ಬಾಗಲಕೋಟೆ : ‘‘ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ನಿಮಿತ್ತ ಜಮಾತೆ ಇಸ್ಲಾಂ ಏ ಹಿಂದ್ ಸಂಘಟನೆಯಿಂದ ಆ.26 ರಿಂದ ಸೆ.6ರವರೆಗೆ ರಾಜ್ಯಾದ್ಯಂತ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ’’ ಎಂದು ಸಂಘಟನೆಯ ಮುಖಂಡ ಲಾಲ್ ಹುಸೇನ ಕಂದಗಲ್ ತಿಳಿಸಿದರು.ನಗರದಲ್ಲಿಸೋಮವಾರ ಪತ್ರಿಕಾಗೋಷ್ಠಿಯಲ್ಲಿಮಾತನಾಡಿದ ಅವರು ‘‘ಪ್ರವಾದಿ ಮುಹಮ್ಮದ್ ಅವರ ಕ್ರಾಂತಿ ಅಪ್ಪಟ ಮಾನವೀಯ ಕ್ರಾಂತಿಯಾಗಿದೆ. ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ ಹಾಗೂ ಶಿಕ್ಷಣ ಸೇರಿದಂತೆ ಎಲ್ಲಕ್ಷೇತ್ರಗಳಿಗೂ ಮಾರ್ಗದರ್ಶನ ನೀಡಿದೆ. ಸುಭಿಕ್ಷ ಹಾಗೂ ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು. ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ಜನರಿಗೆ ಪರಿಚಯಿಸುವುದು, ಪರಸ್ಪರ ಬಾಂಧವ್ಯ ಬಲಪಡಿಸುವುದು ಅಭಿಯಾನದ ಉದ್ದೇಶವಾಗಿದೆ. ಖ್ಯಾತ ಸಾಹಿತಿ ಯೋಗೇಶ ಮಾಸ್ಟರ್ , ಅಬ್ದುಸ್ಸಲಾಮ್ ಪುತ್ತಿಗೆ ಅವರು ಪ್ರವಾದಿ ಮುಹಮ್ಮದ್ ಅವರ ಕುರಿತು ಬರೆದ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುತ್ತದೆ’’ ಎಂದು ಮಾಹಿತಿ ನೀಡಿದರು.
‘‘ಅಭಿಯಾನದಲ್ಲಿವೈಯಕ್ತಿಕ ಭೇಟಿ, ವಿಚಾರಗೋಷ್ಠಿಗಳು, ಸೀರತ್ ಪ್ರವಚನ, ಸೀರತ್ ಪ್ರದರ್ಶನ, ಸಮಾಜಸೇವೆ ಚಟುವಟಿಕೆಗಳು, ಸೌಹಾರ್ದ ಸಂದೇಶ ರಾರ ಯಲಿ ಸೇರಿದಂತೆ ನಾನಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ’’ ಎಂದರು. ಮಹಮ್ಮದ್ ಯುಸೂಫ್ ಕೇಸನೂರ, ಅಬ್ದುಲ್ ರೌಫ್ ಖಾಜಿ, ಮಹಮ್ಮದ್ ಮತೀನ್ ಕರ್ಜಗಿ, ಸಯ್ಯದ್ ಜೋಹರ್ ಮಕಾನದಾರ ಇದ್ದರು.