ಆರ್ಟ್ ಆಫ್ ಲಿವಿಂಗ್ ಗೆ ಗೆಲುವು, 5 ಕೋಟಿ ರೂ. ಹಿಂತಿರುಗಿಸಲು ದಿಲ್ಲಿಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ
ವಿಕ ಸುದ್ದಿಲೋಕ ಬೆಂಗಳೂರುಆರ್ಟ್ ಆಫ್ ಲಿವಿಂಗ್ 2016ರಲ್ಲಿಆಯೋಜಿಸಿದ್ದ ವಿಶ್ವ ಸಾಂಸ್ಕೃತಿಕ ಉತ್ಸವದಿಂದ ಯಮುನಾ ನದಿಪಾತ್ರಕ್ಕೆ ಹಾನಿಯುಂಟಾಗಿದೆ ಎಂಬ ಆರೋಪಕ್ಕೆ ಯಾವುದೇ ವಿಶ್ವಾಸಾರ್ಹ ಸಾಕ್ಷ್ಯವಿಲ್ಲಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಸಂಸ್ಥೆಯು, ಹತ್ತು ವರ್ಷಗಳ ಕಾನೂನು ಹೋರಾಟದಲ್ಲಿನ್ಯಾಯ ಸಿಕ್ಕಿದೆ ಎಂದು ತಿಳಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಆರ್ಟ್ ಆಫ್ ಲಿವಿಂಗ್ ನ ಟ್ರಸ್ಟಿಗಳಾದ ಪ್ರಸಾದ್ ಕೊನ್ನಾರ್ , ‘‘ ಸಂಸ್ಥೆಯ ಮೇಲೆ ರಾಷ್ಟ್ರೀಯ ಹಸಿರು ಮಂಡಳಿ (ಎನ್ ಜಿಟಿ) ಮೇಲೆ ಇಂಥದ್ದೊಂದು ಗುರುತರ ಆರೋಪ ಹೊರಿಸಿದ್ದರಿಂದ ಹತ್ತು ವರ್ಷ ಕಾನೂನು ಹೋರಾಟ ಮಾಡಬೇಕಾಯಿತು. ಇದೀಗ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸಂಸ್ಥೆಯ ಪರವಾಗಿದ್ದು, ಸಂಸ್ಥೆ ಠೇವಣಿಯಿಟ್ಟಿದ್ದ 5 ಕೋಟಿ ರೂ. ಮರುಪಾವತಿಸುವಂತೆ ದಿಲ್ಲಿಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ. ಈ ತೀರ್ಪು ಸಂಸ್ಥೆಯು ನಿರಂತರವಾಗಿ ಪ್ರತಿಪಾದಿಸುತ್ತಿದ್ದ ನಿಲುವನ್ನು ಸಮರ್ಥಿಸುತ್ತಿದೆ,’’ ಎಂದರು.
‘‘ಶ್ರೀ ಶ್ರೀ ರವಿಶಂಕರ್ ಗುರೂಜಿ ನೇತೃತ್ವದಲ್ಲಿನಡೆದ ಮೂರು ದಿನಗಳ ಉತ್ಸವದಲ್ಲಿ155 ದೇಶಗಳಿಂದ 35 ಲಕ್ಷಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು. 100ಕ್ಕೂ ಅಧಿಕ ದೇಶಗಳಿಂದ 37 ಸಾವಿರ ಕಲಾವಿದರು ಬಂದು 70 ಕಾರ್ಯಕ್ರಮ ಪ್ರದರ್ಶಿಸಿದ್ದರು. 2500 ಆಧ್ಯಾತ್ಮಿಕ ಮತ್ತು ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು. ಸುಮಾರು 7 ಎಕರೆಯಲ್ಲಿಹಾಕಲಾಗಿದ್ದ ವೇದಿಕೆ, ಸಭಾಂಗಣ ಸೇರಿದಂತೆ ಬೃಹತ್ ಸಮಾವೇಶ ಇದಾಗಿದ್ದರೂ ಯಮುನಾ ಪಾತ್ರದ ಪರಿಸರಕ್ಕೆ ಯಾವುದೇ ಧಕ್ಕೆಯುಂಟಾಗದಂತೆ ಕ್ರಮ ವಹಿಸಲಾಗಿತ್ತು,’’ ಎಂದು ಅವರು ವಿವರ ನೀಡಿದರು.
‘‘ಕಾರ್ಯಕ್ರಮಕ್ಕೂ ಮುನ್ನ ಯಮುನಾ ನದಿಯನ್ನು ಆರ್ಟ್ ಆಫ್ ಲಿವಿಂಗ್ ವತಿಯಿಂದ ‘ನನ್ನ ದಿಲ್ಲಿನನ್ನ ಯಮುನಾ’ ಕಾರ್ಯಕ್ರಮದಡಿ ಸುಮಾರು 10 ಸಾವಿರ ಸ್ವಯಂಸೇವಕರು ಸೇರಿ ಶುಚಿಗೊಳಿಸಿದ್ದರು. 700 ಟನ್ ತ್ಯಾಜ್ಯ ಹೊರತೆಗೆದು ನದಿಯನ್ನು ಸ್ವಚ್ಛ ಮಾಡಿದ್ದರು. ಕಾರ್ಯಕ್ರಮ ಮುಗಿದ ಬಳಿಕವೂ ನಮ್ಮ ಸಾವಿರಾರು ಸ್ವಯಂಸೇವಕರು ಈ ಸ್ಥಳವನ್ನು ಶುಚಿಗೊಳಿಸಿದ್ದರು. ಮುಖ್ಯವಾಗಿ ವೇದಿಕೆ ನಿರ್ಮಾಣಕ್ಕಾಗಿ ಭೂಮಿಯನ್ನೂ ಅಗೆದಿರಲಿಲ್ಲ. ಎನ್ ಜಿಟಿ ಸಮರ್ಪಕವಾಗಿ ಪರಿಶೀಲಿಸದೆ ಸಂಸ್ಥೆಯನ್ನು ಪರಿಸರ ಹಾನಿಗೆ ಕಾರಣವೆಂದು ಹೇಳಿತು. ಈ ಆರೋಪಗಳನ್ನು ಇದೀಗ ನ್ಯಾಯಾಂಗ ತಳ್ಳಿಹಾಕಿದಂತಾಗಿದೆ,’’ ಎಂದರು.
ಟ್ರಸ್ಟಿ ಪ್ರಸನ್ನ ಪ್ರಭು ಮಾತನಾಡಿ, ‘‘ ‘ಸಾಂಸ್ಕೃತಿಕ ಒಲಿಂಪಿಕ್ಸ್ ’ ಎಂದು ಬಣ್ಣಿಸಲ್ಪಟ್ಟಿದ್ದ ಕಾರ್ಯಕ್ರಮವನ್ನು ಅಪಹಾಸ್ಯಕ್ಕೆ ಗುರಿ ಮಾಡುವ ವಿವಾದಕ್ಕೆ ಎಡೆಮಾಡುವ ಪ್ರಯತ್ನ ವ್ಯಾಪಕವಾಗಿ ನಡೆಯಿತು. ಅದೆಲ್ಲವೂ ಈಗ ವಿಫಲವಾಗಿದೆ. ಆದರೆ, ಇದರ ಹಿಂದೆ ಕಾಣದ ಕೈಗಳಿವೆ. ಅದನ್ನು ಬೆಳಕಿಗೆ ತರುವ ಕೆಲಸವಾಗಬೇಕು,’’ ಎಂದು ಹೇಳಿದರು.
‘‘ಈ ನಡುವೆಯೂ ಸಂಸ್ಥೆ ತನ್ನ ಸಾಮಾಜಿಕ ಕಾರ್ಯಗಳನ್ನು ಮುನ್ನಡೆಸಿದೆ. ಸಂಸ್ಥೆ ಒಂದು ಲಕ್ಷಕ್ಕೂ ಅಧಿಕ ರೈತರಿಗೆ ರಾಸಾಯನಿಕ ಬಿಟ್ಟು ಸಾವಯವ ಕೃಷಿಗೆ ಮರಳುವಂತೆ ಮಾಡಿದೆ. ನೂರಾರು ವಿದ್ಯಾ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳು, ಬಡವರಿಗೆ ನೆರವು, ಆರೋಗ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ,’’ ಎಂದು ಅವರು ತಿಳಿಸಿದರು.