ವಿಕ ಸುದ್ದಿಲೋಕ ಸಾಗರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರೈತರು ಹಾಗೂ ಬಡವರ ಸ್ವಾವಲಂಬಿ ಬದುಕಿಗೆ ಅಗತ್ಯವಾದ ಆರ್ಥಿಕ ಮತ್ತು ಸಾಮಾಜಿಕ ಸಹಕಾರ ನೀಡಲಾಗುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಬದುಕಿನಲ್ಲಿಗಣನೀಯ ಬದಲಾವಣೆಯಾಗಿದೆ ಎಂದು ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹೇಳಿದರು. ನಗರದಲ್ಲಿಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ಎಲ್ಲಒಕ್ಕೂಟಗಳ ಅಧ್ಯಕ್ಷರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಸಹಾಯ ಸಂಘಗಳ ಮೂಲಕ ಉಳಿತಾಯದ ಮನೋಭಾವ, ನಾಯಕತ್ವ, ಸಾಮಾಜಿಕ ಜ್ಞಾನ ಹಾಗೂ ಸಂಸ್ಕಾರ ಬೆಳೆಸಲಾಗುತ್ತಿದೆ. ರೈತರಿಗೆ ಕೃಷಿ ಪೂರಕ ಕಾರ್ಯಕ್ರಮ, ಬಡವರಿಗೆ ಬ್ಯಾಂಕ್ ಮೂಲಕ ಆರ್ಥಿಕ ನೆರವು , ವಿಶೇಷ ಚೇತನರಿಗೆ ವೀಲ್ ಚೇರ್ , ಅನಾಥರಿಗೆ ವಾತ್ಸಲ್ಯ ಕಾರ್ಯಕ್ರಮದಡಿ ಮನೆ, ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಸೇರಿದಂತೆ ಹಲವು ಸೇವಾ ಕಾರ್ಯಗಳನ್ನು ಯೋಜನೆ ನಡೆಸುತ್ತಿದೆ ಎಂದರು. ಸಮಾಜದ ಬಡವರು ಹಾಗೂ ಅಸಹಾಯಕರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವವನ್ನು ಒಕ್ಕೂಟಗಳ ಪದಾಧಿಕಾರಿಗಳು ಬೆಳೆಸಿಕೊಳ್ಳಬೇಕು. ಅಧಿಕಾರ ಶಾಶ್ವತವಲ್ಲ. ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಿರಸಿ ವಿಭಾಗದ ಜಿಲ್ಲಾನಿರ್ದೇಶಕ ಎಂ. ದಿನೇಶ್ ಉಪಸ್ಥಿತರಿದ್ದರು. ತಾಲೂಕಿನ ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರು. ಮೇಲ್ವಿಚಾರಕ ಪ್ರಭಾಕರ್ ನಿರೂಪಿಸಿದರು. ಶ್ರೀಧರ ನಗರ ವಲಯದ ಮೇಲ್ವಿಚಾರಕ ಕಲ್ಲೇಶ್ ವಂದಿಸಿದರು. ತಾಲೂಕಿನ ಎಲ್ಲಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ ಸಹಕರಿಸಿದರು.