ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ | ಕೆ.ಎಂ. ಸುರೇಶ್ ಗೆಲುವಿಗೆ ಎರಡೂ ಪಕ್ಷಗಳ ನಾಯಕರ ಸಂಕಲ್ಪ
ವಿಕ ಸುದ್ದಿಲೋಕ ತುಮಕೂರುಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಎನ್ ಡಿಎ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದು, ಅಭ್ಯರ್ಥಿಯ ಗೆಲುವಿಗೆ ಒಟ್ಟಾಗಿ ಶ್ರಮಿಸುವ ಸಂಕಲ್ಪ ವ್ಯಕ್ತಪಡಿಸಿದರು.
ನಗರದಲ್ಲಿಶುಕ್ರವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿಎರಡೂ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿ ಸುರೇಶ್ ಅವರಿಗೆ ಬೆಂಬಲ ಘೋಷಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಎಚ್ . ನಿಂಗಪ್ಪ ಮಾತನಾಡಿ, ಎನ್ ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವಿಗೆ ಎರಡೂ ಪಕ್ಷಗಳ ಮುಖಂಡರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವಂತೆ ಶ್ರಮಿಸಬೇಕು. ಆಗ್ನೇಯ ಪದವೀಧರ ಕ್ಷೇತ್ರದಲ್ಲಿಈವರೆಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಈ ಬಾರಿ ಎರಡೂ ಪಕ್ಷಗಳ ಮೈತ್ರಿ ಅಭ್ಯರ್ಥಿ ಕಣದಲ್ಲಿದ್ದು, ಪದವೀಧರ ಮತದಾರರನ್ನು ಭೇಟಿ ಮಾಡಿ ಬೆಂಬಲ ಕೋರಬೇಕು ಎಂದು ಹೇಳಿದರು.
ಮೈತ್ರಿಗೆ ವ್ಯಾಪಕ ಬೆಂಬಲ: ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿಬಿಜೆಪಿ-ಜೆಡಿಎಸ್ ಮೈತ್ರಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಈವರೆಗೆ 11 ಚುನಾವಣೆಗಳಲ್ಲಿ9 ಬಾರಿ ಬಿಜೆಪಿ ಹಾಗೂ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಿದರೆ ಕೆ.ಎಂ. ಸುರೇಶ್ ಅವರಿಗೆ ದಾಖಲೆ ಬಹುಮತ ದೊರೆಯಲಿದೆ ಎಂದರು.
ಸರಕಾರದ ವೈಫಲ್ಯವೇ ಪ್ರಮುಖ ಅಸ್ತ್ರ: ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಮಾತನಾಡಿ, ಪದವೀಧರ ಮತದಾರರು ರಾಜಕೀಯವಾಗಿ ಪ್ರಜ್ಞಾವಂತರಾಗಿದ್ದು, ರಾಜ್ಯ ಸರಕಾರದ ಆಡಳಿತ ವೈಫಲ್ಯಗಳ ಬಗ್ಗೆ ಅರಿವು ಹೊಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿಕಾಂಗ್ರೆಸ್ ಘೋಷಿಸಿದ್ದ ನಿರುದ್ಯೋಗಿ ಯುವಜನರಿಗೆ 3 ಸಾವಿರ ರೂ. ನೀಡುವ ಯುವನಿಧಿ ಯೋಜನೆಯ ಬಗ್ಗೆ ಟೀಕಿಸಿದ ಅವರು, ಬಜೆಟ್ ನಲ್ಲಿಹಣ ಮೀಸಲಿಡುವ ವಿಚಾರದಲ್ಲೂಸರಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ಮಾತನಾಡಿ, ರಾಜ್ಯದಲ್ಲಿತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿರೈತರಿಗೆ 2,500 ರೂ. ನೀಡಲು ಸರಕಾರ ಮುಂದಾಗಿರುವುದು ಸಮರ್ಪಕವಲ್ಲ. ಈ ಮೊತ್ತ ರೈತರ ಕಟಿಂಗ್ , ಶೇವಿಂಗ್ ಗೂ ಸಾಕಾಗುವುದಿಲ್ಲಎಂದು ಟೀಕಿಸಿ, ಕನಿಷ್ಠ ಒಂದು ಹೆಕ್ಟೇರ್ ಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್ , ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಎನ್ ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ , ಮಾಜಿ ಶಾಸಕರಾದ ಕೆ.ಎಂ. ತಿಮ್ಮರಾಯಪ್ಪ, ಮಸಾಲ ಜಯರಾಮ್ , ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ , ಮುಖಂಡರಾದ ವೈ.ಎಚ್ . ಹುಚ್ಚಯ್ಯ, ಬಿ.ಕೆ. ಮಂಜುನಾಥ್ , ಉಗ್ರೇಶ್ , ಎಸ್ .ಡಿ. ದಿಲೀಪ್ ಕುಮಾರ್ , ಟಿ.ಆರ್ . ನಾಗರಾಜ್ ಹಾಜರಿದ್ದರು.
ಫೋಟೋ 25ಕೆಜಿಎಚ್ 12: ತುಮಕೂರು ನಗರದಲ್ಲಿಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಎನ್ ಡಿಎ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿಎರಡೂ ಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.