ಶ್ರೀನಗರ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರ ‘ಸ್ವಾತಂತ್ರ್ಯ ಚಳವಳಿ’ 115ನೇ ದಿನ ಪೂರೈಸಿದೆ. ಸೇನೆ ಹಾಗೂ ಸ್ಥಳೀಯ ಸರಕಾರದ ವಿರುದ್ಧ ಪ್ರತಿಭಟನೆ ತೀವ್ರಧಿಗೊಂಡಿದ್ದು, ‘‘ನಾವು ಭಾರತವನ್ನು ಸೇರಲು ಬಯಸಿದ್ದೇವೆ. ಗಡಿಗೆ ಅಳವಡಿಸಲಾದ ಬೇಲಿಯನ್ನು ಕೂಡಲೇ ತೆಗೆದು ಹಾಕಿ. ಹಿಂದೂಸ್ತಾನಕ್ಕೆ ಹೋಗುವ ದಾರಿಯನ್ನು ಮುಕ್ತಗೊಳಿಸಿ,’’ ಎಂದು ಆಗ್ರಹಿಸುತ್ತಿದ್ದಾರೆ. ಜಂಟಿ ಅವಾಮಿ ಲೀಗ್ ನೇತೃತ್ವದಲ್ಲಿಜೂನ್ 5ರಿಂದ ನಡೆಯುತ್ತಿರುವ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ , ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆಡಳಿತದ ವಿರುದ್ಧ ಅಂತಿಮ ಹೋರಾಟಕ್ಕೆ ಸಜ್ಜಾಗಿರುವ ನಾಗರಿಕರು, ಭಾರತದ ಜತೆ ಸಂಪರ್ಕ ಬೆಸೆಯವ ಪೂಂಚ್ ಹಾಗೂ ಮೆಂಧರ್ ಮಾರ್ಗವನ್ನು ತೆರೆಯುವಂತೆ ಪಾಕಿಸ್ತಾನ ಸರಕಾರವನ್ನು ಆಗ್ರಹಿಸಿದ್ದಾರೆ. ಪಾಕ್ ಸರಕಾರದ ದಮನಕಾರಿ ನೀತಿ ಖಂಡಿಸಿ ಗಡಿ ನಿಯಂತ್ರಣ ರೇಖೆ ಸಮೀಪ ನಿರಶನ ನಡೆಸುತ್ತಿರುವ ಮುಜಾಪ್ಫರಾಬಾದ್ ಪಟ್ಟಣದ (ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ) ನಾಗರಿಕರು, ‘‘ದಬ್ಬಾಳಿಕೆ ಆಡಳಿತ ಸಾಕು. ಭಾರತ ಸೇರುವ ನಿರ್ಧಾರ ಕೈಗೊಂಡಿರುವ ನಮ್ಮನ್ನು ಯಾವ ಶಕ್ತಿಯೂ ಅಲುಗಾಡಿಸಲು ಸಾಧ್ಯವಿಲ್ಲ,’’ ಎಂದು ಘೋಷಿಸಿದ್ದಾರೆ. ಪಿಒಕೆ ಜನರ ದೃಢ ಹೋರಾಟಕ್ಕೆ ಹೆದರಿದ ಐಎಸ್ ಐನ ‘ಡಾಲ್ ಬ್ರಿಗೇಡ್ ’ ಪ್ರತಿಭಟನಾಕಾರರನ್ನು ಎದುರಿಸಲು ಹಿಂಜರಿದಿದೆ. ಹೋರಾಟ ಗಾರರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದ ಡಾಲ್ ಬ್ರಿಗೇಡ್ ವಾಹನಗಳ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ.