರದ ಸಭಾಪತಿಯೋ ಅಥವಾ ಸದನದ ಸಭಾಪತಿಯೋ ಎಂಬುದನ್ನು ಸಭಾಪತಿ ಸ್ಪಷ್ಟಪಡಿಸಬೇಕು. ಇದು ಅವಿವೇಕಿತನದ ಪರಮಾವಧಿ, ಸಭಾಪತಿಗೆ ಏನೂ ಅಧಿಕಾರವಿಲ್ಲವೆಂದರೆ ಏನರ್ಥ,’’ ಎಂದು ಪ್ರಶ್ನಿಸಿದರು. ಆಗ ಸಭಾಪತಿ, ‘‘ಯತೀಂದ್ರ ಅವರು ಏನು ಮಾತನಾಡಿದ್ದಾರೆನ್ನುವ ಬಗ್ಗೆ ಕಡತ ತರಿಸಿಕೊಂಡು ನೋಡಿ ಪರಿಶೀಲಿಸಲಾಗುವುದು,’’ ಎಂದರು. ಈ ಹಂತದಲ್ಲಿಎದ್ದು ನಿಂತ ಸಭಾನಾಯಕ ನಾಯಕ ಯತೀಂದ್ರ, ‘‘ನನ್ನ ಹೇಳಿಕೆ ತಪ್ಪಾಗಿದ್ದರೆ ನಾನು ಸರಿಪಡಿಸಿಕೊಳ್ಳುತ್ತೇನೆ,’’ ಎಂದು ಹೇಳುವುದರೊಂದಿಗೆ ಗದ್ದಲಕ್ಕೆ ತೆರೆ ಬಿದ್ದಿತು.ಧಿ