ವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)ಐತಿಹಾಸಿಕ ಹಂಪಿ ಮತ್ತು ಕಿಷ್ಕಿಂದೆ ಸುತ್ತಲಿನ ಪರಿಸರದಲ್ಲಿಕಾಣಿಸಿಕೊಂಡಿರುವ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಹಂಪಿಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರಿಸಬೇಕು ಎಂದು ಹಂಪಿ ವಿಶ್ವಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಯ ಹಳ್ಳಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಹಂಪಿ ಗ್ರಾಪಂ ಪಿಡಿಒ ಗಂಗಾಧರ್ ಅವರ ಮೂಲಕ ಅರಣ್ಯ ಇಲಾಖೆಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಳೆದ ಕೆಲವು ತಿಂಗಳುಗಳ ಹಿಂದೆಯೂ ಹಂಪಿ ಸುತ್ತ್ತಲಿನ ಕಂಪ್ಲಿಹಾಗೂ ಗಂಗಾವತಿ ಸಂಪರ್ಕಿಸುವ ಸೇತುವೆ ಬಳಿ ಹುಲಿ ಪ್ರತ್ಯಕ್ಷವಾಗಿರುವ ಬಗ್ಗೆ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿವದಂತಿ ಮಾತುಗಳು ಕೇಳಿಬಂದಿದ್ದವು. ಈ ಹುಲಿಯು ಶ್ರೀಶೈಲ ಅರಣ್ಯ ಪ್ರದೇಶದಿಂದ ವಲಸೆ ಬಂದಿರಬಹುದು ಎಂದು ಅರಣ್ಯ ಸಂರಕ್ಷಣಾಕಾರರು ಮತ್ತು ಸ್ಥಳೀಯರು ಶಂಕಿಸಿದ್ದಾರೆ.
ಈ ಭಾಗದಲ್ಲಿಹುಲಿ ಕಾಣಿಸಿಕೊಂಡಿರುವುದು ಹೆಮ್ಮೆಯೆನಿಸಿದೆ. ಅಂದಿನ ಕಾಲದ ವೈಭವ ಮರುಕಳಿಸಿದಂತಾಗಿದ್ದು, ಸ್ಥಳೀಯರಿಗೆ ಇದು ಸಂತೋಷದ ವಿಷಯವಾಗಿದ್ದು, ವಿಜಯನಗರ ಸಾಮ್ರಾಜ್ಯದ ಗತ ವೈಭವದ ಪ್ರತೀಕವಾದ ನಮ್ಮ ಹೆಮ್ಮೆಯ ಶ್ರೀ ಕೃಷ್ಣದೇವರಾಯನೇ ಬಂದಂತಾಗಿದೆ ಎಂದು ಸಂಘ ಹರ್ಷ ವ್ಯಕ್ತಪಡಿಸಿದೆ. ಪ್ರತ್ಯಕ್ಷವಾಗಿರುವ ಹುಲಿಯು ಗಂಡು ಹುಲಿಯಾಗಿದ್ದರೆ ಅದಕ್ಕೆ ’ ಶ್ರೀಕೃಷ್ಣದೇವರಾಯ’ ಅಥವಾ ಹೆಣ್ಣು ಹುಲಿಯಾಗಿದ್ದರೆ ಅದಕ್ಕೆ ’ಲಕ್ಷ್ಮಿ’ ಎಂದು ನಾಮಕರಣ ಮಾಡಬೇಕು. ಇದು ಸ್ಥಳೀಯರ ನಂಬಿಕೆಯ ಭಾವನೆಯಾಗಿದೆ. ಇದರ ಜತೆಗೆ, ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಹಂಪಿಯ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಸ್ಥಳಾಂತರಿಸಬೇಕು,’’ ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ವಿರೂಪಾಕ್ಷಿ ವಿ. ಹಂಪಿ, ಮುಖಂಡರಾದ ಎಚ್ . ಹುಲುಗಪ್ಪ, ಹನುಮಂತ, ನಾಗಮ್ಮ ಸೇರಿದಂತೆ ಸ್ಥಳೀಯರು, ಪ್ರವಾಸಿ ಮಾರ್ಗದರ್ಶಿಗಳು, ಆಟೋ ಚಾಲಕರು ಇತರರಿದ್ದರು.
ಫೋಟೊ: ವಿಜೆಎನ್ 25ಜಯಪ್ಪ05: ಹುಲಿ ಸೆರೆಹಿಡಿದು ಹಂಪಿ ಮೃಗಾಲಯಕ್ಕೆ ಸ್ಥಳಾಂತರಿಸಲು ಒತ್ತಾಯಿಸಿ ಹಂಪಿ ಗ್ರಾಪಂ ಪಿಡಿಒ ಗಂಗಾಧರ ಅವರಿಗೆ ಮನವಿ ಸಲ್ಲಿಸಲಾಯಿತು.