ಕುಣಿದು ಕುಪ್ಪಳಿಸಿದ ಯುವ ಸಮೂಹ

Contributed by: Mahadev Swamy|Vijaya Karnataka•
mysore dasara a dance event that dazzled the youth
ವಿಕ ಸುದ್ದಿಲೋಕ ಮೈಸೂರು ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ಯುವ ಸಂಭ್ರಮ ಎರಡನೇ ದಿನವಾದ ಮಂಗಳವಾರ ಯುವ ಮನಸ್ಸುಗಳು ಹೆಚ್ಚೆದ್ದು ಕುಣಿಯುವಂತೆ ಮಾಡುವಲ್ಲಿಯಶಸ್ವಿಯಾಯಿತು. ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿಆಯೋಜಿಸ ಲಾಗಿರುವ ಕಾರ್ಯಕ್ರಮದಲ್ಲಿನಾನಾ ಕಾಲೇಜುಗಳ ಸುಮಾರು 40 ತಂಡಗಳು ನೃತ್ಯ ಪ್ರದರ್ಶನದ ಮೂಲಕ ನೆರೆದಿದ್ದ ಯುವ ಜನರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದರು. ಜನಪದ, ನಾಡಿನ ಸಂಸ್ಕೃತಿ, ದೇಶಾಭಿಮಾನ, ಶಿವನ ಸ್ಮರಣೆ ಜತೆಗೆ ಸಾಮಾಜಿಕ ಸಂದೇಶ ಸಾರುವ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕುವ ಮೂಲಕ ಇಡೀ ಬಯಲು ರಂಗ ಮಂದಿರದಲ್ಲಿಸಂಭ್ರಮ ಕಳೆಗಟ್ಟುವಂತೆ ಮಾಡಿದರು. ಹಾಸನ ಜಿಲ್ಲೆಯ ಕೊಣನೂರು ಬಿಎಂ ಶೆಟ್ಟಿ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಜಾನಪದ ನೃತ್ಯ ಪ್ರೇಕ್ಷಕರ ಮನಗೆದ್ದಿತ್ತು. ತಮಟೆ ಸದ್ದಿಗೆ ಕುಣಿದ ಯುವತಿಯರ ವೀರಗಾಸೆ, ಪುರುಷರ ಪೂಜಾ ಕುಣಿತದ ಮೂಲಕ ಜನಪದ ಕಲೆಯನ್ನು ಕಣ್ಮುಂದೆ ತಂದು ನಿಲ್ಲಿಸಿದರು. ಮಂಡ್ಯದ ಡಿಂಪಲ್ ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ, ಮೈಸೂರಿನ ವಿಶ್ವಭಾರತಿ ನರ್ಸಿಂಗ್ ಕಾಲೇಜು ತಂಡದ ಸಮೂಹ ನೃತ್ಯ ನೋಡುಗರ ಗಮನ ಸೆಳೆದವು. ವಿದ್ಯಾರ್ಥಿಗಳ ಮಲ್ಲಕಂಬ ಪ್ರದರ್ಶನ ಯುವ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಯುವ ಸಮೂಹದ ಶಿಳ್ಳೆ, ಚಪ್ಪಾಳೆ ಮೂಲಕ ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದರು. ಸೇನಾಧಿಕಾರಿಗೆ ಗೌರವ ಯುವ ಸಂಭ್ರಮ ಕಾರ್ಯಕ್ರಮ ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಚಿಕ್ಕಮಗಳೂರು ಮೂಲದ ಲೆಫ್ಟಿನೆಂಟ್ ಕರ್ನಲ್ ಜಯರಾಮ್ ಅವರನ್ನು ವೇದಿಕೆ ಆಹ್ವಾನಿಸಿ, ಸನ್ಮಾನಿಸುವ ಮೂಲ ಭಾರತೀಯ ಸೇನೆಗೆ ಗೌರವ ಸಲ್ಲಿಸಿ, ಸೇನೆ ಜತೆ ನಾವೆಲ್ಲರೂ ಇದ್ದೇವೆ ಎಂಬ ಸಂದೇಶ ಸಾರಿತು. ನೆನಪಿರಲಿ ಪ್ರೇಮ್ ಭಾಗಿ: ರಂಗೇರಿದ್ದ ಯುವ ಸಂಭ್ರಮ ಲವ್ಲಿಸ್ಟಾರ್ ನೆನಪಿರಲಿ ಪ್ರೇಮ್ ಮತ್ತು ಸ್ಪಾರ್ಕ್ ಚಿತ್ರದ ನಾಯಕ ನಟ ನಿರಂಜನ್ ಸುಧೀಂದ್ರ ಅವರ ಆಗಮನದಿಂದ ಮತ್ತಷ್ಟು ಕಳೆಗಟ್ಟಿತ್ತು. ಸ್ಪಾರ್ಕ್ ಚಿತ್ರತಂಡದೊಂದಿಗೆ ಆಗಮಿಸಿದ ಪ್ರೇಮ್ , ತಮ್ಮ ಚೊಚ್ಚಲ ಚಿತ್ರ ನೆನಪಿರಲಿ ಚಿತ್ರದ ‘ಯಾರೀ ಎದುರುಕೊಳ್ಳೋರು, ಬೆದರುಕೊಳ್ಳೋರು’ ಚಿತ್ರದ ಹಾಡು ಹಾಡುವ ಮೂಲಕ ಯುವಕರನ್ನು ರಂಜಿಸಿದರು. ಸ್ಪಾರ್ಕ್ ಚಿತ್ರದ ಟ್ರೇಲರ್ ಪ್ರದರ್ಶಿಸಲಾಯಿತು.