ಗರ್ಭಿಣಿಯರು ಯಾವ ಹಂತದಲ್ಲಿಯಾವ ಆಹಾರ ಸೇವಿಸಬೇಕು ಎಂಬುದನ್ನು ಎಲ್ಲರೂ ಸಲೀಸಾಗಿ ಹೇಳುತ್ತಾರೆ. ಆ ನಂತರದ ಶಿಶು ಆಹಾರಗಳನ್ನೂ ರೂಢಿಸಿಕೊಂಡಿದ್ದಾರೆ. ಆದರೆ ಇವೆರಡರ ನಡುವಿನ ಬಾಣಂತನ ಹಂತದ ಆಹಾರಗಳು ಅಜ್ಞಾತ ಅಥವಾ ಮರೆಯಾಗಿದ್ದೇ ಹೆಚ್ಚು. ಪೀಳಿಗೆಯಿಂದ ಪೀಳಿಗೆಗೆ ಸಾಗಿ ಬಂದಿರುವ ಬಾಣಂತಿ ಪಥ್ಯಾಹಾರಕ್ಕೆ ದೊಡ್ಡ ಪರಂಪರೆಯಿದೆ. ಇದರಲ್ಲಿಅನೇಕ ಪ್ರಾದೇಶಿಕ ರುಚಿ ವೈವಿಧ್ಯಗಳೂ ಇವೆ.
ಮೇದಿನಿ ಕೆಸವಿನಮನೆ
ಮಲೆನಾಡಿನ ನಮ್ಮ ಕಡೆಯ ಬಾಣಂತನವೆಂದರೆ ಪಥ್ಯದ್ದೇ ಸಾಮ್ರಾಜ್ಯ. ಹೆರಿಗೆಯಾಗುವ ತನಕ ಏನು ಬೇಕಾದರೂ ತಿನ್ನಬಹುದು ಎನ್ನುವ ಸ್ವಾತಂತ್ರ್ಯ ಮಗು ಮಡಿಲಿಗೆ ಬರುತ್ತಿದ್ದಂತೆಯೇ ಕಣ್ಮರೆಯಾಗುತ್ತದೆ. ಹೆರಿಗೆಯಾದೊಡನೆ ಮೊದಲು ಸುಸ್ತಾಗಿದ್ದರೆ ಬಿಸಿನೀರು, ಅದೂ ಚೂರೇ ಚೂರು. ಅದರ ನಂತರ ಕಾಳುಜೀರಿಗೆ ಅಥವಾ ಕಹಿಜೀರಿಗೆ ಕಷಾಯ ಎಂಬ ಕಹಿಯಾದ ನೀರಿನಿಂದ ಪಥ್ಯವೆಂಬುದು ಆರಂಭವಾದರೆ ಮುಗಿದೇ ಹೋಯಿತು. ಬಿಸಿನೀರು ಅದರಲ್ಲೂಸುಡುಸುಡು ನೀರಿನ ಸ್ನಾನ, ನಂತರ ಕಂಬಳಿ ಹೊದ್ದು ಮಲಗಿ, ಮೈ ಬೆವರಿದ ಬಳಿಕವೇ ಏಳಬೇಕೆನ್ನುವ ಶಿಕ್ಷೆ, ಮಲಗುವ ಮೊದಲು ಕುಡಿಯಬೇಕಾದ ಗೋಧಿ ರವೆಯ ಪಾಯಸ, ಮಲಗಿ ಎದ್ದ ನಂತರ ಮೈಗೆಲ್ಲಅರಿಶಿಣ ಹಚ್ಚಿಕೊಂಡು ಬಾಣಂತಿಗಾಗಿಯೇ ತಯಾರಿಸಿದ ಮೆತ್ತನೆಯ ಅನ್ನದೊಂದಿಗೆ ದಿನಕ್ಕೊಂದು ಬಗೆಯ ಪುಡಿಯನ್ನು ಸೌಟುಗಟ್ಟಲೆ ತುಪ್ಪದೊಂದಿಗೆ ಕಲಸಿ ತಿನ್ನುವುದು. ಈ ಪುಡಿಯಲ್ಲಿಕಾಳುಮೆಣಸು, ಜೀರಿಗೆ, ಮೆಣಸು, ಬೆಳ್ಳುಳ್ಳಿ ಸೇರಿಸಿದ ಪುಡಿ ಇರುತ್ತದೆ. ಈ ಪುಡಿಯ ನಾಲ್ಕು ತುತ್ತು ತಿಂದ ನಂತರ ಬೇಳೆಕಟ್ಟು, ಹಾಲನ್ನ. ಎಲ್ಲಾಸೇರಿಸಿದರೂ ಎರಡು ಮುಷ್ಟಿ ಅನ್ನಕ್ಕಿಂತ ಜಾಸ್ತಿಯಾಗದು.
ಬಾಣಂತಿಯ ಮೈ ಚಟ್ಟಬೇಕು, ಬಸುರಿಯಲ್ಲಿಚೆನ್ನಾಗಿ ತಿಂದು ಗುಂಡುಗುಂಡಾದ ಹೆಣ್ಣು ಬಾಣಂತನದಲ್ಲಿಮೈಯಿಳಿಸಿ ಬಳುಕುವ ಬಳ್ಳಿಯಾಗಬೇಕೆಂಬುದು ಮನೆಯೊಳಗಿನ ಹಿರಿಯರ ಅಭಿಮತ. ವೈದ್ಯರೇನೋ ಚೆನ್ನಾಗಿ ನೀರು ಕುಡಿಯಿರಿ, ತರಕಾರಿ ತಿನ್ನಿ ಹಣ್ಣು ತಿನ್ನಿ ಎಂದು ಹೇಳುತ್ತಾರಾದರೂ ನಮ್ಮ ಕಡೆ ಒಂದು ತಿಂಗಳವರೆಗೆ ಯಾವ ತರಕಾರಿ, ಹಣ್ಣನ್ನೂ ಕೊಡುವುದಿಲ್ಲ. ಆಗೀಗ ಸಬ್ಬಸಿಗೆ ಸೊಪ್ಪಿನ ಪಲ್ಯ, ಅದೂ ಎದೆಹಾಲಿನ ಪ್ರಮಾಣ ಹೆಚ್ಚಾಗಲಿ ಎಂಬ ಕಾರಣಕ್ಕೆ ಕೊಡುತ್ತಾರೆ ಬಿಟ್ಟರೆ, ಬಾಯಿಗೆ ರುಚಿಯಾಗಲು ಏನೂ ಕೊಡುವುದಿಲ್ಲ. ಸೀಗೆ ಸೊಪ್ಪಿನ ಸಾರು, ಮೆಣಸಿನ ಕಾಳಿನ ಸಾರು, ಅದಕ್ಕೆ ಹುಣಸೆ ಹಣ್ಣಿನ ಬದಲು ವಾಟೆಹುಳಿ ಹಾಕುತ್ತಿದ್ದರು. ಹುಣಸೆ ಅಥವಾ ನಿಂಬೆಯ ಹುಳಿ ಬಾಣಂತಿಯ ಹೊಟ್ಟೆಗೆ ಹೋದರೆ ಮಗು ಹಾಲು ಕುಡಿದು ಕಕ್ಕುತ್ತದೆ ಎಂಬುದು ಇದಕ್ಕೆ ಕಾರಣ. ಇದರೊಂದಿಗೆ ಕಂಚಿಕಾಯಿ ಖಾರ ಎಂಬುದೊಂದು ಪದಾರ್ಥವನ್ನು ಬೆಲ್ಲ, ಒಣಮೆಣಸು ಹಾಕಿ ಕಹಿ, ಹುಳಿ,ಸಿಹಿ ಮಿಶ್ರಿತ ಬಿಸಿ ಬಿಸಿ ಗೊಜ್ಜಿಗೆ ತುಪ್ಪ ಸೇರಿಸಿ ಅನ್ನಕ್ಕೆ ಕಲಸುವುದು. ಬಾಣಂತಿಯ ದೇಹಕ್ಕೆ ನಂಜಾಗಬಾರದೆಂದು ಈ ಎಲ್ಲಾಅಡುಗೆಗಳ ಮೂಲ ಉದ್ದೇಶ. ಬೆಳಗ್ಗೆ ತಿಂಡಿಗೆ ಗೋಧಿ ದೋಸೆ, ಮೆಂತೆ ದೋಸೆ, ರವೆ ಗಂಜಿಯೇ ಜಾಸ್ತಿ. ರಾತ್ರಿ ಚೂರು ಅನ್ನ- ಹಾಲು.
ಎರಡನೇ ತಿಂಗಳಿಗೆ ಮಧ್ಯಾಹ್ನದ ಊಟದ ಪ್ರಮಾಣ ತುಸು ಜಾಸ್ತಿ. ಏಕೆಂದರೆ ಮೊದಲ ತಿಂಗಳಲ್ಲಿಸುಡುನೀರಿನ ಸ್ನಾನ, ನಂತರ ಬೆವರಿಸುವುದು, ಹೊಟ್ಟೆಗೆ ಕಟ್ಟುವ ಎರಡೆರಡು ಸೀರೆ, ಬೆಂಕಿ ಕಾಯಿಸುವುದು ಹೀಗೆ ಬಾಣಂತಿಯ ಮೈ ಉಪ್ಪಿನಕಾಯಿಯ ಮಿಡಿಯ ಹಾಗೆ ಚಟ್ಟಿರುತ್ತದೆ. ನಂತರ ಮೈ ತುಂಬಿಕೊಳ್ಳುವಂತೆ ಹಾಲು, ಮೊಸರು ಧಾರಾಳವಾಗಿ ಕೊಡುವುದು, ತುಪ್ಪದಲ್ಲೇ ಕೈ ತೊಳೆಸುವುದು, ಕಾಳುಮೆಣಸು ಕಡಿಮೆ ಪ್ರಮಾಣದಲ್ಲಿಬಳಸುವುದು ಹೀಗೆ ಬಾಣಂತನದ ಪಥ್ಯದಲ್ಲಿವ್ಯತ್ಯಾಸವಾಗುತ್ತದೆ. ಹಸಿವಾಯಿತೆಂದು ಗಬಗಬ ತಿನ್ನುವಂತಿಲ್ಲ. ಬಾಣಂತಿ ಊಟ ಮಾಡುವಾಗ ದೃಷ್ಟಿಯಾಗುತ್ತದೆಂದು ಯಾರೂ ಎದುರು ಬರುವಂತಿಲ್ಲ.
ಮೂರು ತಿಂಗಳಾಗುತ್ತಿದ್ದಂತೆ ಮಾಮೂಲಿ ಬದುಕಿಗೆ ತುಸು ಮಗ್ಗುಲಾದಂತೆಯೇ ಲೆಕ್ಕ. ಈ ಸಮಯದ ವಿಶೇಷತೆಯೆಂದರೆ, ಅಂಟು ಶುಂಠಿ ಎಂಬ ವಿಶಿಷ್ಟ ಸಾಂಪ್ರದಾಯಿಕ ತಿನಿಸಿನ ತಯಾರಿ. ಬಾದಾಮಿ ಉತ್ತುತ್ತೆ, ಕಲ್ಲುಸಕ್ಕರೆ, ದ್ರಾಕ್ಷಿ ಇತ್ಯಾದಿ ಸಕಲೆಂಟು ಒಣ ಹಣ್ಣುಗಳನ್ನು ತುಪ್ಪದಲ್ಲಿಕರಿದು, ಅದಕ್ಕೆ ಕರಿದು ಅರಳಿದ ಅಂಟನ್ನು ಪುಡಿ ಮಾಡಿ ಸೇರಿಸಿ ಉಂಡೆ ಕಟ್ಟಿ ಅಥವಾ ಹಾಗೆಯೇ ಬಾಣಂತಿ ಕೋಣೆಯಲ್ಲಿಇಡುವುದು. ಸಂಜೆ ಅಥವಾ ಬೆಳಗ್ಗೆ ಪ್ರತಿದಿನ ಒಂದು ಪ್ರಮಾಣದಲ್ಲಿತಿಂದು ಬಿಸಿ ಹಾಲು ಕುಡಿದು ಮಲಗುವುದು. ಈ ಅಂಟು ಶುಂಠಿಯ ಔಷಧ ತಿಂದು ಖಾಲಿಯಾಯಿತೆಂದರೆ ಬಾಣಂತನ ಮುಗಿಯಿತು ಎಂದರ್ಥ. ಜೊತೆಗೆ ಇದನ್ನು ಬಳಗಕ್ಕೆಲ್ಲಹಂಚುವ ಪದ್ಧತಿಯೊಂದಿದೆ. ಬಾಣಂತಿಗೆ ಕ್ಯಾಲ್ಷಿಯಂ ಸಿಗಲಿ ಎಂದು ಬಾಣಂತನದಲ್ಲಿಪ್ರತಿದಿನ ಮೂರ್ನಾಲ್ಕು ಬಾರಿ ಎಲೆಅಡಿಕೆ ಹಾಕಲು ಅಭ್ಯಾಸ ಮಾಡಿಸಿರುತ್ತಾರೆ. ಮಲೆನಾಡಿನ ಎಷ್ಟೋ ಹೆಣ್ಣುಮಕ್ಕಳಿಗೆ ಬಾಣಂತನದಲ್ಲಿಅಭ್ಯಾಸವಾದ ಈ ಕವಳ ಹಾಕುವ ಅಭ್ಯಾಸ ಕೊನೆಯ ತನಕವೂ ಹೋಗುವುದೇ ಇಲ್ಲಎಂಬುದೇ ವಿಶೇಷ. ಹೀಗೆ ಮಲೆನಾಡಿನ ಬಾಣಂತನವೆಂದರೆ ಪಥ್ಯವೇ. ಈಗೀಗ ಬದಲಾವಣೆಯಾದರೂ ಅಮ್ಮಂದಿರ ಮನಸ್ಸು ಮಾತ್ರ ಪಥ್ಯದೆಡೆಗೇ ಇರುತ್ತದೆ.
ಬಾಕ್ಸ್
ನಿಮ್ಮ ಕಡೆ ಬಾಣಂತಿ ಪಥ್ಯ ಹೇಗಿರುತ್ತದೆ?
ಬಹುತೇಕ ಮರೆತೇ ಹೋಗಿರುವ, ಹೆಚ್ಚು ಜನರಿಗೆ ತಿಳಿಯದ ಬಾಣಂತಿ ಪಾಕ ಪದ್ಧತಿಯನ್ನು ಮುನ್ನಲೆಗೆ ತರಬೇಕೆಂಬ ಉದ್ದೇಶದಿಂದ ಆರಂಭಿಸಲಾಗಿರುವ ಲವಲವಿಕೆ ಬಾಣಂತಿ ಪಥ್ಯಾಹಾರ ವೇದಿಕೆಗೆ ನೀವೂ ಕೈಜೋಡಿಸಿ. ನಿಮ್ಮೂರಿನಲ್ಲಿಪ್ರಚಲಿತದಲ್ಲಿರುವ, ನಿಮಗೆ ಮಾಡಿರುವ ಅಥವಾ ನೀವು ನಿಮ್ಮ ಮಗಳಿಗೋ, ಮೊಮ್ಮಗಳಿಗೂ ಮಾಡಿಕೊಟ್ಟಿರುವ ಬಾಣಂತಿ ಆಹಾರಗಳ ವಿಶೇಷ, ಮಾಡುವ ವಿಧಾನಗಳ ಬಗ್ಗೆ ಬರೆದು ನಮಗೆ ವಾಟ್ಸಪ್ ಮಾಡಿ. ನಿಮ್ಮ ಹೆಸರು, ಸ್ಥಳ ನಮೂದಿಸಿ ಆಹಾರಗಳ ಫೋಟೊ ಮತ್ತು ನಿಮ್ಮ ಭಾವಚಿತ್ರವನ್ನೂ ಕಳಿಸಿ.