ಮೊಳಕಾಲ್ಮುರು : ಪಟ್ಟಣದ ತಾಲೂಕು ಆಡಳಿತ ಸೌಧ ಎದುರು ತಾಲೂಕನ್ನು ಬರಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಬಿಜೆಪಿ ಹಾಗೂ ರೈತರಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿಅತ್ಯಂತ ಕಡಿಮೆ ಮಳೆ ಬೀಳುವ ಚಳ್ಳಕೆರೆ, ಮೊಳಕಾಲ್ಮುರು ತಾಲೂಕುಗಳಾಗಿದ್ದು, ಇದರಲ್ಲಿಚಳ್ಳಕೆರೆ ಬರಪಟ್ಟಿಗೆ ಸೇರಿಸಿ ಮೊಳಕಾಲ್ಮುರು ಕೈಬಿಟ್ಟಿರುವುದು ಅಚ್ಚರಿಯ ಸಂಗತಿಯಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ಶಾಸಕರಿದ್ದರೂ ತಾಲೂಕಿನ ರೈತರಿಗೆ ಅನ್ಯಾಯ ಮಾಡಲಾಗಿದೆ. ಇದು ಕಾಂಗ್ರೆಸ್ ಸರಕಾರದ ನಿರ್ಲಕ್ಷ ಧೋರಣೆಯಾಗಿದೆ ಎಂದರು.
ಮಾಜಿ ಶಾಸಕ ಎಸ್ .ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿಯೇ ಕಡಿಮೆ ಮಳೆ ಬೀಳುವ ಮೊಳಕಾಲ್ಮುರನ್ನು ರಾಜ್ಯ ಸರಕಾರವು ಬರಪೀಡಿತ ಎಂದು ಮೊದಲನೇ ಪಟ್ಟಿಯಲ್ಲಿಘೋಷಿಸಬೇಕಿತ್ತು. ಇಲ್ಲಿನ ಶಾಸಕರ ನಿರ್ಲಕ್ಷ, ಅಧಿಕಾರಿಗಳ ಬೇಜವಾಬ್ದಾರಿತನ ಎದ್ದುಕಾಣುತ್ತಿವೆ. ಇನ್ನಾದರೂ ಸರಕಾರವು ತಾಲೂಕನ್ನು ಬರಪಟ್ಟಿಗೆ ಸೇರಿಸಿ ಈ ಭಾಗದ ರೈತರ ನೆರವಿಗೆ ಬರಬೇಕಿದೆ ಎಂದರು.