ಗಾಬರಿಗೊಂಡ ಮಿತ್ರರು ಯಾರಿಗೆ ಹೇಳದೆ ಮನೆಗೆ ತೆರಳಿದರು...!
ವಿಕ ಸುದ್ದಿಲೋಕ ಉಳ್ಳಾಲ
ಕೈಕಾಲು ತೊಳೆಯಲು ಪಾಯಕ್ಕೆ ಇಳಿದ ಅಂಬ್ಲಮೊಗರು ನಿವಾಸಿ ಶಿವರಾಮ ಅವರ ಪುತ್ರ ಸೃಜನ್ (17)ನೀರಿನಲ್ಲಿಮುಳುಗಿ ಸಾವನ್ನಪ್ಪಿರುವ ಘಟನೆ ಅಂಬ್ಲಮೊಗರು ಝರಿ ಎಂಬಲ್ಲಿಶನಿವಾರ ರಾತ್ರಿ ನಡೆದಿದೆ.
ಶನಿವಾರ ಮಧ್ಯಾಹ್ನ ನಾಲ್ವರು ಗೆಳೆಯರು ಮೀನು ಹಿಡಿಯಲು ತೆರಳಿದ್ದು, ಮೀನು ಹಿಡಿದ ಬಳಿಕ ನಾಲ್ವರು ಸಮೀಪದಲ್ಲೇ ಇರುವ ಇಟ್ಟಿಗೆಗೆ ಮಣ್ಣು ತೆಗೆಯಲೆಂದು ಮಾಡಲಾದ ನೀರು ತುಂಬಿದ ಪಾಯದಲ್ಲಿಕೈಕಾಲು ತೊಳೆಯಲು ಇಳಿದಿದ್ದಾರೆ. ಆ ಸಂದರ್ಭ ಸೃಜನ್ ಆಯತಪ್ಪಿ ನೀರಿನಲ್ಲಿಮುಳುಗಿದ್ದಾರೆ. ಅಲ್ಲಿಸೃಜನ್ ನನ್ನು ಒಬ್ಬಾತ ಕೈಯಿಂದ ಹಿಡಿಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಆತನೂ ನೀರಿಗೆ ಬೀಳುವ ಸಂಭವ ಇದ್ದರೂ ಕೂಡಲೇ ಇತರ ಇಬ್ಬರು ಆತನನ್ನು ರಕ್ಷಿಸಿದ್ದಾರೆ. ಗಾಬರಿಗೊಂಡ ಬಾಲಕರು ವಿಷಯವನ್ನು ಯಾರಿಗೂ ತಿಳಿಸದೆ ಮನೆಗೆ ತೆರಳಿದ್ದಾರೆ. ಸಂಜೆಯಾದರೂ ಸೃಜನ್ ಮನೆಗೆ ಬಾರದಿರುವುದನ್ನು ಕಂಡು ಜತೆಗಿದ್ದವರನ್ನೇ ಪ್ರಶ್ನಿಸಿದಾಗ ಮೀನು ಹಿಡಿದ ಬಳಿಕ ಕೈ ಕಾಲು ತೊಳೆದು ದನಗಳ ಹುಡುಕಾಟಕ್ಕೆ ತೆರಳಿದ್ದಾನೆ ಎಂದು ತಿಳಿಸಿದ್ದರು. ಅವರ ಮಾತಿನಿಂದ ಸಂಶಯಗೊಂಡ ಮನೆಮಂದಿ ಗದರಿ ಕೇಳಿದಾಗ ಸತ್ಯ ಸಂಗತಿ ತಿಳಿಸಿದ್ದಾರೆ. ತಕ್ಷಣ ಕೊಣಾಜೆ ಪೊಲೀಸರು ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಡಿ ರಾತ್ರಿ 11.30ಕ್ಕೆ ಮೃತದೇಹ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

