ಟನ್ ಕಬ್ಬಿಗೆ ಹೆಚ್ಚುವರಿ 50 ರೂ. ಶೀಘ್ರ ಪಾವತಿಸಿ

Contributed byravideshpande77@gmail.com|Vijaya Karnataka
additional 50 rupees payment for sugarcane farmers district officials direct
ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ | ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ

ಟನ್ ಕಬ್ಬಿಗೆ ಹೆಚ್ಚುವರಿ 50 ರೂ. ಶೀಘ್ರ ಪಾವತಿಸಿ
ವಿಕ ಸುದ್ದಿಲೋಕ ಬಾಗಲಕೋಟೆ

‘‘ಕಬ್ಬು ಪೂರೈಸಿದ ರೈತರಿಗೆ ಪಾವತಿಸಬೇಕಾದ ಹೆಚ್ಚುವರಿ 50 ರೂ. ಕೂಡಲೇ ಪಾವತಿಸುವಂತೆ,’’ ಜಿಲ್ಲಾಧಿಕಾರಿ ಸಂಗಪ್ಪ ಕಾರ್ಖಾನೆಗಳ ಮಾಲೀಕರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸೋಮವಾರ ನಡೆದ ಸಭೆಯಲ್ಲಿಮಾತನಾಡಿದ ಅವರು, ‘‘ಬಾದಾಮಿ ಶುಗರ್ಸ್, ಜೆಮ್ ಶುಗರ್ಸ್, ಜಮಖಂಡಿ ಶುಗರ್ಸ್, ಎಂಆರ್ ಎನ್ ಕೇನ್ ಪವರ್ ಲಿಮಿಟೆಡ್ , ನಿರಾಣಿ ಶುಗರ್ಸ್, ಪ್ರಭುಲಿಂಗೇಶ್ವರ ಶುಗರ್ಸ್, ಕೇದಾರನಾಥ ಶುಗರ್ಸ್ ಹಾಗೂ ಸಾಯಿಪ್ರಿಯಾ ಶುಗರ್ಸ್ನವರು ಪ್ರತಿ ಮೆಟ್ರಿಕ್ ಟನ್ ಗೆ ಹೆಚ್ಚುವರಿಯಾಗಿ ನೀಡಬೇಕಾದ 50 ರೂ. ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಪಾವತಿಗೆ ಕ್ರಮ ಕೈಗೊಳ್ಳಬೇಕು,’’ ಎಂದರು.

‘‘ಮುಂಬರುವ ಕಬ್ಬು ನುರಿಸುವ ಹಂಗಾಮಿನಲ್ಲಿತಮ್ಮ ವ್ಯಾಪ್ತಿಯ ಕಬ್ಬು ಬೆಳೆಗಾರರ ಸಭೆ ಕರೆದು ದರ ನಿಗದಿಪಡಿಸಿದ ನಂತರವೇ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕು,’’ ಎಂದರು.

ಜಿಲ್ಲೆಯನ್ನು ನಿಸರ್ಗ ಪ್ರಿಯ ಹಾಗೂ ಹಸಿರು ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿಕಾರ್ಖಾನೆಗಳ ಸಿಎಸ್ ಆರ್ ನಿಧಿಯಡಿ ಹಸಿರು ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪ್ರತಿ ಕಾರ್ಖಾನೆಗೆ ನಿಗದಿಪಡಿಸಿರುವ 10 ಸಾವಿರ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಬೇಕು. ನೆಟ್ಟ ಸಸಿಗಳ ಸಂರಕ್ಷಣೆ ಹಾಗೂ ಅವುಗಳ ಬೆಳವಣಿಗೆ ಮೇಲೂ ನಿರಂತರ ನಿಗಾ ವಹಿಸಬೇಕು,’’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್ .ರುದ್ರೇಶಪ್ಪ, ಸಹಕಾರ ಇಲಾಖೆ ಉಪನಿಬಂಧಕ ದಾನಯ್ಯ ಹಿರೇಮಠ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

--------------

ಸಿಎಸ್ ಆರ್ ನಿಧಿಯಡಿ ಶಾಲೆ ಅಭಿವೃದ್ಧಿಪಡಿಸಿ

ಜಿಪಂ ಸಿಇಒ ಗಜಾನನ ಬಾಲೆ, ‘‘ಸಿಎಸ್ ಆರ್ ನಿಧಿಯಡಿ ಜಿಲ್ಲೆಯ 60 ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿಆಯ್ಕೆಯಾಗಿರುವ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಲು ಮುಂದಾಗಬೇಕು. ಶಾಲೆಗಳಿಗೆ ಅಗತ್ಯವಿರುವ ಕುಡಿವ ನೀರು, ಶೌಚಾಲಯ, ಕೊಠಡಿ, ಪೀಠೋಪಕರಣ, ವಿದ್ಯುತ್ , ಆಟದ ಮೈದಾನ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳ ಪಟ್ಟಿಯನ್ನು ಸಂಬಂಧಿಸಿದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಕ್ಕರೆ ಕಾರ್ಖಾನೆಗಳಿಗೆ ಒದಗಿಸಲಿದ್ದಾರೆ. ಪಟ್ಟಿಯ ಆಧಾರದಲ್ಲಿಶಾಲೆಗಳ ಅಗತ್ಯತೆಗಳನ್ನು ಗುರುತಿಸಿ ಸಿಎಸ್ ಆರ್ ನಿಧಿಯಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮವಹಿಸಬೇಕು,’’ ಎಂದರು.

ಡಿಸಿ-ಬಿಜಿಕೆ-24

ಬಾಗಲಕೋಟೆ ಜಿಲ್ಲಾಧಿಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಯಿತು.