k್ಝ್ಛ್ಚ್ಟ್ಛ್ಛ3

Contributed byshubha.hegde@timesgroup.com|Vijaya Karnataka
unique monsoon music festival barkha ritu art and culture
ವೈಶಾಲಿ ಕೆ.ಎಸ್

ಸಂತೃಪ್ತಿಯ ಸುರಿಮಳೆಗೈದ ಸಂಗೀತೋತ್ಸವ
ಮಳೆಗಾಲದ ವಿಶೇಷ ಸಂಗೀತೋತ್ಸವ ‘ ಬರ್ಖಾ ಋುತು ’ವಿನ ಕಾರ್ಯಕ್ರಮ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿವೈಭವದಿಂದ ನಡೆಯಿತು.

ಮೂಲತಃ ಕರ್ನಾಟಕದ ರುದ್ರಪಟ್ಟಣದ ಕೊಳಲು ವಾದಕ ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಅವರ ವೇಣು ವಾದನದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಿಂದ ಮೊದಲ ಗೋಷ್ಠಿ ಪ್ರಾರಂಭಗೊಂಡಿತು. ಸಮಕಾಲೀನ ಜ್ಯಾಸ್ ಸಂಗೀತದ ಆಲ್ಬಂಅನ್ನು ಹೊರತಂದಿರುವ ಕಲಾವಿದ ಶಶಾಂಕ್ ಮೋಹನ ರಾಗದಿಂದ ಕಛೇರಿ ಆರಂಭಿಸಿದರು. ಸಾವಧಾನದ ಮಧುರ ಆಲಾಪನೆಯ ಮೂಲಕ ಮೋಹನ ರಾಗದ ಸ್ವರೂಪವನ್ನು ಅನಾವರಣಗೊಳಿಸಿದ ಅವರು, ಬೆರಗುಗೊಳಿಸುವ ಕಲ್ಪನಾ ಸ್ವರಗಳ ಜೋಡಣೆ ಹಾಗೂ ತಾನ್ ಗಳಿಂದ ಸಭಿಕರ ಪ್ರಶಂಸೆಗೆ ಪಾತ್ರರಾದರು.

ತ್ಯಾಗರಾಜರ ನನ್ನ ಪಾಲಿಪ ಎಂಬ ಜನಪ್ರಿಯ ಕೃತಿಯನ್ನು ಆಯ್ಕೆ ಮಾಡಿಕೊಂಡು, ಕೃತಿಯ ಬೆಳವಣಿಗೆಯಲ್ಲಿತಲೆದೂಗಿಸುವ ನೆರವಲ್ ಮತ್ತು ಆಕರ್ಷಕ ಸಂಚಾರಗಳಿಂದ ಮನಸೆಳೆದರು. ವಿದ್ವಾನ್ ಸಾಯಿ ಗಿರಿಧರ್ ಮೃದಂಗ ವಾದನವು ಆದಿ ತಾಳದ ಈ ಕೃತಿಯ ನಿರೂಪಣೆಗೆ ಕಳೆಕಟ್ಟಿತು. ತನಿ ಆವರ್ತನದಲ್ಲಿಸಾಯಿ ಗಿರಿಧರ್ ವೇಗದ ಲಯ ವಿನ್ಯಾಸಗಳನ್ನು ಮಂಡಿಸಿ, ರೋಮಾಂಚಕಾರಿಯಾಗಿ ಮುಕ್ತಾಯಗೊಳಿಸಿದರು.ಈ ಕಾರ್ಯಕ್ರಮದ ಮತ್ತೊಂದು ಸ್ವಾರಸ್ಯಕರ ಸಂಗತಿಯೆಂದರೆ, ರಾಜಸ್ಥಾನಿ ಜನಪದ ಕಲಾವಿದರಾದ ಲಂಗಾ ತಂಡದೊಡನೆ ವಿದ್ವಾನ್ ಶಶಾಂಕ್ ಮತ್ತು ವಿದ್ವಾನ್ ಸಾಯಿ ಗಿರಿಧರ್ ಜುಗಲಬಂದಿ ಪ್ರಯೋಗದಲ್ಲಿಪಾಲ್ಗೊಂಡಿದ್ದು. ಪಶ್ಚಿಮ ರಾಜಸ್ಥಾನದ ಥಾರ್ ಮರುಭೂಮಿ ಪ್ರಾಂತ್ಯಕ್ಕೆ ಸೇರಿದ ಲಂಗಾ ಕಲಾವಿದರು ಮರುಭೂಮಿಯ ಗೀತೆಗಳು ಹಾಗೂ ಸೂಫಿಯಾನ ಕಲಂಗಳನ್ನು ಪ್ರಸ್ತುತಪಡಿಸುವ ಮೌಖಿಕ ಸಂಪ್ರದಾಯದವರಾಗಿದ್ದಾರೆ. ಈ ಜುಗಲಬಂದಿಯಲ್ಲಿಲಂಗಾ ಸಂಪ್ರದಾಯದ ಗಾಯಕ ಆಸೀಂ ಖಾನ್ ಲಂಗಾ, ಸಾರಂಗಿ ವಾದಕ ಭಾನ್ವರುಖಾನ್ ಲಂಗಾ ಮತ್ತು ಢೋಲಕ್ ವಾದಕ ಲತೀಫ್ ಖಾನ್ , ಶಶಾಂಕ್ ತಂಡದೊಡನೆ ಸೇರಿ ಸುಂದರ ಅನುಭವವನ್ನು ನೀಡಿದರು.

ಸಾರಂಗಿಯಲ್ಲಿಬೃಂದಾವನಿ ಸಾರಂಗ್ ಹಾಗೂ ದೇಸ್ ರಾಗಗಳ ಮಧುರ ನುಡಿಸಾಣಿಕೆಯಿಂದ ನಾಂದಿ ಹಾಡಿದ ಈ ಅಪರೂಪದ ಸಂಗಮಕ್ಕೆ ಜನಪದ ಗಾಯಕ ಅಸೀಂ ಖಾನ್ ತಮ್ಮ ಕಂಚಿನ ಸಿರಿಕಂಠದಲ್ಲಿದನಿಗೂಡಿಸಿದರು. ತಾರಸ್ಥಾಯಿಯಲ್ಲಿಲೀಲಾಜಾಲವಾಗಿ ಮರುಭೂಮಿಯ ಗುಡ್ಡಗಾಡು ಜನರ ಪ್ರೇಮ ವಿರಹ ಗೀತೆಗಳನ್ನು ಹಾಡುತ್ತಾ, ಶಾಸ್ತ್ರೀಯ ಸಂಗೀತದಲ್ಲಿಅಧಿಕವಾಗಿ ಪ್ರಚಲಿತಗೊಂಡಿರುವ ಈ ರಾಗಗಳ ಜನಪದ ತಳಹದಿಯನ್ನು ಮನೋಜ್ಞವಾಗಿ ಅಭಿವ್ಯಕ್ತಗೊಳಿಸಿದರು. ಅಸೀಂ ಅವರ ಬಾಲಮ್ ಜೀ ಮಾರಾ, ಸಾಹೇಬ್ ಜೀ ಮಾರಾ ಗೀತೆಗೆ ಕೆಹೆರವಾ ತಾಳದಲ್ಲಿಢೋಲಕ್ ಹಿಮ್ಮೇಳವಿದ್ದರೆ, ಸಾಯಿ ಗಿರಿಧರ್ ಮೃದಂಗದಲ್ಲಿಆದಿ ತಾಳದ ಚತುಶ್ರ ನಡೆಯಲ್ಲಿಸಮರ್ಥವಾಗಿ ಸಹಕರಿಸಿದರು. ವಿದ್ವಾನ್ ಶಶಾಂಕ್ ವೇಣುವಾದನದಲ್ಲಿಸಾರಂಗ್ ಹಾಗೂ ದೇಸ್ ರಾಗಗಳ ಮೋಡಿ, ವರ್ಷಧಾರೆಯ ಸಮಯದಲ್ಲಿಪ್ರೇಮಿಯನ್ನು ನೆನೆಯುವ ರಾಜಸ್ಥಾನಿ ಗೀತೆಯೊಂದಿಗೆ ಮಿಳಿತವಾಗಿ ಸಹೃದಯರ ಮನ ತಣಿಸಿತು.

ಸಂಗೀತೋತ್ಸವದ ದ್ವಿತೀಯ ಭಾಗದಲ್ಲಿಅತ್ರೌಳಿ-ಜೈಪುರ ಘರಾಣೆಯ ಮೇರುಗಾಯಕಿ ವಿದುಷಿ ಡಾ. ಅಶ್ವಿನಿ ದೇಶಪಾಂಡೆ ಮತ್ತು ಮೇವತಿ ಘರಾಣೆಯ ಕಲಾವಿದ, ಪಂಡಿತ್ ಜಸ್ ರಾಜ್ ಶಿಷ್ಯ ಪಂಡಿತ್ ಸಂಜೀವ್ ಅಭ್ಯಂಕರ್ ಪ್ರತ್ಯೇಕವಾಗಿ ತಮ್ಮ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟರು. ಬಳಿಕ ಪಂಡಿತ್ ಜಸ್ ರಾಜ್ ರವರ ಜಸ್ ರಂಗಿ ಜುಗಲಬಂದಿಯ ಮೂಲಕ ಒಂದಾದರು.

ಗೌಡ್ ಮಲ್ಹಾರ್ ರಾಗವನ್ನು ಪ್ರಸ್ತುತಪಡಿಸಿದ ವಿದುಷಿ ಅಶ್ವಿನಿ, ವಿಲಂಬಿತ್ ತೀನ್ ತಾಳದಲ್ಲಿಮಾನನ ಕರಿಯೇ ಗೋರಿ ತುಮರೆ ಕಾರಣ್ ಹಾಗೂ ದ್ರುತ್ ಲಯದಲ್ಲಿಐಸೊ ಆಯೋ ಬೈರಿ ಬದರಾ ಎಂಬ ಎರಡು ಸುಂದರ ರಚನೆಗಳನ್ನು ವಿದ್ವತ್ಪೂರ್ಣವಾಗಿ ಮಂಡಿಸಿದರು. ವಿಲಂಬಿತ್ ತೀನ್ ತಾಳದ ಆವರ್ತನಗಳಲ್ಲಿಪ್ರಶಾಂತವಾದ ಆಲಾಪದ ಮೂಲಕ ರಾಗಲಕ್ಷಣಗಳನ್ನು ಸುಶ್ರಾವ್ಯವಾಗಿ ನಿರೂಪಿಸಿದ ಅಶ್ವಿನಿಯವರಿಗೆ, ತಬಲಾದಲ್ಲಿಯತಿ ಭಾಗವತ್ ಹಾಗೂ ಸಂವಾದಿನಿಯಲ್ಲಿಪಂಡಿತ್ ವ್ಯಾಸಮೂರ್ತಿ ಕಟ್ಟಿ ಸಹಕರಿಸಿದರು. ಮಳೆಗಾಲದ ವೈಶಿಷ್ಟ್ಯಪೂರ್ಣ ವಿರಹಗೀತೆ ಕಜರಿ ಬರಸನ ಲಾಗಿ ಸಾವನ ಬೂಂದಿಯಾ ಅವರ ಭಾವನಾತ್ಮಕ ನಿರೂಪಣೆಗೆ ಸಾಕ್ಷಿಯಾಯಿತು.

ಪಂಡಿತ್ ಸಂಜೀವ್ ಅಭ್ಯಂಕರ್ ರವರು ರೂಪಕ್ ತಾಳದಲ್ಲಿ, ಮೇಘ್ ಮಲ್ಹಾರ್ ರಾಗದ ಆಯೀ ಅತಿ ಧೂಮಧಾಮ ಬಂದಿಶ್ ಪ್ರಸ್ತುತಪಡಿಸಿದರು. ವರುಣಧಾರೆಯನ್ನೇ ಹರಿಸುವ ರಾಗವೆಂಬ ಪ್ರಖ್ಯಾತಿಯ ಈ ರಾಗವನ್ನು ಅವರು ವಿಲಂಬಿತ ಲಯದಲ್ಲಿಆಲಾಪ, ಬೋಲ್ ಆಲಾಪ, ಸರ್ ಗಮ್ , ಬೋಲ್ ತಾನ್ ಗಳಿಂದ ಹಂತ ಹಂತವಾಗಿ ಬೆಳೆಸುತ್ತಾ, ದ್ರುತ್ ಏಕ್ ತಾಲ್ ನಿಬದ್ಧ ಗರಜ್ ಘಟಾ ಘನ್ ಘೋರ ಚೀಜ್ ನ ನಿರೂಪಣೆಯಲ್ಲಿಅನೇಕ ಅಲಂಕಾರಿಕ, ಗಮಕ ತಾನ್ ಗಳಿಂದ ರಸಿಕರನ್ನು ತನ್ಮಯಗೊಳಿಸಿದರು. ಅಜಿಂಕ್ಯ ಜೋಶಿಯವರ ತಬಲಾ ಹಾಗೂ ಅಭಿಷೇಕ್ ಶಿಂಕರ್ ರವರ ಸಂವಾದಿನಿ ಸಹಕಾರ ಮೇಘಮಲ್ಹಾರದ ಸೊಬಗನ್ನು ಹೆಚ್ಚಿಸಿತು.

ಸಂಗೀತೋತ್ಸವದ ಕೊನೆಯ ಹಂತದಲ್ಲಿಜಸ್ ರಂಗಿ ಜುಗಲಬಂದಿ ಪ್ರಾರಂಭವಾಯಿತು. ಇದು ಪಂಡಿತ್ ಜಸ್ ರಾಜ್ ಅವರು ಹುಟ್ಟುಹಾಕಿದ ಒಂದು ಚಮತ್ಕಾರಿಕ ಯುಗಳ ಗಾಯನ ಪ್ರಕಾರ. ಇದರಲ್ಲಿಪಾಲ್ಗೊಳ್ಳುವ ಗಾಯಕ ಮತ್ತು ಗಾಯಕಿ ತಮ್ಮ ತಮ್ಮ ಶೃತಿಗಳಲ್ಲೇ ಮೂರ್ಚನಾ ವಿಧಾನದಿಂದ, ರಾಗದ ಮೂಲ ಸ್ವರಗಳನ್ನು ಬದಲಾಯಿಸದೇ ಸ್ಥಾನ ಪಲ್ಲಟಗೊಳಿಸಿ ಹೊಸ ರಾಗಗಳನ್ನು ಸೃಷ್ಟಿಸುತ್ತಾರೆ. ಅಸಾಧಾರಣ ನೈಪುಣ್ಯತೆ ಬೇಡುವ ಈ ವಿರಳ ಪ್ರಯೋಗದ ಮೂಲಕ ಇಬ್ಬರೂ ಮೇರುಗಾಯಕರು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.ಅಶ್ವಿನಿಯವರು ನೀಲ್ ತಾಳದಲ್ಲಿನಿಬದ್ಧಗೊಳಿಸಿದ ತಮ್ಮ ರಚನೆ ಕಾರಿಕಾರಿ ಬದರಿಯಾ ಬಂದಿಶ್ ಅನ್ನು ಮಂಗಲ್ ಭೈರವ್ ರಾಗದಲ್ಲಿಹಾಡಿದರೆ, ಏಕಕಾಲದಲ್ಲಿಪಂಡಿತ್ ಅಭ್ಯಂಕರ್ ಪ್ರತೀಕ್ಷ ರಾಗದಲ್ಲಿಅದೇ ಮಳೆಯ ವರ್ಣನೆಯ ಬಂದಿಶನ್ನು ನೀಲ್ ತಾಳದಲ್ಲೇ ಪ್ರಸ್ತುತಪಡಿಸಿದರು. ಗಾಯಕರಿಬ್ಬರೂ ಈ ಅಮೋಘ ಜುಗಲಬಂದಿಯನ್ನು ‘ಓಂ ಶ್ರೀ ಅನಂತ ಹರಿ ನಾರಾಯಣ’ ಜಪದಿಂದ ಆರಂಭಿಸಿ, ಉಭಯ ರಾಗಗಳಲ್ಲಿದ್ರುತ್ ತೀನ್ ತಾಳದ ತರಾನಾ ಪ್ರಸ್ತುತಿಯಿಂದ ಮುಕ್ತಾಯಗೊಳಿಸಿದ್ದು ಒಂದು ಅನಿರ್ವಚನೀಯ ಅನುಭವವಾಗಿತ್ತು.

//////////////

ಶ್ರೀಲಂಕಾದಲ್ಲಿಹಾರಿದ ಮಂಗಳೂರು ಗಾಳಿಪಟ

ದಿನೇಶ್ ಹೊಳ್ಳ

ಬಣ್ಣಬಣ್ಣದ ಪತಂಗಗಳು ಆಗಸಕ್ಕೆ ತೋರಣ ಕಟ್ಟಿದಾಗ ಸೂತ್ರ ಹಿಡಿದ ಕೈಗಳು ಗೆಲುವಿನ, ನಲಿವಿನ ಪಾತ್ರಧಾರಿಗಳಾಗಿ ಸಂತಸ ಸಂಭ್ರಮಗಳ ಮೂಟೆಗಳೇ ಅಲ್ಲಿತುಂಬಿ ತುಳುಕುತಿತ್ತು. ಚಿಣ್ಣರಿಂದ ಹಿಡಿದು ವಯೋವೃದ್ಧರತನಕ ಪಟಗಳ ಪುಟ ತೆರೆಯುತ್ತಾ, ಆಗಸದಲ್ಲಿಚಿತ್ತಾರ ಬರೆಯುತ್ತಾ ಬಣ್ಣದ ಲೋಕದ ಭಿನ್ನಾಣವು ಸಿಂಚನವಾಗಿದ್ದವು. ಶ್ರೀಲಂಕಾದ ಮಾತಾರ ಕಡಲ ಕಿನಾರೆಯಲ್ಲಿಸರಾಸ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ತೆರೆದುಕೊಂಡಿದ್ದು ಹೀಗೆ.

ಕಡಲ ಕಿನಾರೆಯ ಅಲೆಗಳ ಜಿಗಿತದೊಂದಿಗೆ ಬಾನಿನನಲ್ಲಿವಿವಿಧ ಬಣ್ಣಗಳ, ವಿವಿಧ ಗಾತ್ರದ ಗಾಳಿಪಟಗಳು ಜಿಗಿಯುತ್ತಿದ್ದವು, ನಲಿಯುತ್ತಿದ್ದವು. ಗಾಳಿಪಟ ಹಾರಿಸುವ ಕಲೆಯು ಕ್ರಿಸ್ತ ಪೂರ್ವ ಕಾಲದಿಂದಲೇ ಏಷ್ಯಾ ಖಂಡದಲ್ಲಿಪ್ರಚಲಿತದಲ್ಲಿತ್ತು ಎಂಬುದನ್ನು ಚರಿತ್ರೆ ಹೇಳುತ್ತದೆ. ಆ ಕಾಲದಲ್ಲಿಗಾಳಿಪಟವು ಕ್ರೀಡೆ, ಮನರಂಜನೆಯಾಗದೇ ಜನತೆಯ ಬದುಕಿನ ಭಾಗವಾಗಿತ್ತು. ಆದುದರಿಂದ ಏಷ್ಯಾ ಖಂಡದ ಪ್ರತಿ ದೇಶದಲ್ಲೂಅವರವರ ದೇಶಕ್ಕೆ ತಕ್ಕಂತೆ ಗಾಳಿಪಟಕ್ಕೊಂದು ವಿನ್ಯಾಸ, ಆಕಾರವಿದೆ. ಶ್ರೀಲಂಕಾದ ಗಾಳಿಪಟಗಳು ಅಷ್ಟ ಭುಜ ಆಕಾರ ಹೊಂದಿದ್ದು, ಮೇಲ್ಗಡೆ ಮೂತಿಯಾಕಾರದ ತ್ರಿಭುಜವಿರುತ್ತದೆ.

ಮಾತಾರ ಕಡಲ ಕಿನಾರೆಯಲ್ಲಿಸರಾಸ ಕೈಟ್ ಫೆಸ್ಟಿವಲ್ ನಲ್ಲಿನಾವು ಕಂಡದ್ದು ಅಲ್ಲಿನ ಜನರ ಗಾಳಿಪಟ ರಚನೆ ಮತ್ತು ಹಾರಾಟದ ಉತ್ಸಾಹ ಹಾಗೂ ಆಸಕ್ತಿ. ಬಹುತೇಕ ಗಾಳಿಪಟಗಳು ಬ್ರಹತ್ ಗಾತ್ರದಲ್ಲಿಇದ್ದು ದಪ್ಪ, ದಪ್ಪದ ಬಿದಿರುಗಳನ್ನು ಕಟ್ಟಿ ಲಾರಿಗಳಲ್ಲಿತುಂಬಿಕೊಂಡು ತರುತ್ತಿದ್ದರು. ಬಿದಿರಿನ ದಪ್ಪ ಮತ್ತು ಎತ್ತರವನ್ನು ನೋಡಿ ಆ ಗಾಳಿಪಟಗಳು ಹಾರಾಡುವುದೇ ಎಂಬ ಸಂಶಯವೂ ನಮ್ಮನ್ನು ಕಾಡಿತ್ತು. ಆದರೆ ಅವರು ಆ ಬೃಹತ್ ಗಾಳಿಪಟಕ್ಕೆ ಕೆಳಗಡೆ ಉದ್ದವಾದ ಅಂದರೆ ಗಾಳಿಪಟದ 5 ರಿಂದ 6 ಪಟ್ಟು ಉದ್ದದ ಬಾಲಂಗೋಚಿ ಕಟ್ಟಿದ ಕಾರಣ ಬಾನಿನಲ್ಲಿನಿರಾಳವಾಗಿ ಹಾರಾಡುತ್ತಿತ್ತು. ಎಲ್ಲಾಗಾಳಿಪಟಗಳ ಬಾಲಂಗೋಚಿಗಳು ಬಣ್ಣ, ಬಣ್ಣದ ರೇಖೆಗಳಾಗಿ ನಲಿಯುತ್ತಾ ಇದ್ದಾಗ ಒಂದು ಬ್ರಹತ್ ರೇಖಾ ಚಿತ್ರವೇ ಬಾಂನೆಂಬ ಕ್ಯಾನ್ವಾಸ್ ನಲ್ಲಿರಚನೆಯಾಗಿತ್ತು.

ಮಂಗಳೂರ ಗಾಳಿಪಟ

ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ಹವ್ಯಾಸಿ ಗಾಳಿಪಟ ತಂಡ ಟೀಮ್ ಮಂಗಳೂರು ತಂಡಕ್ಕೂ ಈ ಉತ್ಸವಕ್ಕೆ ಆಮಂತ್ರಣ ಇರುವುದರಿಂದ ನಮ್ಮ ತಂಡದ ವಸಂತ್ ಸನಿಲ್ , ಪ್ರಾಣೇಶ್ ಕುದ್ರೋಳಿ ಮತ್ತು ನಾನು ಭಾಗವಹಿಸಿದ್ದೆವು. ನಮ್ಮ ತಂಡದ ಕಥಕ್ಕಳಿ (36 ಅಡಿ ಎತ್ತರದ ಭಾರತದಲ್ಲೇ ಅತೀ ಎತ್ತರದ ಗಾಳಿಪಟವೆಂದು ಲಿಮ್ಕಾ ಬುಕ್ ಒಫ್ ರೆಕಾಡ್ಸ್ ರ್ ನಲ್ಲಿದಾಖಲೆಯಾಗಿದೆ), ಯಕ್ಷಗಾನ, ಭರತನಾಟ್ಯ, ಗರುಡ, ಭಾರತೀಯ ದಂಪತಿ ಮುಂತಾದ ಗಾಳಿಪಟಗಳನ್ನು ಅಲ್ಲಿಹಾರಾಡಿಸಿದ್ದೆವು. ‘ಒಂದೇ ನೆಲ, ಒಂದೇ ಆಗಸ, ಒಂದೇ ಕುಟುಂಬ ’ ಎನ್ನುವ ಧೋರಣೆಯೊಂದಿಗೆ ಗಾಳಿಪಟ ಉತ್ಸವದ ಮೆರುಗು ಮಿನುಗಿತ್ತು.

/////////////////