ಕಾಸರಗೋಡು: ಬೇಸಗೆ ರಜೆಯಾಗಿರುವುದರಿಂದ ಜ್ಯೂಸ್ -ತಂಪು ಪಾನೀಯ, ಹಣ್ಣು ಮಾರಾಟ ನಡೆಸುತ್ತಿರುವ ಮಕ್ಕಳನ್ನು ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿಕಾಣಬಹುದಾಗಿದೆ. ತಮ್ಮ ಮನೆ ಪರಿಸರದ ಸಾರ್ವಜನಿಕ ಸ್ಥಳಗಳಲ್ಲಿ ಮೇಜು, ಕುರ್ಚಿ, ಕೊಡೆ ಇರಿಸಿ ಕುಳಿತುಕೊಳ್ಳುವ ಅವರು ವ್ಯಾಪಾರದ ಬಾಲಪಾಠಗಳನ್ನು ಕಲಿಯುತ್ತಿದ್ದಾರೆ.
ಮೊಬೈಲ್ ಫೋನ್ , ಆನ್ ಲೈನ್ ಗೇಮ್ ಗಳಲ್ಲಿ ಮಗ್ನರಾಗದೆ ಸಮಯದ ಸದುಪಯೋಗ ಪಡಿಸಿ ಜೀವನ ಪಾಠವನ್ನು ಕಲಿಯುತ್ತಿರುವುದು ಹಿರಿಯರಿಗೂ ನೆಮ್ಮದಿ ನೀಡುತ್ತಿದೆ. ಮೊಬೈಲ್ ಜಗತ್ತಿನ ಗುಲಾಮರಾಗಿ ಮಾನಸಿಕ ಒತ್ತಡಕ್ಕೆ ಒಳಗಾಗದೆ ವ್ಯಾಪಾರದ ಬಾಲಪಾಠಗಳು, ಗಣಿತವನ್ನು ಕಲಿಯಲು ಇದು ನೆರವಾಗಲಿ ಎಂದು ರಕ್ಷಕರು ಅವರಿಗೆ ಉತ್ತೇಜನ ನೀಡುತ್ತಿದ್ದಾರೆ.
ನಾನಾ ರೀತಿಯ ಮಿಠಾಯಿಗಳು, ಲಿಂಬೆಹಣ್ಣಿನ ಪಾನೀಯ, ಕಲ್ಲಂಗಡಿ ಶರ್ಬತ್ , ಉಪ್ಪಿನಲ್ಲಿಹಾಕಿದ ಮಾವಿನಕಾಯಿ, ಲಿಂಬೆ, ನೆಲ್ಲಿಕಾಯಿ, ಅಂಬಡೆ, ಚರ್ಮುರಿ, ಚಿಫ್ಸ್ , ಪಾನಿಪುರಿ ಇತ್ಯಾದಿ ಪುಟಾಣಿ ಅಂಗಡಿಗಳಲ್ಲಿಲಭ್ಯವಿದೆ. ರಕ್ಷಕರು ಇದನ್ನು ತಯಾರಿಸಿ ನೀಡುತ್ತಾರೆ. ಇಬ್ಬರು-ಮೂವರು ಮಕ್ಕಳು ಸೇರಿ ತಮ್ಮ ಮನೆ ಪರಿಸರದಲ್ಲೇ ಇವುಗಳ ಮಾರಾಟ ನಡೆಸುತ್ತಾರೆ. ಪ್ರತಿವರ್ಷವು ಬೇಸಗೆ ರಜೆಯಲ್ಲಿಪುಟಾಣಿ ಅಂಗಡಿಗಳನ್ನು ನೋಡಬಹುದಾಗಿದೆ. ಆದರೆ ಕೆಲವೆಡೆಗಳಲ್ಲಿ ಹೆಣೆದ ಮಡಲುಗಳು, ಬಟ್ಟೆಗಳಿಂದ ಮುಚ್ಚಿ ಮಾದರಿಯಾಗಿ ಅಂಗಡಿ ನಡೆಸುವ ಪುಟಾಣಿಗಳೂ ಇದ್ದಾರೆ. ಸೀತಾಂಗೋಳಿ-ಉಳಿಯತ್ತಡ್ಕ-ವಿದ್ಯಾನಗರ, ಮೊಗ್ರಾಲ್ ಪುತ್ತೂರು ಮೊದಲಾದೆಡೆ ಇಂತಹ ಅಂಗಡಿಗಳನ್ನು ಧಾರಾಳ ಕಾಣಬಹುದಾಗಿದೆ. ಸಾಮಗ್ರಿಗಳನ್ನು ಖರೀದಿಸಿ ಹಿರಿಯರು ಪ್ರೋತ್ಸಾಹ ನೀಡುವುದು ಪುಟಾಣಿಗಳ ಉತ್ಸಾಹ ಹೆಚ್ಚಿಸುತ್ತದೆ.
ಚಿತ್ರ: 27ಕೆಎಸ್ ಎಲ್ ಅಂಗಡಿ-ಮೊಗ್ರಾಲ್ ಪುತ್ತೂರಿನ ಮನೆ ಪರಿಸರವೊಂದರಲ್ಲಿಮಕ್ಕಳ ಅಂಗಡಿ.

