ತೆಕ್ಕಟ್ಟೆ ರೋಟರಿ ಕ್ಲಬ್ ವತಿಯಿಂದ ತೆಕ್ಕಟ್ಟೆ ಅಂಗನವಾಡಿ ಕೇಂದ್ರದಲ್ಲಿಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮ ಜರುಗಿತು.ಕುಂಭಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೆಬ್ಬಾರ್ ಅವರು ಸ್ತನ್ಯಪಾನದ ಮಹತ್ವ ಕುರಿತು ಮಾಹಿತಿ ನೀಡಿ, ಶಿಶುಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿಎದೆ ಹಾಲಿನ ಮಹತ್ವ ಹಾಗೂ ಸ್ತನ್ಯಪಾನ ಮಾಡುವ ತಾಯಂದಿರು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರೋಟೀನ್ , ಅಗತ್ಯ ವಿಟಮಿನ್ ಗಳು ಹಾಗೂ ಪೌಷ್ಟಿಕಾಂಶಗಳಿಂದ ಕೂಡಿದ ಸಮತೋಲಿತ ಆಹಾರ ಸೇವಿಸುವ ಅಗತ್ಯವನ್ನು ತಿಳಿಸಿದರು.
ಸಿಡಿಪಿಒ ಉಮೇಶ್ ಮಾತನಾಡಿ, ಗರ್ಭಾವಸ್ಥೆಯಿಂದ ಹೆರಿಗೆ ಹಾಗೂ ಮಗುವಿನ ಬೆಳವಣಿಗೆಯ ಆರಂಭಿಕ ಹಂತದವರೆಗೆ ಉತ್ತಮ ಆರೋಗ್ಯ ಮತ್ತು ಪೌಷ್ಟಿಕತೆ ಕಾಪಾಡಲು ಸರ್ಕಾರ ಕೈಗೊಂಡಿರುವ ವಿವಿಧ ಆರೋಗ್ಯ ಕ್ರಮ ಹಾಗೂ ಮಗುವಿಗೆ ಎದೆ ಹಾಲು ನೀಡುವುದರಿಂದ ಹಿಡಿದು ಕ್ರಮೇಣ ಸಾಮಾನ್ಯ ಆಹಾರಕ್ಕೆ ಪರಿಚಯಿಸುವವರೆಗೆ ಪಾಲಿಸಬೇಕಾದ ಆರೋಗ್ಯ ಹಾಗೂ ಪೌಷ್ಟಿಕಾಂಶದ ಮಾರ್ಗಸೂಚಿಗಳನ್ನು ವಿವರಿಸಿದರು.
ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ತಾಯಂದಿರು ಮತ್ತು ಸಾರ್ವಜನಿಕರಲ್ಲಿಸ್ತನ್ಯಪಾನ ಹಾಗೂ ಮಕ್ಕಳ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.
ರೋಟರಿ ವಲಯ 2ರ ಸಹಾಯಕ ಗವರ್ನರ್ ಟಿ.ಸುಧಾಕರ್ ಶೆಟ್ಟಿ ಮಾತನಾಡಿ, ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿಸ್ತನ್ಯಪಾನದ ಮಹತ್ವವನ್ನು ವಿವರಿಸಿದರು. ರೋಟರಿ ಕ್ಲಬ್ ನ ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಅಂಗನವಾಡಿ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಪೋಟೋ//25ಎಬಿ-ಟಿಎಚ್ ಆರ್ // ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಟಿ.ರಾಜೀವ್ ಶೆಟ್ಟಿ ಅವರು ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.