ನಿರ್ವಹಣೆ ಕೊರತೆ | ಕುಸ್ತಿಗೆ ನಿರಾಸಕ್ತಿ | ಅನಾಥವಾಗಿ ಬಿದ್ದ ಪರಿಕರ
ಅವಸಾನದತ್ತ ಸಾಗಿದ ಗರಡಿಮನೆ
-ಕುಸ್ತಿ ಪ್ರೋತ್ಸಾಹಿಸುವ ಸ್ಪರ್ಧೆಗಳ ಕೊರತೆ
ಶಂಕರ ರಡ್ಡೇರ, ಕಲಘಟಗಿ
ರಾಜಮಹಾರಾಜರ ಕಾಲದಲ್ಲಿಗರಡಿಮನೆಗಳಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗಿತ್ತು. ಯುವಕರನ್ನು ಕುಸ್ತಿ ಪಟುಗಳನ್ನಾಗಿ ಮಾಡುವಲ್ಲಿಗರಡಿಮನೆಗಳ ಪಾತ್ರ ಪ್ರಮುಖವಾಗಿತ್ತು. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿಗರಡಿಮನೆಗಳು ಅವಸಾನದ ಅಂಚಿಗೆ ಬಂದು ತಲುಪಿವೆ.
ಗರಡಿಮನೆಯಲ್ಲಿರೂಪುಗೊಂಡ ಕಲಘಟಗಿ ತಾಲೂಕಿನ ಅನೇಕ ಪೈಲವಾನರು ರಾಜ್ಯ ಮಟ್ಟದಲ್ಲಿಹೆಸರು ಮಾಡಿದ್ದರು. ಇದೀಗ ಗರಡಿಮನೆಗಳು ನಿರ್ವಹಣೆ ಇಲ್ಲದೇ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಲ್ಲಿರುವ ಪರಿಕರಗಳು ದಾರಿಯಲ್ಲಿಬಿದ್ದಿವೆ.
ಕಳೆಗುಂದಿದ ಕ್ರೀಡೆ
ಪ್ರತಿವರ್ಷ ಪಟ್ಟಣದ ಗುಡ್ಡದ ಆಂಜನೇಯನ ದೇವಸ್ಥಾನದ ಆವರಣದಲ್ಲಿಹನುಮ ಜಯಂತಿ ನಿಮಿತ್ತ ಕುಸ್ತಿ ಪಂದ್ಯಾವಳಿ ನಡೆಯುತ್ತಿದ್ದವು. ವಿಜೇತ ಕುಸ್ತಿಪಟುಗೆ ಬೆಳ್ಳಿಗಧೆ ನೀಡಲಾಗುತ್ತಿತ್ತು. ಆದರೆ ಇಂದಿನ ಯುವಕರು ಹಳೆಯ ಮಾದರಿಯ ಗರಡಿ ಮನೆಗಳತ್ತ ಬರುತ್ತಿಲ್ಲ. ಗ್ರಾಮಗಳಲ್ಲಿಕುಸ್ತಿ ಆಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಯುವಕರು ವೈಯಕ್ತಿಕ ಆಟಕ್ಕಿಂತ ಗುಂಪು ಆಟಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಹಿರಿಯ ಕುಸ್ತಿಪಟುವೊಬ್ಬರು ಹೇಳುತ್ತಾರೆ.
ಗ್ರಾಮೀಣ ಆಟಗಳಿಗೆ ಸರಕಾರದಿಂದ ಸಕಾಲದಲ್ಲಿಪ್ರೇರಣೆ ಸಿಗದ ಕಾರಣ ಪೈಲವಾನರು ಮತ್ತು ಕಸರತ್ತು ಪ್ರದರ್ಶಿಸುವವರು ಮುಂದೆ ಬರುತ್ತಿಲ್ಲ. ಮೊದಲು ಹಬ್ಬದ ಸಂದರ್ಭಗಳಲ್ಲಿ, ಹೋಳಿಹಬ್ಬದ ವೇಳೆ ಹಳ್ಳಿಗಳಲ್ಲಿಯುವಕರು ದೊಡ್ಡ ದೊಡ್ಡ ಸಾಂಗಣೂರಿ ಕಲ್ಲುಎತ್ತಿ ಶಕ್ತಿ ಪ್ರದರ್ಶಿಸುತ್ತಿದ್ದರು. ಪ್ರತಿ ಗ್ರಾಮದಲ್ಲಿಯುವಕರ ತಂಡ ಇಂತಹ ಪ್ರದರ್ಶನ ಮಾಡಲು ಮುಂದಾಗುತ್ತಿತ್ತು. ಈಗಿನ ಯುವಕರು ಜಿಮ್ ಗಳ ಮೊರೆ ಹೋಗಿದ್ದಾರೆ. ಅವರಿಗೆ ಗರಡಿಮನೆಗಳ ಮಹತ್ವದ ಅರಿವು ಇಲ್ಲ. ಈ ಬಗ್ಗೆ ಅರಿವು ಮೂಡಿಸುವವರೂ ಇಲ್ಲವಾಗಿದೆ. ಯುವಕರಲ್ಲಿಮೊಬೈಲ್ , ರೀಲ್ಸ್ , ದುಶ್ಚಟ ಗೀಳು ಹೆಚ್ಚಾಗಿದೆ, ಅವರಿಗೆ ಕುಸ್ತಿಯ ಬಗ್ಗೆ ಆಸಕ್ತಿ ಬರುವುದಾದರೂ ಹೇಗೆ ಎಂದು ವಿಷಾದಿಸುತ್ತಾರೆ ಹಿರಿಯ ಕುಸ್ತಿಪಟುಗಳು.
ಕೋಟ್
ಇಂದಿನ ಆಹಾರ ಪದ್ಧತಿ ಹಾಗೂ ನಿತ್ಯ ಜೀವನ ಕ್ರಮಗಳಿಂದ ಯುವಕರಿಗೆ ಗರಡಿಮನೆಯಲ್ಲಿತಾಕತ್ತು ಪ್ರದರ್ಶನ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಕಾಲದಲ್ಲಿಮನೆಗೆ ಒಬ್ಬ ಯುವಕನನ್ನು ಪೈಲವಾನ ಆಗಿ ತಯಾರು ಮಾಡಲು ಹಿರಿಯರು ಪ್ರಯತ್ನಿಸುತ್ತಿದ್ದರು.
-ಶಿವಾಜಿ ವಾಘ್ಮೋಡೆ, ಹಿರಿಯ ಕುಸ್ತಿಪಟು
ಕೋಟ್
ಸರಕಾರ ಕೇವಲ ಮೈಸೂರು ದಸರಾದಲ್ಲಿಕುಸ್ತಿ ಪ್ರದರ್ಶನ ಮಾಡದೇ ರಾಜ್ಯದ ಪ್ರತಿಯೊಂದು ಗ್ರಾಮಗಳಲ್ಲಿಕುಸ್ತಿ ಪ್ರದರ್ಶನ ಮಾಡಲು ಯುವಕರಿಗೆ ಪ್ರೇರಣೆ ಆಗುವಂತಹ ಯೋಜನೆಗಳನ್ನು ರೂಪಿಸಬೇಕು.
-ಯಲ್ಲಪ್ಪ ದಾಸನಕೊಪ್ಪ, ಕುಸ್ತಿಪಟು, ಹಿರೇಹೊನ್ನಿಹಳ್ಳಿ ಗ್ರಾಮದ ಜಿಪಂ ಮಾಜಿ ಸದಸ್ಯರು
ಚಿತ್ರ ಇದೆ 29ಕೆ.ಎಲ್ .ಜಿ1
ನಿರ್ವಹಣೆ ಇಲ್ಲದೆ ನೆಲಸಮವಾದ ಕಲಘಟಗಿಯ ಗರಡಿಮನೆ.
ಚಿತ್ರ ಇದೆ 29ಕೆ.ಎಲ್ .ಜಿ1ಎ
ಕುಸ್ತಿ ಪಂದ್ಯಾವಳಿ ನಡೆಯುತ್ತಿದ್ದ ಕಲಘಟಗಿಯ ಗುಡ್ಡದ ಆಂಜನೇಯನ ದೇವಸ್ಥಾನದ ಆವರಣದಲ್ಲಿಗಿಡಗಂಟಿ ಬೆಳೆದಿವೆ.
ಗರಡಿಮನೆಯಲ್ಲಿಹಾಳಾಗುತ್ತಿರುವ ಪರಿಕರಗಳು.

