ವಿಕ ಸುದ್ದಿಲೋಕ ಬೆಂಗಳೂರು
ಎಲ್ ಪಿಜಿ ಇಂಧನ ಪೂರೈಕೆ ವ್ಯತ್ಯಯದಿಂದ ಆಟೊ ಚಾಲಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ರಾಜ್ಯ ಸರಕಾರ ಆಟೊ ಚಾಲಕರಿಗೆ ತಲಾ 15 ಸಾವಿರ ರೂ. ಪರಿಹಾರ ಘೋಷಿಸಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಪಕ್ಷದ ಆಟೊ ಘಟಕದ ರಾಜ್ಯಾಧ್ಯಕ್ಷ ಆಯೂಬ್ ಖಾನ್ , ‘‘ಯುದ್ಧದ ಪರಿಣಾಮಗಳನ್ನು ಅಂದಾಜಿಸುವಲ್ಲಿವಿಫಲಗೊಂಡಿರುವ ಕೇಂದ್ರ ಸರಕಾರ ಸೂಕ್ತ ಇಂಧನ ವ್ಯವಸ್ಥೆ ಮಾಡಿಕೊಳ್ಳದೆ, ಜನಸಾಮಾನ್ಯರು ಪರಿತಪಿಸುವಂತಾಗಿದೆ. ಗ್ಯಾಸ್ ಸಿಲಿಂಡರ್ , ಎಲ್ ಪಿಜಿ ಬಂಕ್ , ಕಾಳಸಂತೆಯಲ್ಲಿದುಪ್ಪಟ್ಟು ದರದಲ್ಲಿರಾಜಾರೋಷವಾಗಿ ಮಾರಾಟವಾಗುತ್ತಿದ್ದರೂ, ಸರಕಾರದ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ,’’ ಎಂದು ದೂರಿದರು.
‘‘ಸಂಕಷ್ಟದ ಜೀವನ ನಡೆಸುತ್ತಿರುವ ಆಟೊ ಚಾಲಕರ ಕುಟುಂಬಗಳ ರಕ್ಷಣೆಗೆ ರಾಜ್ಯ ಸರಕಾರ ಮುಂದಾಗಬೇಕು. ಕೂಡಲೇ 15 ಸಾವಿರ ರೂ. ಸಹಾಯಧನ ಘೋಷಿಸಬೇಕು. ಆಟೊ ಚಾಲಕರು ಮಾತ್ರವಲ್ಲದೆ, ಸಣ್ಣ ಹೋಟೆಲ್ ಮಾಲೀಕರು, ಗಿಗ್ ಕಾರ್ಮಿಕರ ರಕ್ಷಣೆಗೆ ಮುಂದಾಗಬೇಕು,’’ ಎಂದು ಕೋರಿದ್ದಾರೆ.
ಈ ವೇಳೆ ಪಕ್ಷದ ಪದಾಧಿಕಾರಿಗಳಾದ ಸೀತಾರಾಮ್ ಗುಂಡಪ್ಪ, ಡಾ. ಸತೀಶ್ ಕುಮಾರ್ , ಫಾರೂಖ್ ಅಹ್ಮದ್ ಉಪಸ್ಥಿತರಿದ್ದರು.

