ಗ್ರಾಮ ಲೆಕ್ಕಿಗರ ವಜಾಕ್ಕೆ ಆಗ್ರಹಿಸಿ ತಮಟೆ ಚಳವಳಿವಿಕ ಸುದ್ದಿಲೋಕ ನಾಗಮಂಗಲ
ನಕಲಿ ಅಂಕಪಟ್ಟಿ ನೀಡಿ ಹುದ್ದೆ ಗಿಟ್ಟಿಸಿದ ಗ್ರಾಮ ಲೆಕ್ಕಿಗರ ವಜಾಗೊಳಿಸಲು ಒತ್ತಾಯಿಸಿ ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ .ಎನ್ . ನರಸಿಂಹಮೂರ್ತಿ ನೇತೃತ್ವದಲ್ಲಿತಾಲೂಕು ಆಡಳಿತ ಸೌಧ ಆವರಣದಲ್ಲಿತಮಟೆ ಚಳವಳಿ ನಡೆಸಲಾಯಿತು.
ಪಟ್ಟಣದ ವೈಭವ ಹೋಟೆಲ್ ವೃತ್ತದಿಂದ ತಾಲೂಕು ಕಚೇರಿ ಆವರಣದವರೆಗೆ ತಮಟೆ ಚಳವಳಿಯ ಮೂಲಕ ಕಂದಾಯ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತಾ ಮೆರವಣಿಗೆ ನಡೆಸಲಾಯಿತು.
ಏಳು ಜನ ಗ್ರಾಮ ಲೆಕ್ಕಿಗರು ನಕಲಿ ಅಂಕಪಟ್ಟಿ ಮತ್ತು ಅಂಗವಿಕಲತೆ ಸರ್ಟಿಫಿಕೇಟ್ ನೀಡಿ 2011ರಲ್ಲಿಗ್ರಾಮ ಲೆಕ್ಕಿಗರ ಹುದ್ದೆ ಪಡೆದು ಕಂದಾಯ ಇಲಾಖೆಯಲ್ಲಿ10 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ವತಿಯಿಂದ ತನಿಖೆ ನಡೆದಿದ್ದರೂ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸದೆ ವಿಳಂಬ ಮಾಡಿರುವುದು ಮತ್ತು ನಕಲಿ ಗ್ರಾಮ ಲೆಕ್ಕಿಗರನ್ನು ಹುದ್ದೆಯಿಂದ ವಜಾಗೊಳಿಸಿ ಪೊಲೀಸ್ ಠಾಣೆಯಲ್ಲಿಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ಆಗ್ರಹಿಸಿದರು.
ಸಂಘಟನೆಯ ಸಂಚಾಲಕ ಲೋಕೇಶ್ ಮೌರ್ಯ ಮಾತನಾಡಿ, ‘‘ನಿಜವಾದ ಅಂಗವಿಕಲತೆ ಹೊಂದಿರುವ ವ್ಯಕ್ತಿಗಳಿಗೆ ನಕಲಿ ಸರ್ಟಿಫಿಕೇಟ್ ಪಡೆದಿರುವ ಗ್ರಾಮ ಲೆಕ್ಕಿಗರು ವಂಚಿಸಿದ್ದಾರೆ. ಈ ಸಂಬಂಧ ಇಲಾಖೆಯಿಂದ ಪೂರ್ಣ ಪ್ರಮಾಣದ ತನಿಖೆ ನಡೆದರೂ ಇವರ ವಿರುದ್ಧ ಕ್ರಮ ವಹಿಸಿಲ್ಲ, ಈ ತಕ್ಷಣದಿಂದಲೇ ಇವರನ್ನು ವಜಾಗೊಳಿಸಿ ಕ್ರಮ ಜರುಗಿಸಬೇಕು,’’ ಎಂದು ಆಗ್ರಹಿಸಿದರು.
ಕರ್ನಾಟಕ ಸಂವಿಧಾನ ಸೇನೆಯ ರಾಜ್ಯಾಧ್ಯಕ್ಷ ಎಚ್ .ಎಂ.ನರಸಿಂಹಮೂರ್ತಿ ಮಾತನಾಡಿ, ‘‘ನಕಲಿ ಅಂಗವಿಕಲತೆ ಸರ್ಟಿಫಿಕೇಟ್ ಪಡೆದಿರುವ ಅಪಾದಿತ ಗ್ರಾಮ ಲೆಕ್ಕಿಗರನ್ನು ತಕ್ಷಣದಿಂದಲೇ ವಜಾಗೊಳಿಸಿ ಪೊಲೀಸ್ ಠಾಣೆಯಲ್ಲಿಕ್ರಿಮಿನಲ್ ಮೊಕದ್ದಮೆ ಹೂಡಿ ಎಸ್ ಐಟಿ ತನಿಖೆಗೆ ಒಳಪಡಿಸಬೇಕು , ನಕಲಿ ಗ್ರಾಮಲೆಕ್ಕಿಗರ ಕುಟುಂಬಸ್ಥರ ಆಸ್ತಿಯ ವಿವರವನ್ನು ಸಂಗ್ರಹಿಸಿ ತನಿಖೆಗೆ ಒಳಪಡಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣದಿಂದಲೇ ಇವರು ವಿರುದ್ಧ ಕ್ರಮ ಜರುಗಿಸಬೇಕು, ಇಲ್ಲದಿದ್ದರೆ ನಿರಂತರವಾಗಿ ಹೋರಾಟ ನಡೆಸಲಾಗುವುದು,’’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿಕರ್ನಾಟಕ ಸಂವಿಧಾನ ಸೇನೆಯ ವಕೀಲರಾದ ಪ್ರಭಾಕರ್ ಮತ್ತು ಪದಾಧಿಕಾರಿಗಳಾದ ಕುಮಾರ್ ಪ್ರದೀಪ್ ಸೋಮಶೇಖರ್ ಚೆನ್ನಕೇಶವ ನರಸಿಂಹರಾಜು ಮತ್ತು ನೂರಾರು ಜನ ಸಂಘಟಾಕಾರರು ಭಾಗವಹಿಸಿದ್ದರು.