ಚಂದನವನಕ್ಕೆ ಮರಳಿದ ಅಧ್ಯಕ್ಷರ ಐಶ್ವರ್ಯಾ
ಇಂಟ್ರೊ
ಸ್ಯಾಂಡಲ್ ವುಡ್ ನಲ್ಲಿ‘ಅಧ್ಯಕ್ಷ’ ಸಿನಿಮಾ ಮೂಲಕ ನಟಿಯಾಗಿ ಲಾಂಚ್ ಆಗಿ ಐಶ್ವರ್ಯಾ ಪಾತ್ರದ ಮೂಲಕ ಗಮನ ಸೆಳೆದಿದ್ದ ಬಹುಭಾಷಾ ತಾರೆ ಹೆಬಾ ಪಟೇಲ್ ಈಗ ಬರೋಬ್ಬರಿ 12 ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಮರಳಿದ್ದಾರೆ. ಈ ಬಗ್ಗೆ ಅವರು ಲವಲವಿಕೆಯೊಂದಿಗೆ ಮಾತನಾಡಿದ್ದಾರೆ.
ಕಿರಣ್ ಚಂದ್ರ
ತೆಲುಗಿನಲ್ಲಿ18 ಸಿನಿಮಾಗಳಲ್ಲಿನಟಿಸಿರುವ ಹೆಬಾ ಪಟೇಲ್ ಕನ್ನಡದಲ್ಲಿತಮ್ಮ ಎರಡನೇ ಚಿತ್ರಕ್ಕಾಗಿ ವಾಪಸ್ಸಾಗಿದ್ದಾರೆ. ತೆಲುಗು ಭಾಷೆಯಲ್ಲೂತೆರೆಕಾಣಲಿರುವ ಸ್ಯಾಂಡಲ್ ವುಡ್ ನ ‘ ರುದ್ರಕಾಲ ’ದಲ್ಲಿನಟ ದಿಗಂತ್ ರಿಗೆ ನಾಯಕಿಯಾಗಿರುವ ಅವರು ತಮಿಳು ಸಿನಿಮಾ ಒಂದರಲ್ಲೂನಟಿಸುತ್ತಿದ್ದಾರೆ. ಹೀಗೆ 12 ವರ್ಷಗಳ ನಂತರ ಅವರು ಒಟ್ಟಿಗೆ ಮೂರು ಭಾಷೆಗಳಲ್ಲೂನಟಿಸುತ್ತಿರುವುದು ವಿಶೇಷ.
ನೀವು ಕನ್ನಡಕ್ಕೆ ವಾಪಸ್ಸಾಗಲು ಯಾಕಿಷ್ಟು ವಿಳಂಬ?
ಇದು ಯೋಜಿತ ಗ್ಯಾಪ್ ಅಲ್ಲ. 2014ರಲ್ಲಿನನ್ನ ನಟನೆಯ ‘ಅಧ್ಯಕ್ಷ’, 2015ರಲ್ಲಿತೆಲುಗಿನಲ್ಲಿ‘ಕುಮಾರಿ 21ಎಫ್ ’ ಸಿನಿಮಾಗಳು ಬಿಡುಗಡೆಯಾದವು. ‘ಅಧ್ಯಕ್ಷ’ ಬಳಿಕ ಬಾರದ ಅವಕಾಶಗಳು ‘ಕುಮಾರಿ 21ಎಫ್ ’ ಬಳಿಕ ಕನ್ನಡದಲ್ಲಿಬರಲು ಶುರುವಾಯಿತು. ಇದಕ್ಕೆ ಕಾರಣ ಗೊತ್ತಾಗಲಿಲ್ಲ. ಆದರೆ ನಾನು ತೆಲುಗಿನಲ್ಲಿತುಂಬಾ ಬಿಝಿ ಆಗಿಬಿಟ್ಟೆ. ಕನ್ನಡದಲ್ಲಿಕೆಲವು ಸ್ಕಿ್ರಪ್ಟ್ ಗಳನ್ನು ಕೇಳಿದರೂ ಯಾವುದೂ ಇಷ್ಟವಾಗಲಿಲ್ಲ.
ಕನ್ನಡಕ್ಕೆ ಮರಳಲು ‘ರುದ್ರಕಾಲ’ ಏಕೆ?
‘ಅಧ್ಯಕ್ಷ’ ಸಿನಿಮಾ ಮಾಡುವಾಗ ನಾನಿನ್ನೂ ಚಿಕ್ಕ ಹುಡುಗಿ. ಅದರಲ್ಲಿನನ್ನ ಪಾತ್ರ ಎಷ್ಟು ಮುಖ್ಯವಾಗಿತ್ತು ಎಂದು ನನಗಾಗ ತಿಳಿದಿರಲಿಲ್ಲ. ಅಂಥದ್ದೇ ಚಿತ್ರ ಬೇಕು ಎಂದೇನಿಲ್ಲ. ಹಾಗಂತ ಸಾಮಾನ್ಯ ಸಿನಿಮಾಗಳಲ್ಲಿನಟಿಸಲು ನಾನು ಸಿದ್ಧಳಿಲ್ಲ. ಕನ್ನಡಿಗರೀಗ ಸಾಧಾರಣ ಚಿತ್ರಗಳನ್ನು ನೋಡುತ್ತಿಲ್ಲ. ನನಗೆ ವೈಯಕ್ತಿಕವಾಗಿ ಕ್ರೈಂ ಥ್ರಿಲ್ಲರ್ ಗಳನ್ನು ನೋಡಲು ಇಷ್ಟ. ಕನ್ನಡದಲ್ಲಿ‘ರುದ್ರಕಾಲ’ ನನ್ನ ಪಾಲಿಗೆ ಮೊದಲ ಕ್ರೈಂ ಥ್ರಿಲ್ಲರ್ ಸಿನಿಮಾ.
ಈಗ ಕನ್ನಡ ಚಿತ್ರೋದ್ಯಮ ಹೇಗನಿಸುತ್ತಿದೆ?
ಈ ವಿಷಯದಲ್ಲಿನನಗೆ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಇವೆಲ್ಲವೂ ಚಿತ್ರತಂಡದ ಮೇಲೆ ಅವಲಂಬಿಸಿರುತ್ತದೆ. ನಾನು ಸ್ಯಾಂಡಲ್ ವುಡ್ ಗೆ ಮರಳಿರುವುದಕ್ಕೆ ಖುಷಿ ಇದೆ. ಕನ್ನಡ ಸಿನಿಮಾ ಮೂಲಕ ಮೊದಲಿಗಿಂತ ಈಗ ಹೆಚ್ಚು ರೀಚ್ ಆಗಬಹುದೆಂಬ ಭರವಸೆ ನನಗಿದೆ.
ಕನ್ನಡ, ತೆಲುಗು, ತಮಿಳು ಚಿತ್ರರಂಗಗಳಲ್ಲಿಕೆಲಸ ಎಷ್ಟು ವಿಭಿನ್ನ?
ಕೆಲಸದಲ್ಲಿಅಂಥ ವ್ಯತ್ಯಾಸವೇನಿಲ್ಲ. ವಾತಾವರಣ, ಹವಾಮಾನ ಬದಲಾಗುತ್ತದೆ ಮತ್ತು ಆಹಾರ ವಿಭಿನ್ನವಾಗಿರುತ್ತದೆ ಅಷ್ಟೆ. ಚೆನ್ನೈ, ಬೆಂಗಳೂರು, ಹೈದರಾಬಾದ್ ನಲ್ಲಿದೋಸೆ ಸಿಕ್ಕಿದರೂ ಮೂರು ರೀತಿಯಲ್ಲಿರುತ್ತದೆ. ದಕ್ಷಿಣ ಚಿತ್ರರಂಗ ಮೊದಲಿನಿಂದಲೂ ತನ್ನ ಕಾರ್ಯವೈಖರಿಗೆ ಖ್ಯಾತವಾಗಿದೆ. ಇಲ್ಲಿಶಿಸ್ತು, ಹೆಣ್ಣಿಗೆ ಗೌರವ ನೀಡುವುದರಲ್ಲಿನನಗೆ ವ್ಯತ್ಯಾಸ ಕಂಡಿಲ್ಲ. ಬೆಂಗಳೂರಿನ ಟ್ರಾಫಿಕ್ ಕೊಂಚ ಕಿರಿಕಿರಿ ಮಾಡಿದರೂ ಇಲ್ಲಿನ ಊಟ ನನಗಿಷ್ಟ.
ನಿಮಗೆ ಸಿನಿಮಾ ಕ್ವಾಲಿಟಿ ಅಥವಾ ಕ್ವಾಂಟಿಟಿ ಮುಖ್ಯವೋ?
ಇವೆರಡೂ ನನಗೆ ಮುಖ್ಯವಾಗುತ್ತವೆ. ಕೆಲವು ಆತ್ಮತೃಪ್ತಿಗೆ, ಕೆಲವು ಹೊಟ್ಟೆಪಾಡಿಗೆ. ನಾನು ಇಂಥದ್ದೇ ಪಾತ್ರ ಮಾಡಬೇಕೆಂದು ಕಾಯುವುದಿಲ್ಲ. ನನಗೆ ಕಥೆ ಕೇಳಿದ ಕ್ಷಣದಲ್ಲಿಇಷ್ಟವಾದರೆ ಓಕೆ ಹೇಳುತ್ತೇನೆ. ಗೊಂದಲ ಇದ್ದರೆ ಕೆಲವು ಫ್ರೆಂಡ್ಸ್ ಜತೆಗೆ ಚರ್ಚಿಸುತ್ತೇನೆ. ನಿರ್ಮಾಪಕರು, ನಿರ್ದೇಶಕರ ಕಥೆ ಹೇಳುವ ವಿಧಾನ ಮನವರಿಕೆಯಾದರೆ ಒಪ್ಪಿಕೊಳ್ಳುತ್ತೇನೆ.
ನಟ ಶರಣ್ ರನ್ನು ಮತ್ತೆ ಭೇಟಿಯಾಗಿದ್ದೀರಾ?
ಹೌದು, ಇತ್ತೀಚೆಗೆ ಕನ್ನಡದ ‘ರಾಮರಸ’ ಚಿತ್ರದಲ್ಲಿಅವರೊಂದಿಗೆ ಒಂದು ಸ್ಪೆಷಲ್ ಸಾಂಗ್ ನಲ್ಲಿಕಾಣಿಸಿಕೊಂಡಿದ್ದೇನೆ. ಆಗ ಅವರು ಮಾತನಾಡುವಾಗ ನಾನು ಬದಲಾಗಿಯೇ ಇಲ್ಲ, ಮೊದಲಿನಷ್ಟೇ ಯಂಗ್ ಆಗಿದ್ದೇನೆ ಎಂದಿದ್ದರು.
ನಟಿಯಾಗಿ ಓಟಿಟಿ ನಿಮಗೆಷ್ಟು ಮುಖ್ಯ?
2018-19ರಲ್ಲಿನನ್ನ ಸಿನಿಮಾಗಳು ಫ್ಲಾಪ್ ಆದಾಗ 2020ರಲ್ಲಿಓಟಿಟಿಗೆ ‘ಒಡೆಲಾ ರೈಲ್ವೆ ಸ್ಟೇಷನ್ ’ ಚಿತ್ರದಲ್ಲಿನಟಿಸಿದೆ. ನಾನಾಗ ಅವಕಾಶಗಳಿಲ್ಲದೆ ಮನೆಯಲ್ಲಿಸುಮ್ಮನೇ ಕುಳಿತಿದ್ದೆ ಎಂಬ ಕಾರಣಕ್ಕೆ ಈ ಸಿನಿಮಾದಲ್ಲಿನಟಿಸಿದ್ದೆ. ಆದರೆ ಅದು ನನಗೆ ಓಟಿಟಿ ಮಾರ್ಕೆಟ್ ಸೃಷ್ಟಿಸಿತು. ಇತ್ತೀಚೆಗೆ ರಿಲೀಸ್ ಆಗಿರುವ ನನ್ನ ನಟನೆಯ ತೆಲುಗು ಸಿನಿಮಾ ‘ಈಶ’ ಇಂದಿಗೂ ಟ್ರೆಂಡಿಂಗ್ ನಲ್ಲಿದೆ.
ನೀವು ಯಾವುದೇ ವಿವಾದ ಮಾಡಿಕೊಂಡಿಲ್ಲ. ಹೇಗೆ?
ನಾನು ಮೊದಲಿನಿಂದಲೂ ನಟನೆಯನ್ನಷ್ಟೇ ನನ್ನ ವೃತ್ತಿ ಮಾಡಿಕೊಂಡಿದ್ದೇನೆ. ಪ್ಯಾಕಪ್ ಆದ ತಕ್ಷಣ ಸಿನಿಮಾ ಬಗ್ಗೆ ಯೋಚಿಸುವುದನ್ನು ನಿಲ್ಲಿಸುತ್ತೇನೆ. ಏನಾದರೂ ತಪ್ಪಾಗಿದ್ದರೆ ಆ ಬಗ್ಗೆ ಮಾತ್ರ ಮಾತನಾಡುತ್ತೇನೆ. ನನ್ನ ಸಹನಟರು, ನಿರ್ಮಾಪಕರ ಜತೆಗೆ ಪಾರ್ಟಿ ಮಾಡುವುದಿಲ್ಲ, ಹ್ಯಾಂಗ್ ಔಟ್ ಇರಲ್ಲ. ನನ್ನ ಫ್ರೆಂಡ್ಸ್ ಗ್ಯಾಂಗ್ ಕೂಡ ಚಿತ್ರರಂಗದವರಲ್ಲ. ನಟಿಯಾಗಿ ನಾನು ಸ್ವಲ್ಪ ಸ್ವಾರ್ಥಿ. ಸಿನಿಮಾದವರಿಗಿಂತ ನನಗೆ ಎಂಜಿನಿಯರ್ ಗಳು ಹೆಚ್ಚು ಇಷ್ಟವಾಗುತ್ತಾರೆ.

