ಅಳದಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಲ್ಯ ಗ್ರಾಮದ ಐತಿಹಾಸಿಕ ಬರಾಯಕೆರೆ ಎಂಬಲ್ಲಿಕಪ್ಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬರಾಯಕೆರೆ ಸಂರಕ್ಷಣಾ ಸಮಿತಿ ಜಿಲ್ಲಾಧಿಕಾರಿ ದರ್ಶನ್ ಎಚ್ . ವಿ. ಅವರಿಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಬೆಳ್ತಂಗಡಿ ತಹಸೀಲ್ದಾರ್ ಎನ್ .ಎಸ್ ನರಗುಂದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸ್ಥಳೀಯ ಭೂಮಾಲೀಕ, ಕೃಷಿ ಚಟುವಟಿಕೆ ಕಾರಣ ನೀಡಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಸತತವಾಗಿ ಗಣಿಗಾರಿಕೆ ನಡೆಸುತ್ತಿದ್ದು , ಕಾನೂನು ಬಾಹಿರವಾಗಿ ಸ್ಫೋಟಕಗಳನ್ನು ಸ್ಫೋಟಿಸುತ್ತಿದ್ದಾರೆ. ಇದರಿಂದಾಗಿ ಶಾಲೆಯ ಮಕ್ಕಳು ಸೇರಿದಂತೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸ್ಥಳೀಯರ ಮನೆಗಳು ಬಿರುಕು ಬಿಟ್ಟಿವೆ. ಕೃಷಿ ಕೃತಾವಳಿಗಳಿಗೆ ಕಲ್ಲು, ಕಲ್ಲಿನ ಪುಡಿಯಿಂದ ತೊಂದರೆಯಾಗಿದೆ. ಬೃಹತ್ ಗಾತ್ರದ ಲಾರಿಗಳ ಸಂಚಾರದಿಂದ ಗ್ರಾಮ ಪಂಚಾಯಿತಿ ರಸ್ತೆಗಳು, ಮೋರಿಗಳು ನಾಶಗೊಂಡಿದೆ. ಐತಿಹಾಸಿಕ ಬರಾಯಕೆರೆ ಸಂಪೂರ್ಣ ಕಲುಷಿತಗೊಂಡಿದೆ ಎಂದು ತಹಸೀಲ್ದಾರರ ಜತೆಗೆ ಸಾರ್ವಜನಿಕರು ಅಳಲು ತೋಡಿಕೊಂಡರು. ಈ ಸಂದರ್ಭ ಇನ್ನೊಮ್ಮೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಜತೆಗೆ ಭೇಟಿ ನೀಡುವ ಭರವಸೆ ನೀಡಿದರು. ವೇಣೂರು ಹೋಬಳಿ ಕಂದಾಯ ನಿರೀಕ್ಷಕ ಕುಮಾರಸ್ವಾಮಿ , ಅಳದಂಗಡಿ ಗ್ರಾಪಂ ಕಾರ್ಯದರ್ಶಿ ಪೂವಪ್ಪ ಮಲೆಕುಡಿಯ, ಪಿಲ್ಯ ಗ್ರಾಮಾಡಳಿತಾಧಿಕಾರಿ ಭಾರತಿ ತಂಡದಲ್ಲಿದ್ದರು.
ತಾಪಂ ಮಾಜಿ ಸದಸ್ಯ ಪ್ರಶಾಂತ್ ವೇಗಸ್ , ಬರಾಯಕೆರೆ ಸಂರಕ್ಷಣಾ ಸಮಿತಿ ಮುಖಂಡರಾದ ಲಿಯೋ ಪಿರೇರ , ಹರೀಶ್ ಪೂಜಾರಿ , ಗಣೇಶ್ ದೇವಾಡಿಗ, ಮೇಲ್ವಿನ್ ಡಿಸೋಜ, ಪ್ರವೀಣ್ ನಿನ್ನಿಕಲ್ಲು, ಜೋನ್ ಡಿಸೋಜ , ದಿನೇಶ್ ಪೂಜಾರಿ , ಪ್ರಶಾಂತ್ ಪೂಜಾರಿ ಕೂಸ ಅಳದಂಗಡಿ ಮತ್ತಿತರರು ಉಪಸ್ಥಿತರಿದ್ದರು.
ತಹಸೀಲ್ದಾರ್ ನೇತೃತ್ವದ ತಂಡ ಬರಾಯಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.