ವಿಕ ಸುದ್ದಿಲೋಕ ತುಮಕೂರು
ಬಿಜೆಪಿ , ಆರ್ ಎಸ್ ಎಸ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವುದು ಮಲ್ಲಿಕಾರ್ಜುನ ಅವರಿಗೆ ಶೋಭೆಯಲ್ಲ. ದೇಶ ಮೊದಲು ಆಮೇಲೆ ಪಕ್ಷ ಹಾಗೂ ವ್ಯಕ್ತಿ ಎಂಬ ಧ್ಯೇಯದ ಆರ್ ಎಸ್ ಎಸ್ ಮಾರ್ಗದರ್ಶನದಲ್ಲಿಬಿಜೆಪಿ ಆಡಳಿತ ನಡೆಸುತ್ತಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದ ಬಿಜಿಎಸ್ ವೃತ್ತದಲ್ಲಿಬಿಜೆಪಿ ಹಾಗೂ ಆರ್ ಎಸ್ ಎಸ್ ವಿಷ ಸರ್ಪ ಇದ್ದಂತೆ ಎಂದು ಹೇಳಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿಮಾತನಾಡಿದ ಅವರು, ಶಾಂತಿ ಪ್ರಿಯತೆಗೆ ಹೆಸರಾದ ಬೌದ್ಧಧರ್ಮ ಪ್ರತಿಪಾದಿಸುವ ಖರ್ಗೆಯವರು, ಅಲ್ಪಸಂಖ್ಯಾತರನ್ನು ಹಿಂದೂಗಳ ಮೇಲೆ ಎತ್ತಿಕಟ್ಟುವ ಮಾತುಗಳು ಆಕ್ಷೇಪಾರ್ಹ. ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ನಾಯಕರು ಡಿಐಜಿ ಭೇಟಿ ಮಾಡಿದ್ದಾರೆ. ಖರ್ಗೆ ಅವರ ಮಾತುಗಳನ್ನು ಉಗ್ರವಾಗಿ ಖಂಡಿಸುತ್ತೇವೆ, ಅವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಬಿಜೆಪಿ ಅಧ್ಯಕ್ಷ ಎಚ್ .ಎಸ್ . ರವಿಶಂಕರ್ ಹೆಬ್ಬಾಕ ಮಾತನಾಡಿ, ಅಲ್ಪಸಂಖ್ಯಾತರ ಓಲೈಕೆಗಾಗಿ ಮಲ್ಲಿಕಾರ್ಜುನ ಖರ್ಗೆಯವರು ಆರ್ ಎಸ್ ಎಸ್ , ಬಿಜೆಪಿಯನ್ನು ವಿಷ ಸರ್ಪಕ್ಕೆ ಹೋಲಿಕೆ ಮಾಡಿರುವುದು ಖಂಡನೀಯ. ಬಿಜೆಪಿ ಯಾವತ್ತೂ ಮುಸ್ಲೀಮರನ್ನು ವಿರೋಧ ಮಾಡಿಲ್ಲ, ಯಾರೇ ಆಗಲಿ ದೇಶದ್ರೋಹಿಗಳನ್ನು ಸಹಿಸುವುದಿಲ್ಲ. ಮತ ಓಲೈಕೆಗಾಗಿ ಖರ್ಗೆಯವರು ಕೀಳುಮಟ್ಟದ ಹೇಳಿಕೆ ನೀಡುವುದನ್ನು ಬಿಡಬೇಕು ಎಂದರು.
ಈ ಸಂದರ್ಭದಲ್ಲಿರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್ , ನಿಕಟಪೂರ್ವ ನಗರಅಧ್ಯಕ್ಷ ಟಿ.ಎಚ್ . ಹನುಮಂತರಾಜು, ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ನವಚೇತನ್ , ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ, ಜಿಲ್ಲಾವಕ್ತಾರ ಟಿ.ಆರ್ . ಸದಾಶಿವಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್ , ಸಿ.ಎನ್ .ರಮೇಶ್ , ಮಲ್ಲಿಕಾರ್ಜುನ್ , ಇಂದ್ರಕುಮಾರ್ ಹಾಜರಿದ್ದರು.
ಫೋಟೋ 10ಕೆಜಿಎಚ್ 4: ತುಮಕೂರಿನ ಬಿಜಿಎಸ್ ವೃತ್ತದಲ್ಲಿಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

