ಬೇಸಿಗೆಗೆ ಮುತ್ತಿನ ಗತ್ತು
ಇಂಟ್ರೊ: ಬೇಸಿಗೆಗೆ ಆರಾಮ ಭಾವ ನೀಡುವ ಮುತ್ತುಗಳ ಆಭರಣ ಆಯ್ಕೆ ಮಾಡಿ. ವಿಭಿನ್ನ ಬಣ್ಣ, ವಿನ್ಯಾಸಗಳ ಮುತ್ತುಗಳು ವಿಭಿನ್ನ ಆಭರಣಗಳಲ್ಲಿಸಿಂಗಾರಗೊಂಡು ಸೆಳೆಯುತ್ತಿವೆ.
ಲವಲವಿಕೆ ಸುದ್ದಿಲೋಕ
ಈ ವರ್ಷದ ಬೇಸಿಗೆಯ ಫ್ಯಾಷನ್ ಜಗತ್ತಿನಲ್ಲಿಮುತ್ತುಗಳ ಬಳಕೆ ಹೊಸ ರೂಪ ಪಡೆದಿದೆ. ಅಜ್ಜಿಯ ಕಾಲದ ಸಾಂಪ್ರದಾಯಿಕ ಒಡವೆ ಎಂಬ ಇಮೇಜ್ ಬದಿಗಿಟ್ಟು, ಇವು ಈಗಿನ ಕಾಲದ ಟ್ರೆಂಡಿ ಆಭರಣಗಳಾಗಿ ಹೊರಹೊಮ್ಮಿವೆ. ಸಾಮಾನ್ಯ ದಿನಗಳಿಂದ ಹಿಡಿದು ಸಮಾರಂಭದವರೆಗೂ ವೈವಿಧ್ಯಮಯ ಆಭರಣಗಳ ಜೊತೆಗೆ ಸಂಯೋಗ ಹೊಂದಿ ತನ್ನನ್ನು ಇನ್ನಷ್ಟು ಸಿಂಗರಿಸಿಕೊಂಡು ಸರ್ವಕಾಲಕ್ಕೂ ಸಲ್ಲುವ ಆಭರಣವಾಗಿ ಮುತ್ತು ಮೋಡಿ ಮಾಡುತ್ತದೆ. ಬೇಸಿಗೆಗೂ ಒಂದಷ್ಟು ಹೊಸತನದೊಂದಿಗೆ ಹೊರಹೊಮ್ಮಿದೆ. ವಿಭಿನ್ನ ಆಕಾರ, ಬಣ್ಣಗಳಲ್ಲಿಹೆಣ್ಣುಮಕ್ಕಳ ಮನ ಗೆದ್ದಿದೆ.
ಬರೋಕ್ ಮುತ್ತುಗಳು: ಸಂಪೂರ್ಣ ಗೋಲಾಕಾರದಲ್ಲಿಲ್ಲದ, ವಿಭಿನ್ನ ಆಕಾರದ ಮುತ್ತುಗಳೇ ಈ ಬಾರಿಯ ವಿಶೇಷ. ಇವು ನೋಡಲು ಕಲಾತ್ಮಕವಾಗಿ ಕಾಣುತ್ತವೆ. ಲಿನನ್ ಸೀರೆಗಳು ಅಥವಾ ಕಾಟನ್ ಕುರ್ತಾಗಳ ಜೊತೆ ಇವು ಅತ್ಯುತ್ತಮವಾಗಿ ಒಪ್ಪುತ್ತವೆ. ಕಚೇರಿಯ ಸಭೆಗಳಿಗೆ ಬಿಳಿ ಶರ್ಟ್ ನೊಂದಿಗೆ ಬರೋಕ್ ಮುತ್ತಿನ ಪೆಂಡೆಂಟ್ ಧರಿಸುವುದು ಒಂದು ವೃತ್ತಿಪರ ಲುಕ್ ನೀಡುತ್ತದೆ.
ಮುತ್ತು ಮತ್ತು ಲೋಹಗಳ ಮಿಶ್ರಣ : ಬರೀ ಮುತ್ತುಗಳ ಬದಲಿಗೆ ಚಿನ್ನದ ಚೈನುಗಳು, ಬಣ್ಣದ ಮಣಿಗಳು ಅಥವಾ ಎನಾಮಲ್ ಜೊತೆಗೆ ಮುತ್ತುಗಳನ್ನು ಜೋಡಿಸುವುದು ಈಗಿನ ಟ್ರೆಂಡ್ .
ಲೇಯರ್ಡ್ ನೆಕ್ಲೇಸ್ ಮತ್ತು ಸ್ಟಡ್ಸ್ : ಮುತ್ತಿನ ಚೈನ್ ಜೊತೆಗೆ ಸಣ್ಣ ಚಿನ್ನದ ಹಾರವನ್ನು ಲೇಯರ್ ಮಾಡಿ ಧರಿಸುವುದು ಹೊಸ ಮೆರುಗು ನೀಡುತ್ತದೆ. ವಿಭಿನ್ನ ಉದ್ದದ ಮುತ್ತಿನ ಸರಗಳನ್ನು ಒಟ್ಟಿಗೆ ಧರಿಸುವುದು ಕ್ಯಾಫ್ಟನ್ ಅಥವಾ ಡೀಪ್ -ನೆಕ್ ಬ್ಲೌಸ್ ಗಳಿಗೆ ಚೆನ್ನಾಗಿ ಕಾಣಿಸುತ್ತದೆ. ದಿನನಿತ್ಯದ ಕಚೇರಿ ಕೆಲಸಕ್ಕೆ ಅಥವಾ ಕಾಲೇಜಿಗೆ ಮುತ್ತಿನ ಓಲೆಗಳು ಸರಳ ಹಾಗೂ ಸುಂದರ. ಇವುಗಳನ್ನು ಚಿಕನ್ -ಕಾರಿ ಕುರ್ತಾಗಳ ಜೊತೆ ಧರಿಸಬಹುದು.
ಬಣ್ಣದ ಮುತ್ತುಗಳು: ಬಿಳಿ ಮಾತ್ರವಲ್ಲದೆ, ತಿಳಿ ಗುಲಾಬಿ , ಲ್ಯಾವೆಂಡರ್ ಮತ್ತು ಚಾಂಪೇನ್ ಬಣ್ಣದ ಮುತ್ತುಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ಇವುಗಳು ಬೇಸಿಗೆಯ ತಿಳಿ ಬಣ್ಣದ ಉಡುಪುಗಳಿಗೆ ಹೇಳಿಮಾಡಿಸಿದಂತಿವೆ.
ಬ್ರೇಸ್ ಲೆಟ್ ಮತ್ತು ಕಾಲುಂಗುರ: ಮುತ್ತುಗಳು ಕೇವಲ ಕುತ್ತಿಗೆ ಅಥವಾ ಕಿವಿಗೆ ಮಾತ್ರ ಸೀಮಿತವಾಗಿಲ್ಲ. ರಜಾದಿನಗಳಲ್ಲಿಅಥವಾ ಬೀಚ್ ಮದುವೆಗಳಲ್ಲಿಮುತ್ತಿನ ಕಾಲುಂಗುರಗಳು ಮತ್ತು ಕೈಬಳೆಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.
ಬಾಕ್ಸ್
ಬೇಸಿಗೆಯಲ್ಲಿಮುತ್ತುಗಳ ನಿರ್ವಹಣೆ ಹೇಗೆ?
ಮುತ್ತುಗಳು ತುಂಬಾ ಸೂಕ್ಷ್ಮವಾಗಿದ್ದು, ಬೇಸಿಗೆಯ ಬೆವರಿನಿಂದ ಅವುಗಳ ಹೊಳಪು ಮಂಕಾಗಬಹುದು. ಹಾಗಾಗಿ ಮುತ್ತುಗಳನ್ನು ಧರಿಸುವ ಮೊದಲೇ ಪರ್ ಫ್ಯೂಮ್ ಅಥವಾ ಲೋಷನ್ ಹಚ್ಚಿಕೊಳ್ಳಿ. ಬಳಸಿದ ನಂತರ ಮೆತ್ತನೆಯ ಬಟ್ಟೆಯಿಂದ ಬೆವರನ್ನು ಒರೆಸಿಡಿ. ಬೇರೆ ಆಭರಣಗಳ ಜೊತೆ ಇಡಬೇಡಿ, ಮುತ್ತುಗಳ ಮೇಲೆ ಗೀರು ಬೀಳದಂತೆ ಸಣ್ಣ ಪೌಚ್ ನಲ್ಲಿಪ್ರತ್ಯೇಕವಾಗಿಡಿ.

