ಯಾವುದೇ ಸಹಕಾರಿ ಸಂಘಗಳು ತಮ್ಮ ಸದಸ್ಯರು ಹಾಗೂ ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿಶ್ರಮವಹಿಸಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘‘ದೇಶದ ಜಿಡಿಪಿಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಸಹಕಾರಿ ಬ್ಯಾಂಕ್ ಗಳ ಉನ್ನತಿಗಾಗಿ ಕೇಂದ್ರ ಸರಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ವಿಕಸಿತ ಭಾರತ 2047ರ ಭಾಗವಾಗಿ ದೇಶದಲ್ಲಿಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ,’’ ಎಂದರು.
ಬ್ಯಾಂಕ್ ಅಧ್ಯಕ್ಷ ಎಂ.ಆರ್ .ವೆಂಕಟೇಶ್ ಮಾತನಾಡಿ, ‘‘ರಾಜ್ಯದಲ್ಲಿನ ಇತರೆ ಎಲ್ಲಕೋ-ಆಪರೇಟಿವ್ ಬ್ಯಾಂಕ್ ಗಳ ಪೈಕಿ ನಮ್ಮ ಬ್ಯಾಂಕ್ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅದೇ ರೀತಿ, ಯುವ ಸಮೂಹವನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದತ್ತ ಹೆಚ್ಚು ಆಕರ್ಷಿಸುವ ನಿಟ್ಟಿನಲ್ಲಿಅನೇಕ ಹೊಸ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ,’’ ಎಂದು ತಿಳಿಸಿದರು. ಇದೇ ವೇಳೆ ಬ್ಯಾಂಕ್ ನ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಶಾಸಕ ಎಲ್ .ಎ.ರವಿಸುಬ್ರಮಣ್ಯ ಹಾಗೂ ಬ್ಯಾಂಕ್ ನ ನಿರ್ದೇಶಕರು ಉಪಸ್ಥಿತರಿದ್ದರು.