ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್ . ಭರವಸೆ
ಸಮಸ್ಯೆ ಪರಿಹಾರಕ್ಕೆ ಕಟ್ಟುನಿಟ್ಟಿನ ಕ್ರಮ
ವಿಕ ಸುದ್ದಿಲೋಕ ವಿಜಯಪುರ
‘‘ಎಸ್ ಸಿ, ಎಸ್ ಟಿ ವರ್ಗಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಇರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ,’’ ಎಂದು ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್ . ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿಎಸ್ ಸಿ, ಎಸ್ ಟಿ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಕುಂದು-ಕೊರತೆ ಸಭೆ ನಡೆಸಿದ ಅವರು, ‘‘ಭೂವ್ಯಾಜ್ಯ, ದೌರ್ಜನ್ಯ, ನಕಲಿ ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯವನ್ನು ರಾಜ್ಯಾದ್ಯಂತ ಚುರುಕುಗೊಳಿಸಲಾಗುವುದು,’’ ಎಂದರು.
‘‘ಸಭೆಯಲ್ಲಿಸ್ವೀಕರಿಸಲಾದ ದೂರು, ನ್ಯೂನತೆಗಳನ್ನು ಆಯೋಗ ಗಂಭೀರವಾಗಿ ಪರಿಗಣಿಸಿ ತ್ವರಿತ ಪರಿಹಾರ ಕಲ್ಪಿಸಲಾಗುವುದು. ವಿವಿಧ ಜಿಲ್ಲೆಗಳಲ್ಲಿಆಲಿಸಿದ ಹಾಗೂ ಸ್ವೀಕರಿಸಲಾದ ಅಹವಾಲುಗಳ ಕುರಿತ ವರದಿಯನ್ನು ಸಿಎಂಗೆ ಸಲ್ಲಿಸಲಾಗುವುದು,’’ ಎಂದು ತಿಳಿಸಿದರು.
ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ‘‘ಭೂ ಒಡೆತನ, ಹೆಚ್ಚುವರಿ ಜಮೀನು ಸಮಸ್ಯೆಗಳಿವೆ. ಮುಗ್ಧ ಜನರು ಜಮೀನು ಕಳೆದುಕೊಂಡ ಪ್ರಕರಣಗಳಿವೆ. ನೊಂದವರಿಗೆ ನ್ಯಾಯ ಕಲ್ಪಿಸಬೇಕು,’’ ಎಂದು ಕೋರಿದರು.
ರಾಜಶೇಖರ ಕೂಚಬಾಳ ಮಾತನಾಡಿ, ‘‘ಪೌರ ಕಾರ್ಮಿಕರಿಗೆ ಸಮರ್ಪಕ ವೇತನ ನೀಡಲು ಕ್ರಮ ವಹಿಸಬೇಕು,’’ ಎಂದು ಮನವಿ ಮಾಡಿದಾಗ, ಸಂಬಂಧಿಸಿದಂತೆ ಜಿಲ್ಲಾಅಧಿಕಾರಿಗೆ ಸೂಚನೆ ನೀಡುವುದಾಗಿ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು.
---
ನಿರ್ದಾಕ್ಷಿಣ್ಯ ಕ್ರಮ
ನಾಗಪ್ಪ ವಡ್ಡರ ಮಾತನಾಡಿ, ‘‘ಸರಕಾರದ ಮಾರ್ಗಸೂಚಿಗಳನ್ವಯ ಜಾತಿ ಪ್ರಮಾಣ ಪತ್ರ ನೀಡಲಿಕ್ಕೆ ಆಯೋಗ ಗಂಭೀರ ಕ್ರಮ ಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು. ಆಯೋಗದ ಅಧ್ಯಕ್ಷರ ಪ್ರತಿಕ್ರಿಯಿಸಿ, ‘‘ನಕಲಿ ಜಾತಿ ಪ್ರಮಾಣ ಪತ್ರದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತಿದೆ,’’ ಎಂದರು.
ರಾಜಪಾಲ ಚವ್ಹಾಣ ಮಾತನಾಡಿ, ‘‘ಎಸ್ ಸಿ ಕಾಲೊನಿಗಳು, ತಾಂಡಾಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು,’’ ಎಂದರು.
---
ಸಮಸ್ಯೆ ಸ್ಪಂದಿಸುವ ಭರವಸೆ
ರಾವುತ್ ತಳಕೇರಿ, ಪ್ರಕಾಶ ಗುಡಿಮನಿ, ರಮೇಶ ಆಸಂಗಿ, ಭೀಮರಾಯ ಜಿಗಜಿಣಗಿ, ಶ್ರೀನಾಥ ಪೂಜಾರಿ, ಸಿದ್ದು ರಾಯಣ್ಣವರ ನಾನಾ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು.
ಅಧ್ಯಕ್ಷ ಡಾ.ಮೂರ್ತಿ ಅವರು, ‘‘ಗೋಮಾಳ ಜಮೀನು, ಅಸ್ಪೃಶ್ಯತೆ ನಿವಾರಣೆ, ಕಾರ್ಮಿಕರ ವೇತನ, ವಸತಿ ನಿಲಯಗಳ ನಿರ್ವಹಣೆ, ಮನೆ ನಿರ್ಮಾಣ, ಪೌರ ಕಾರ್ಮಿಕರಿಗೆ ವೇತನ ಪಾವತಿ ಸೇರಿದಂತೆ ಅನೇಕ ಅರ್ಜಿಗಳನ್ನು ಸ್ವೀಕರಿಸಿದ್ದು, ಆಯೋಗ ಸ್ಪಂದಿಸಲಿದೆ,’’ ಎಂದು ಭರವಸೆ ನೀಡಿದರು.

