- ಸರಕಾರದ ಆದಾಯ ವೃದ್ಧಿಗೆ ಸಜ್ಜಾದ ಹೊಸ ಅಬಕಾರಿ ನೀತಿ.
ವಿಕ ಸುದ್ದಿಲೋಕ ಬೆಂಗಳೂರು
ಪ್ರೀಮಿಯಂ ಲಿಕ್ಕರ್ ಗೆ ಉತ್ತೇಜನ ನೀಡುವ ಸಲುವಾಗಿಯೇ ಎಐಬಿ(ಆಲ್ಕೋಹಾಲ್ ಇನ್ ಬಿವರೇಜ್ ) ಸುಂಕ ವಿಧಿಸುವ ನೂತನ ಪದ್ಧತಿಯನ್ನು ಜಾರಿಗೆ ತರಲು ಸರಕಾರ ಮುಂದಾಗಿದೆ.
ಸದ್ಯ ರಾಜ್ಯದ ಮಾರುಕಟ್ಟೆಯಲ್ಲಿಅಗ್ಗದ ಮದ್ಯಗಳ (ಕಡಿಮೆ ಬೆಲೆಯ ಲಿಕ್ಕರ್ ) ಮಾರಾಟ ಶೇ 90ರಷ್ಟಿದ್ದರೆ, ದುಬಾರಿ ಮದ್ಯಗಳ (ಪ್ರೀಮಿಯಂ ಬ್ರಾಂಡ್ ಲಿಕ್ಕರ್ ) ಮಾರಾಟ ಶೇ 10ರಷ್ಟಿದೆ. ಸರಕಾರ ಈಗಾಗಲೇ ಮದ್ಯ ಮಾರಾಟದ ಮೇಲೆ ತೆರಿಗೆ, ಹೆಚ್ಚುವರಿ ತೆರಿಗೆಗಳನ್ನು ವಿಧಿಸಿ ಗರಿಷ್ಠ ಪ್ರಮಾಣವನ್ನು ತಲುಪಿದ್ದು, ಇನ್ನೂ ತೆರಿಗೆ ವಿಧಿಸುವುದು ಕಷ್ಟಕರ. ಹೀಗಾಗಿ, ಎಐಬಿ ಜಾರಿ ಮೂಲಕ ಗ್ರಾಹಕರನ್ನೇ ಪ್ರೀಮಿಯಂ ಬ್ರಾಂಡ್ ಗಳ ಮದ್ಯ ಸೇವನೆಗೆ ಪ್ರೋತ್ಸಾಹಿಸುವುದು, ಆ ಮೂಲಕ ಶೇ 10ರಷ್ಟಿರುವ ಪ್ರೀಮಿಯಂ ಮದ್ಯ ಮಾರಾಟವನ್ನು ಶೇ 90ಕ್ಕೆ ಹೆಚ್ಚಿಸಿ ಸಹಜವಾಗಿಯೇ ಆದಾಯ ವೃದ್ಧಿಸುವುದು ಸರಕಾರದ ಉದ್ದೇಶವಾಗಿದೆ.
ಅಗ್ಗದ ಮದ್ಯಗಳು ತುಟ್ಟಿ:
ಸದ್ಯ ಚಾಲ್ತಿಯಲ್ಲಿರುವ ಪ್ರಮಾಣ ಆಧಾರಿತ ತೆರಿಗೆ ವ್ಯವಸ್ಥೆ ಬದಲಾಯಿಸಿ, ನಿಜವಾದ ಆಲ್ಕೋಹಾಲ್ ಅಂಶದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಎಐಬಿ ಅನ್ವಯ ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಹೆಚ್ಚಿನ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಅಗ್ಗದ ಬೆಲೆಯ ವಿಸ್ಕಿ, ರಮ…, ಬ್ರಾಂಡಿ ಮತ್ತು ಜಿನ್ ಸೇರಿದಂತೆ ದೇಶೀಯ ಮದ್ಯಗಳ (ಐಎಂಎಲ್ ) ದರಗಳು ಶೇ 20ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಸದ್ಯ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್ ಪಿ) ಆಧಾರದ ಮೇಲೆ ವಿವಿಧ ಸ್ಪ್ಯಾಬ್ ಗಳಲ್ಲಿಮದ್ಯ ಮಾರಾಟವಾಗುತ್ತಿದ್ದು, ಹೊಸ ವ್ಯವಸ್ಥೆ ಜಾರಿಯಾದರೆ ಕಡಿಮೆ ಆದಾಯ ವರ್ಗದವರು ಬಳಸುವ ಮೊದಲ ನಾಲ್ಕು ಸ್ಪ್ಯಾಬ್ ಗಳ ಮದ್ಯಗಳು ಹೆಚ್ಚು ದುಬಾರಿಯಾಗಲಿವೆ.
ಅಗ್ಗದ ಮದ್ಯಗಳಲ್ಲಿಸರಾಸರಿ ಆಲ್ಕೋಹಾಲ್ ಪ್ರಮಾಣವು ಶೇ 42.8ರಷ್ಟಿದೆ. ಮೊದಲ ನಾಲ್ಕು ಸ್ಪ್ಯಾಬ್ ಗಳ ಮದ್ಯಗಳು ಅಬಕಾರಿ ಆದಾಯದಲ್ಲಿಶೇ 80ರಷ್ಟು ಪಾಲು ಹೊಂದಿದ್ದು, ಹಿಂದಿನ ವರ್ಷ 180 ಮಿ.ಲೀ. ಮದ್ಯದ ಬೆಲೆಯು 80ರಿಂದ 95 ರೂ.ಗೆ ಏರಿಕೆಯಾಗಿತ್ತು. ಹೊಸ ತೆರಿಗೆ ವ್ಯವಸ್ಥೆಯಲ್ಲಿ105ರಿಂದ 110 ರೂ.ವರೆಗೆ ದರ ಏರಿಕೆಯಾಗುವ ಸಾಧ್ಯತೆಯಿದೆ. ಇದರಿಂದ ಮಧ್ಯಮ ಮತ್ತು ಕಡಿಮೆ ಆದಾಯದ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಎಐಬಿ ನೀತಿಯಿಂದ ಮದ್ಯದ ಉದ್ಯಮದಲ್ಲಿಗಮನಾರ್ಹ ಬದಲಾವಣೆಯಾಗಲಿದ್ದು, ಸಾಮಾನ್ಯ ಗ್ರಾಹಕರಿಂದ ಹಿಡಿದು ಉದ್ಯಮ ವಲಯದವರೆಗೆ ಇದರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಬಾಕ್ಸ್ ...
ಸ್ಪ್ಯಾಬ್ ಪದ್ಧತಿಗೆ
ಇನ್ಮೇಲೆ ಗುಡ್ ಬೈ
ಪ್ರಸ್ತುತ ಇರುವ ಮದ್ಯದ 16 ಸ್ಪ್ಯಾಬ್ ಗಳಧಿನ್ನು ಹೊಸ ವ್ಯವಸ್ಥೆಯಲ್ಲಿ8ಕ್ಕೆ ಇಳಿಸಲಾಗುತ್ತದೆ. ಮುಂದೆ ಹಂತ-ಹಂತವಾಗಿ ಸ್ಪ್ಯಾಬ್ ಪದ್ಧತಿಯಧಿನ್ನು ಸಂಪೂರ್ಣ ಕೈಬಿಟ್ಟು, ಮದ್ಯದ ದರ ನಿಗದಿ ಅಧಿಕಾರವನ್ನು ಉತ್ಪಾದಕರಿಗೆ ನೀಡಲಿದೆ. ಇದರಿಂದ ಉತ್ಪಾದಕರ ನಡುವೆ ಸ್ಪರ್ಧೆ ಎದುರಾಗಿ ಮಾರುಕಟ್ಟೆ ಸ್ಥಿತಿಗತಿಗೆ ಅನುಗುಣವಾಗಿ ಹೆಚ್ಚು ಬ್ರಾಂಡ್ ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಲ್ಲದೆ, ದರ ನಿಗದಿಯಲ್ಲೂಪೈಪೋಟಿ ಉಂಟಾಗಲಿದೆ. ಜತೆಗೆ, ಸರಕಾರಕ್ಕೆ ಆದಾಯ ಬರಲಿದೆ. ಅಧಿಲ್ಲದೆ, ಗ್ರಾಹಕರಿಗೂ ವಿವಿಧ ಮಾದರಿಯ ಮದ್ಯಗಳು ಸಿಗಲಿವೆ.
ಎಐಬಿ ಪರಿಣಾಮಗಳು
* ಅಬಕಾರಿ ಸುಂಕದಲ್ಲಿಏಕರೂಪತೆ
* ಬಿಯರ್ , ವೈನ್ ದರ ಸ್ವಲ್ಪ ಮಟ್ಟಿಗೆ ಇಳಿಕೆ
* ಅಗ್ಗದ ಐಎಂಎಲ್ ದರ ಏರಿಕೆ ಸಾಧ್ಯತೆ
* ಮದ್ಯದ ಬೆಲೆ ನಿರ್ಧಾರದಿಂದ ಸರಕಾರ ಮುಕ್ತ
* ಮಾರುಕಟ್ಟೆ ಆಧರಿಸಿ ಉತ್ಪಾದಕರಿಗೆ ದರ ನಿಗದಿ ಅಧಿಕಾರ
* ಪ್ರಸ್ತುತ ಇರುವ ಮದ್ಯದ 16 ಸ್ಪ್ಯಾಬ್ ಗಳು 8ಕ್ಕೆ ಇಳಿಕೆ

