ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಆಗ್ರಹ
ವಿಕ ಸುದ್ದಿಲೋಕ ಶಿಗ್ಗಾವಿಪತ್ರಿಕಾ ವಿತರಕರ ಕೆಲಸ ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಸಮಯಪಾಲನೆ, ಶಿಸ್ತು ಹಾಗೂ ಓದುಗರಿಗೆ ನಿತ್ಯವೂ ಸಮಯಕ್ಕೆ ಸರಿಯಾಗಿ ಪತ್ರಿಕೆ ತಲುಪಿಸುವ ಜವಾಬ್ದಾರಿ ಮಹತ್ವದ್ದಾಗಿದೆ. ಸರಕಾರ ಪತ್ರಿಕಾ ವಿತರಕರ ಹಿತ ಕಾಯುವ ನಿಟ್ಟಿನಲ್ಲಿ50 ಲಕ್ಷ ರೂ. ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆ ಮಾಡಬೇಕೆಂದು ತಾಲೂಕು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವಿರುಪಾಕ್ಷಪ್ಪ ನೀರಲಗಿ ಹೇಳಿದರು.
ಪಟ್ಟಣದಲ್ಲಿಶುಕ್ರವಾರ ನಡೆದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ‘‘ಮಳೆ, ಚಳಿ, ಗಾಳಿ ಎನ್ನದೆ ಪ್ರತಿನಿತ್ಯ ಮುಂಜಾನೆ ಪತ್ರಿಕೆಗಳನ್ನು ಮನೆ-ಮನೆಗೆ ತಲುಪಿಸುವ ವಿತರಕರ ಶ್ರಮವನ್ನು ಸರಕಾರ ಗುರುತಿಸಬೇಕು. ವಿತರಕರಿಗೆ ನಿವೇಶನ ಹಂಚಿಕೆ, ಸೂಕ್ತ ಆರೋಗ್ಯ ವಿಮೆ, ಪಿಂಚಣಿ ಹಾಗೂ ಶಾಶ್ವತ ಸಾಮಾಜಿಕ ಭದ್ರತಾ ಪ್ಯಾಕೇಜ್ ಕಲ್ಪಿಸಬೇಕು. ಬಡತನದಲ್ಲಿರುವ ವಿತರಕರ ಮಕ್ಕಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಹಾಗೂ ವಸತಿ ಸೌಲಭ್ಯ ಒದಗಿಸಬೇಕು’’ ಎಂದು ಸರಕಾರವನ್ನು ಒತ್ತಾಯಿಸಿದರು.
ತಾಲೂಕು ಕಸಾಪ ಗೌರವ ಕಾರ್ಯದರ್ಶಿ ರಮೇಶ ಹರಿಜನ ಮಾತನಾಡಿ, ‘‘ಯಾವುದೇ ಹವಾಮಾನವನ್ನೂ ಲೆಕ್ಕಿಸದೆ ನಿತ್ಯ ದೇಶ-ವಿದೇಶಗಳ ಸುದ್ದಿಗಳನ್ನು ಹೊತ್ತು ತರುವ ಪತ್ರಿಕಾ ವಿತರಕರು ನಿಜವಾದ ಶ್ರಮಿಕರು. ಅವರ ದುಡಿಮೆಗೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಸರಕಾರ ವಿತರಕರನ್ನು ಕಾರ್ಮಿಕರೆಂದು ಪರಿಗಣಿಸಿ, ವಿಮೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಬೇಕು’’ ಎಂದು ಹೇಳಿದರು.
ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ ಹುಡೆದಗೌಡ್ರ ಮಾತನಾಡಿ, ‘‘ತಂತ್ರಜ್ಞಾನ ಯುಗದಲ್ಲಿಮಾಧ್ಯಮ ಕ್ಷೇತ್ರದಲ್ಲಿಮಹತ್ತರ ಬದಲಾವಣೆಗಳಾಗಿದ್ದರೂ, ಮುದ್ರಿತ ಪತ್ರಿಕೆಗಳು ಇಂದಿಗೂ ತಮ್ಮ ಪಾರಮ್ಯ ಉಳಿಸಿಕೊಂಡಿವೆ. ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವಲ್ಲಿವಿತರಕರ ಪಾತ್ರ ಪ್ರಮುಖವಾಗಿದೆ’’ ಎಂದರು.
ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿದರು. ಪತ್ರಕರ್ತರಾದ ಸುಧಾಕರ ದೈವಜ್ಞ, ಸುರೇಶ ಯಲಿಗಾರ, ರವಿ ಉಡುಪಿ, ಸಿದ್ದರಾಮಗೌಡ ಮೆಳ್ಳಾಗಟ್ಟಿ, ಶಿವು ಕೊಟಗಿಮಠ, ಪ್ರವೀಣ ಇಚ್ಚಂಗಿಮಠ, ನಿರಂಜನ ಮುದ್ದಾಪುರ, ಪ್ರಕಾಶ ಹರಿಗೊಂಡ, ಪ್ರೀತಂ ಪವಾರ, ವಿಶ್ವ ಪವಾರ, ಮುತ್ತು ಬಂಡಿವಡ್ಡರ, ಹನುಮಂತಪ್ಪ ಜವಳಿಗಟ್ಟಿ, ಸುಜೇಂದ್ರ ಹುಡೇದ, ದರ್ಶನ ಯಲಿಗಾರ ಸೇರಿದಂತೆ ವಿತರಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪೋಟೋ 4 ಎಸ್ ಜಿಎನ್ 3
ಶಿಗ್ಗಾವಿ ಪಟ್ಟಣದಲ್ಲಿಕೇಕ್ ಕತ್ತರಿಸುವ ಮೂಲಕ ಪತ್ರಿಕಾ ವಿತರಕರ ದಿನ ಆಚರಿಸಲಾಯಿತು.