ವಿಕ ಸುದ್ದಿಲೋಕ ಕಲಬುರಗಿ ‘ಮಠಾಧೀಶರು ಸರಕಾರದ ರಾಯಭಾರಿಗಳಾಗಿ, ಸೇವಕರಾಗಿ ಕೆಲಸ ಮಾಡಿದರೆ ಎಲ್ಲರಿಗೂ ಮುಕ್ತಿ ದೊರೆಯುತ್ತದೆ ಎಂದು ಸಿಎಂ ಡಿ.ಕೆ.ಶಿವಕುಮಾರ ಹೇಳಿಕೆ ನೀಡಿರುವುದು ನೋವು ತಂದಿದೆ. ಕೂಡಲೇ ನಾಡಿನ ಮಾಠಾಧೀಶರಲ್ಲಿಸಿಎಂ ಕ್ಷಮೆ ಕೇಳಬೇಕು’ ಎಂದು ನಿಡುಮಾಮಿಡಿ ಜಗದ್ಗುರು ಮಠದ ಪೀಠಾಧಿಪತಿ ವೀರಭದ್ರ ಚನ್ನಮಲ್ಲದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು. ನಗರದ ಸುಲಫಲ ಮಠದಲ್ಲಿಮಂಗಳವಾರ ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಗೆ ಗೌರವಾರ್ಪಣಾ ಕಾರ್ಯಕ್ರಮದಲ್ಲಿಮಾತನಾಡಿದರು. ಇತ್ತೀಚೆಗೆ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನದಲ್ಲಿಸಿಎಂ ಮಾತನಾಡಿದ್ದು ತುಂಬಾ ನೋವು ತಂದಿದೆ. ಸರಕಾರದ ಪರವಾಗಿ ಇರಬೇಕು ಎನ್ನುವುದು ತಪ್ಪಲ್ಲ. ಆದರೆ, ಸರಕಾರದ ರಾಯಭಾರಿಗಳಾಗಿ, ಸೇವಕರಾಗಿ ಸೇವೆ ಮಾಡಿದರೆ ಮಾತ್ರ ನಿಮಗೆ ಮುಕ್ತಿ ಎಂಬ ರೀತಿ ಮಾತನಾಡುವುದು ಅನುಚಿತ. ಮಠಾಧಿಪತಿ ಯಾವುದೇ ರಾಜಕಾರಣಿ ಅಥವಾ ಪಕ್ಷದ ಸೇವೆ ಮಾಡಲು ಇರುವವರಲ್ಲ. ಅವರು ಸಮಾಜ ಹಾಗೂ ಸಾರ್ವಜನಿಕರ ಸೇವೆ, ಮಾರ್ಗದರ್ಶನಕ್ಕಾಗಿ ಇದ್ದಾರೆ. ಮುಖ್ಯಮಂತ್ರಿಯಾದವರು ಸಂಯಮ ಹಾಗೂ ಔಚಿತ್ಯ ಮೀರಿ ಮಾತನಾಡಬಾರದು ಎಂದರು. ಈ ಹಿಂದೆ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು, ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರು ಈ ರೀತಿ ಲಘುವಾಗಿ ಮಾತನಾಡುವ ಹೇಳಿಕೆಗಳನ್ನು ಕೇಳಿಲ್ಲ. ಆದಿ ಚುಂಚನಗಿರಿ, ಶೃಂಗೇರಿ, ಪೇಜಾವರ ಪೀಠದವರು ಇದ್ದ ವೇದಿಕೆಯಲ್ಲಿಈ ರೀತಿ ಹೇಳಿಕೆ ನೀಡಿದ್ದರೆ ಯಾರಾದರೂ ಹೇಳಲು ಸಾಧ್ಯವಿತ್ತಾ. ಸಿಎಂ ಡಿ.ಕೆ.ಶಿವುಕುಮಾರ ಹಿರಿಯರನ್ನು ನೋಡಿ ಕಲಿಯಬೇಕಿದೆ. ಇಡೀ ನಾಡಿನ ಗುರುವೃಂದ ಸಮ್ಮುಖದಲ್ಲಿಕ್ಷಮೆ ಕೇಳಬೇಕು. ಇನ್ಮುಂದೆ ಅವರ ಬಾಯಲ್ಲಿಇಂತಹ ಮಾತುಗಳು ಇಂದೆಂದಿಗೂ ಬರಬಾರದು, ಇಲ್ಲದಿದ್ದರೆ ಅವರ ರಾಜಕೀಯ ಭವಿಷ್ಯಕ್ಕೆ ಕಂಟಕವಾಗುತ್ತದೆ ಎಂದು ಹೇಳಿದರು.