ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ, ನಂಬರ್ ಪ್ಲೇಟ್ ಇಲ್ಲದ ಬೈಕ್ , ತ್ರಿಬಲ್ ರೈಡ್ , ಬೆನ್ನು ಬೆನ್ನಿಗೆ ಆನ್ ಲೈನ್ ಫುಡ್ ವಾಹನಗಳ ಸಾಲು, ರಾಂಗ್ ಸೈಡ್ ಸಂಚಾರ, ಮೀಟರ್ ಹಾಕದೆ ಓಡಿಸುವ ಆಟೊರಿಕ್ಷಾ, ಅತಿವೇಗದ ಚಾಲನೆ... ಹೀಗೆ ಮೋಟಾರು ವಾಹನ ಕಾಯಿದೆ ಉಲ್ಲಂಘಿಘಿಸುವವರ ವಿರುದ್ಧ ನಗರ ಸಂಚಾರಿ ಪೊಲೀಸರು ಶುಕ್ರವಾರ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದರು. ಸುಮಾರು ಎರಡೂವರೆ ಗಂಟೆ ನಡೆದ ಕಾರ್ಯಾಚರಣೆಯಲ್ಲಿಪೊಲೀಸರಿಗೂ ಸುಸ್ತಾಗುವಷ್ಟು ಪ್ರಕರಣಗಳು ಪತ್ತೆಯಾದವು.
ಮೋಟಾರು ವಾಹನ ಕಾಯಿದೆ ಉಲ್ಲಂಘನೆ ಕುರಿತು ವಿಜಯ ಕರ್ನಾಟಕ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ನಗರ ಸಂಚಾರ ವಿಭಾಗದ ಎಸಿಪಿ ನಝ್ಮಾ ಫಾರೂಕಿ ಅವರ ಮಾರ್ಗದರ್ಶನದಲ್ಲಿಕಾರ್ಯಾಚರಣೆ ನಡೆಸಲಾಯಿತು. ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಸಂಚಾರಿ ಠಾಣೆಗಳ ವ್ಯಾಪ್ತಿಯಲ್ಲಿಶುಕ್ರವಾರ ರಾತ್ರಿ 7.30ರಿಂದ 10 ರವರೆಗೆ ವಾಹನ ತಪಾಸಣೆ ನಡೆಯಿತು.
ಹೊರರಾಜ್ಯ, ಜಿಲ್ಲೆಯವರೇ ಅಧಿಕ: ಹೆಲ್ಮೆಟ್ ಇಲ್ಲದೆ ಸವಾರಿ, ಅತಿವೇಗದ ಚಾಲನೆ, ದೋಷಪೂರಿತ ನಂಬರ್ ಪ್ಲೇಟ್ , ಚಾಲನಾ ಪರವಾನಗಿ ಇಲ್ಲದಿರುವುದು, ಆರ್ ಸಿ ದಾಖಲೆ ಇಲ್ಲದಿರುವುದು ಸೇರಿದಂತೆ ಹಲವು ಪ್ರಕರಣಗಳು ಪತ್ತೆಯಾದವು. ಅಚ್ಚರಿ ಎಂದರೆ, ಪತ್ತೆಯಾದ ಪ್ರಕರಣಗಳಲ್ಲಿಸುಮಾರು ಶೇ.80ರಷ್ಟು ಮಂದಿ ನೆರೆಯ ಕೇರಳ ಹಾಗೂ ಜಿಲ್ಲೆಯ ವಿವಿಧ ಜಿಲ್ಲೆಯವರಾಗಿದ್ದರು.
ಲೈಸೆನ್ಸ್ ಇಲ್ಲ, ಹಣವೂ ಇಲ್ಲ!
ಹೆಲ್ಮೆಟ್ ಇಲ್ಲದೆ ಬೈಕ್ ನಲ್ಲಿಸವಾರ ಮತ್ತು ಸಹಸವಾರ ಸಂಚರಿಸುತ್ತಿದ್ದರು. ಬೈಕ್ ಗೆ ನಂಬರ್ ಪ್ಲೇಟ್ ಕೂಡ ಇರಲಿಲ್ಲ. ಲೈಸೆನ್ಸ್ ಕೇಳಿದರೆ ಅದೂ ಇಲ್ಲ. ದಂಡ ಕಟ್ಟುವಂತೆ ಸೂಚಿಸಿದಾಗ ಹಣವೂ ಇಲ್ಲಎಂದು ಕಾಲೇಜು ವಿದ್ಯಾರ್ಥಿಗಳು ಪೊಲೀಸರ ಬಳಿ ಮನವಿ ಮಾಡಿಕೊಂಡ ಘಟನೆ ನಡೆಯಿತು.
5 ಕೇಸ್ ಬಳಿಕ ನಂಬರ್ ಪ್ಲೇಟ್ ತೆಗೆದ!
ಕಾಲೇಜು ವಿದ್ಯಾರ್ಥಿಯೊಬ್ಬನ ಬೈಕ್ ತಪಾಸಣೆ ನಡೆಸಿದಾಗ ನಂಬರ್ ಪ್ಲೇಟ್ ಇರಲಿಲ್ಲ. ವಾಹನದ ನೋಂದಣಿ ಸಂಖ್ಯೆ ಪರಿಶೀಲಿಸಿದಾಗ ಎಐ ಕ್ಯಾಮೆರಾ ಮೂಲಕವೇ ಐದು ಪ್ರಕರಣಗಳು ದಾಖಲಾಗಿ, ದಂಡ ವಿಧಿಸಲಾಗಿತ್ತು. ಈ ಹಿಂದಿನ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ಬೈಕ್ ನ ನಂಬರ್ ಪ್ಲೇಟ್ ಅನ್ನೇ ತೆಗೆದುಹಾಕಿದ್ದ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಆಫರ್ ಇದೆಯಾ? ಎಂದು ಕೇಳಿದ!
ಹಿಂದಿನ ಐದು ಪ್ರಕರಣಗಳ ದಂಡ ಸೇರಿದಂತೆ ಒಟ್ಟು 3,500 ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದಾಗ, ವಿದ್ಯಾರ್ಥಿ ಸಾವಿರ ದಂಡಕ್ಕೆ ಆಫರ್ ಇತ್ತಲ್ಲವೇ? ಈಗ ಇದೆಯಾ? ಎಂದು ಕೇಳಿದ್ದಾನೆ. ಈಗ ಯಾವುದೇ ಆಫರ್ ಇಲ್ಲ, ಪೂರ್ಣ ದಂಡ ಕಟ್ಟಿ ಹೋಗಿ ಎಂದು ಪೊಲೀಸರು ಸ್ಪಷ್ಟಪಡಿಸಿದರು.
ನಂಬರ್ ಪ್ಲೇಟ್ ನಲ್ಲಿಟೀಮ್ ಗ್ರೂಮ…!
ನಗರದ ಎಂ.ಜಿ. ರಸ್ತೆಯ ಸಭಾಂಗಣವೊಂದರಲ್ಲಿಶುಕ್ರವಾರ ರಾತ್ರಿ ಮದುವೆ ಔತಣಕೂಟ ನಡೆಯುತ್ತಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ 15ಕ್ಕೂ ಅಧಿಕ ಐಷಾರಾಮಿ ಕಾರುಗಳ ಮುಂಭಾಗದ ನಂಬರ್ ಪ್ಲೇಟ್ ಗಳನ್ನು ಮರೆಮಾಚಿ ಟೀಮ್ ಗ್ರೂಮ…(ವರನ ತಂಡ) ಸ್ಟಿಕ್ಕರ್ ಅಂಟಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೊಲೀಸರು ವಾಹನಗಳಿಗೆ ದಂಡ ವಿಧಿಸಿ, ನಂಬರ್ ಪ್ಲೇಟ್ ಮೇಲಿನ ಸ್ಟಿಕ್ಕರ್ ಗಳನ್ನು ತೆರವುಗೊಳಿಸಿ ಮುಂದಕ್ಕೆ ತೆರಳಲು ಅನುಮತಿ ನೀಡಿದರು.
ಬಾಕ್ಸ್
ನಿಮಿಷಕ್ಕೊಂದು ಫುಡ್ ಬೈಕ್ !
ನಗರದಲ್ಲಿಕತ್ತಲಾಗುತ್ತಿದ್ದಂತೆ ಆನ್ ಲೈನ್ ಆಹಾರ ಪೂರೈಕೆ ಮಾಡುವ ಬೈಕ್ ಸವಾರರ ಭರಾಟೆ ಹೆಚ್ಚಾಗುತ್ತಿದೆ. ಶುಕ್ರವಾರದ ಕಾರ್ಯಾಚರಣೆ ವೇಳೆ ಸರಾಸರಿ ನಿಮಿಷಕ್ಕೆ ಒಂದರಿಂದ ಎರಡು ಫುಡ್ ಡೆಲಿವರಿ ಬೈಕ್ ಗಳನ್ನು ತಡೆದು ತಪಾಸಣೆ ನಡೆಸಲಾಯಿತು. ಕೆಲವರ ಬಳಿ ಚಾಲನಾ ಪರವಾನಗಿ, ವಾಹನ ದಾಖಲೆಗಳು ಸಮರ್ಪಕವಾಗಿರಲಿಲ್ಲ. ಕೆಲವು ವಾಹನಗಳಿಗೆ ಹಳೆಯ ಪ್ರಕರಣಗಳೂ ಬಾಕಿ ಇರುವುದು ಪತ್ತೆಯಾಯಿತು. ಪೊಲೀಸರ ಎದುರೇ ಕೆಲವರು ರಾಂಗ್ ಸೈಡ್ ನಲ್ಲಿಅತಿವೇಗವಾಗಿ ಸಂಚರಿಸುತ್ತಿರುವುದು ಕಂಡುಬಂತು. ಏಕಕಾಲದಲ್ಲಿ20ರಿಂದ 25 ಫುಡ್ ಡೆಲಿವರಿ ಬೈಕ್ ಗಳನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು, ತಪ್ಪಿತಸ್ಥರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.
ಆನ್ ಲೈನ್ ಡೆಲಿವರಿ ಸಿಬ್ಬಂದಿಗೆ 7 ಸಾವಿರ ದಂಡ: ಶುಕ್ರವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿಸ್ವಿಗ್ಗಿ ಸಿಬ್ಬಂದಿ ವಿರುದ್ಧ ಆರು ಪ್ರಕರಣ ದಾಖಲಿಸಿ 3,000, ಝೊಮ್ಯಾಟೊ ಸಿಬ್ಬಂದಿ ವಿರುದ್ಧ ಆರು ಪ್ರಕರಣ ದಾಖಲಿಸಿ 3,000 ಹಾಗೂ ಬ್ಲಿಂಕ್ ಕಿಟ್ ಸಿಬ್ಬಂದಿ ವಿರುದ್ಧ ಎರಡು ಪ್ರಕರಣ ದಾಖಲಿಸಿ 1,000 ದಂಡ ವಿಧಿಸಲಾಯಿತು.
**
ಬಾಕ್ಸ್ ..
ಒಂದೇ ದಿನ 69,500 ದಂಡ!
ನಗರ ಸಂಚಾರಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿಒಟ್ಟು 69,500 ದಂಡ ಸಂಗ್ರಹಿಸಲಾಗಿದೆ. ಇವುಗಳಲ್ಲಿ ಟ್ರಾಫಿಕ್ ಉತ್ತರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿಅತೀ ಹೆಚ್ಚು 32,000 ದಂಡ ಸಂಗ್ರಹವಾಗಿದೆ.
*ಉಲ್ಲಂಘನೆ: ಹೆಲ್ಮೆಟ್ ಇಲ್ಲದೆ ಸವಾರಿ
ಪ್ರಕರಣ-59
ದಂಡ: 35,500
*ತ್ರಿಬಲ್ ರೈಡ್
ಪ್ರಕರಣ: 2
ದಂಡ: 1,000
*ರಾಂಗ್ ಸೈಡ್ ಸವಾರಿ
ಪ್ರಕರಣ: 2
ದಂಡ: 1,000
*ಟಿಂಟ್ ಪ್ರಕರಣ
ಪ್ರಕರಣ: 2
ದಂಡ: 1,000
*ಪಾನಮತ್ತ ಚಾಲನೆ
ಪ್ರಕರಣ: 44 ಮಂದಿಗೆ ನೋಟಿಸ್
*ನಿರ್ಲಕ್ಷ್ಯದ ಚಾಲನೆ
ಪ್ರಕರಣ: 4
ದಂಡ 2,000
*ಅತಿವೇಗ
ಪ್ರಕರಣ: 26
ದಂಡ: 26,000
*ಇತರ ಪ್ರಕರಣ
ಒಟ್ಟು 6
ದಂಡ 3,000
ಕೋಟ್
ನಗರ ಪೊಲೀಸ್ ಕಮಿಷನರ್ ಅವರ ನಿರ್ದೇಶನದಂತೆ ನಗರದ ಎಲ್ಲಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಮೋಟಾರು ವಾಹನ ಕಾಯಿದೆ ಉಲ್ಲಂಘಿಘಿಸುವವರ ವಿರುದ್ಧ ಶುಕ್ರವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಒಂದೇ ದಿನದಲ್ಲಿ69,500 ದಂಡ ಸಂಗ್ರಹಿಸಲಾಗಿದೆ. ಈ ರೀತಿಯ ಕಾರ್ಯಾಚರಣೆ ಮುಂದುವರಿಸಲಾಗುವುದು.
- ನಝ್ಮಾ ಫಾರೂಕಿ, ಎಸಿಪಿ, ಮಂಗಳೂರು ನಗರ ಸಂಚಾರ ಪೊಲೀಸ್
ಚಿತ್ರ: ನಗರದ ಎಂ.ಜಿ. ರಸ್ತೆಯಲ್ಲಿಪಶ್ಚಿಮ ಸಂಚಾರಿ ಠಾಣೆ ಇನ್ ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವದಲ್ಲಿನಡೆದ ವಾಹನ ತಪಾಸಣೆ.