ವಿಕ ಸುದ್ದಿಲೋಕ ಮಂಗಳೂರು
ಮೀನುಗಾರಿಕೆ ದಕ್ಕೆಯಲ್ಲಿಮೀನಿನ ವ್ಯಾಪಾರ ನಡೆಸುತ್ತಿದ್ದ ರೌಡಿ ಶೀಟರ್ ಟ್ಯಾಬ್ಲೆಟ್ ಆರಿಫ್ (46) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅರ್ಶದ್ , ಪುಚ್ಚೆ ನಿಸಾಕ್ ಮತ್ತು ಜುನೈದ್ ಬಂಧಿತ ಆರೋಪಿಗಳು. ಆರಿಫ್ ಮೇಲಿನ ದಾಳಿ ಮತ್ತು ಹತ್ಯೆಯ ಸಂಚಿನಲ್ಲಿಈ ಆರೋಪಿಗಳ ಪಾತ್ರ ಇರುವುದು ತನಿಖೆ ವೇಳೆ ಗೊತ್ತಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಆರೋಪಿಗಳ ಪೈಕಿ ಅರ್ಶದ್ ಎಂಬಾತ ಹತ್ಯೆ ಸಂಚಿನಲ್ಲಿಭಾಗಿಯಾಗಿರುವ ಜತೆಗೆ, ಆರೋಪಿಗಳಿಗೆ ಆಯುಧಗಳನ್ನೂ ಒದಗಿಸಿದ್ದ. ತಪ್ಪಿಸಿಕೊಳ್ಳುವ ಸಂದರ್ಭ ಪೊಲೀಸರ ಚಲನವಲನದ ಮಾಹಿತಿ, ವಾಹನ ಹಾಗೂ ಖರ್ಚಿಗೆ ಹಣವನ್ನೂ ಕೊಟ್ಟು ಸಹಕರಿಸುತ್ತಿದ್ದ.
ಪುಚ್ಚೆ ನಿಸಾಕ್ ಈ ಪ್ರಕರಣದಲ್ಲಿಆರೋಪಿಯಾಗಿಲ್ಲ. ಆದರೆ ಫೆಬ್ರವರಿಯಲ್ಲಿಆರಿಫ್ ಹತ್ಯೆಯ ಸಂಚು, ದಾಳಿ ಯತ್ನದಲ್ಲಿಭಾಗಿಯಾಗಿದ್ದ. 2022ರಲ್ಲಿನಡೆದಿದ್ದ ದಾಳಿಯಲ್ಲಿಯೂ ಭಾಗಿಯಾಗಿದ್ದ. ಇನ್ನೊಬ್ಬ ಆರೋಪಿ ಜುನೈದ್ ವಾಹನ ಒದಗಿಸಿದ್ದ. ಫೆಬ್ರವರಿಯ ದಾಳಿ ಯತ್ನದಲ್ಲಿಭಾಗಿಯಾಗಿದ್ದ ತಂಡದ ಸದಸ್ಯನಾಗಿದ್ದ.
ಮಾ.27ರಂದು ನಸುಕಿನ ವೇಳೆ ಆರಿಫ್ ಮಂಗಳೂರು ಬಂದರಿನಲ್ಲಿರುವ ದಕ್ಕೆಗೆ ತನ್ನ ಬುಲೆಟ್ ಬೈಕ್ ನಲ್ಲಿತೆರಳುತ್ತಿದ್ದಾಗ ಇನ್ನೋವಾ ಕಾರಿನಲ್ಲಿಬಂದಿದ್ದ ದುಷ್ಕರ್ಮಿಗಳು ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈಓವರ್ ಮೇಲೆ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆಸಿ ಬಳಿಕ ತಲವಾರಿನಿಂದ ಕಡಿದು ಹತ್ಯೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಮೂವರ ಬಂಧನದೊಂದಿಗೆ ಬಂಧಿತ ಆರೋಪಿಗಳ ಸಂಖ್ಯೆ 10ಕ್ಕೇರಿದೆ.

