ಸ್ಲಗ್ : ಸುಸ್ಥಿರ ರಕ್ಷೆಇಂಟ್ರೊ: ರಕ್ಷಾಬಂಧನಕ್ಕಾಗಿ ಸುಸ್ಥಿರ ರಾಖಿಗಳು ಇತ್ತೀಚೆಗೆ ಗಮನ ಸೆಳೆಯುತ್ತಿವೆ.
ರಕ್ಷಾಬಂಧನ ಅಂದರೆ ಸಹೋದರ ಹಾಗೂ ಸಹೋದರಿಯನ್ನು ದಾರದ ನಡುವೆ ಒಂದುಗೂಡಿಸುವುದಲ್ಲ. ಅದು ರಕ್ಷಣೆ ಮತ್ತು ಕಳಕಳಿಯ ಸಂಕೇತ. ಹೀಗಾಗಿ ಅದು ಹಬ್ಬದಾಚರಣೆ ಸೀಮಿತವಾಗದೆ ಶಾಶ್ವತವಾಗಿ ಉಳಿಯಬೇಕು ಅಥವಾ ರಕ್ಷೆ ಕಳಚಿದ ನಂತರ ಅದು ಸೇರುವ ಪರಿಸರಕ್ಕೆ ಹಾನಿ ಉಂಟು ಮಾಡಬಾರದು ಎನ್ನುವ ಎಚ್ಚರಿಕೆಯೊಂದಿಗೆ ಈ ವರ್ಷದ ರಕ್ಷಾ ಬಂಧನ ವಿಶಿಷ್ಟ ಆಚರಣೆಗೆ ಸಜ್ಜಾಗಿದೆ.
ಸಾಮಾನ್ಯವಾಗಿ ಬಣ್ಣದ ಕಾಗದ, ಲೋಹ, ಪ್ಲಾಸ್ಟಿಕ್ ಗಳನ್ನು ಒಳಗೊಂಡ ಸಾಕಷ್ಟು ಬಗೆಯ ರಾಖಿಗಳು ಮಾರುಕಟ್ಟೆಯಲ್ಲಿವಿಭಿನ್ನ ಥೀಮ್ ನಡಿ ಸೆಳೆಯುತ್ತವೆ. ಆದರೆ ಇವು ಹಬ್ಬದ ಆಚರಣೆಗೆ ಸೀಮಿತವಾಗಿ ಕೊನೆಗೆ ಮಣ್ಣು ಸೇರುತ್ತವೆ. ಆದರೆ ಅದರಿಂದ ಪರಿಸರಕ್ಕೆ ಹಾನಿ ಆಗಬಹುದು ಎನ್ನುವ ಕಾಳಜಿ ಇರುವವರು ಈಗ ರಾಖಿ ಹಬ್ಬದ ಆಚರಣೆಯನ್ನು ಸುಸ್ಥಿರವಾಗಿ ಆಚರಿಸಲು ಮುಂದಾಗಿದೆ. ಇದಕ್ಕೆ ಪೂರಕವಾಗಿ ಸುಸ್ಥಿರ ರಾಖಿ ಮಾರುಕಟ್ಟೆಯೂ ಸೆಳೆಯುತ್ತಿದೆ. ಈಗ ರಾಖಿ ಕೇವಲ ಹಬ್ಬದ ಆಚರಣೆಯಷ್ಟೇ ಆಗಿ ಉಳಿದಿಲ್ಲ. ಹಬ್ಬ ಮುಗಿದ ನಂತರವೂ ಸಹೋದರನು ಇದನ್ನು ದೈನಂದಿನ ಶೈಲಿಯ ಭಾಗವಾಗಿ ಧರಿಸಬಹುದು ಎನ್ನುವ ನಿಟ್ಟಿನಲ್ಲಿಸುಸ್ಥಿರ ರಾಖಿಗಳು ಆಕರ್ಷಿಸುತ್ತಿವೆ.
ಮರುಬಳಕೆಯ ರಾಖಿ
ಪ್ಲಾಸ್ಟಿಕ್ , ಕೃತಕ ಆಡಂಬರ ಅಥವಾ ಪರಿಸರಕ್ಕೆ ಹಾನಿ ಮಾಡುವ ರಾಸಾಯನಿಕಗಳನ್ನು ಬಳಸದೆ ಸಂಪೂರ್ಣವಾಗಿ ನೈಸರ್ಗಿಕ, ಮರುಬಳಕೆ ಮಾಡಬಹುದಾದ ಅಥವಾ ಮಣ್ಣಿನಲ್ಲಿಸುಲಭವಾಗಿ ಕರಗಿಹೋಗುವ ಕಚ್ಚಾವಸ್ತುಗಳಿಂದ ತಯಾರಿಸುವ ರಾಖಿಗಳನ್ನು ಸುಸ್ಥಿರ ರಾಖಿಗಳು ಎನ್ನಲಾಗುತ್ತದೆ. ಇವು ಸಂಪ್ರದಾಯದ ಪವಿತ್ರತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ ಭೂಮಿಯ ಮೇಲಿನ ತ್ಯಾಜ್ಯದ ಹೊರೆಯನ್ನೂ ತಗ್ಗಿಸುತ್ತವೆ.
ಸಂಪೂರ್ಣವಾಗಿ ನೈಸರ್ಗಿಕ, ಮರುಬಳಕೆ ಮಾಡಬಹುದಾದ ಜೈವಿಕ ವಿಘಟನೆಗೆ ಒಳಗಾಗುವ ವಸ್ತುಗಳಿಂದ ತಯಾರಿಸಿದ ರಾಖಿಗಳು ಹಬ್ಬ ಮುಗಿದ ನಂತರ ಕಸವಾಗದೇ ಭೂಮಿಯಲ್ಲಿಕರಗಿ ಗಿಡವಾಗಿ ಬೆಳೆಯುತ್ತವೆ ಅಥವಾ ದೈನಂದಿನ ಧರಿಸಬಹುದಾದ ಆಭರಣಗಳಾಗಿ ಮರುಬಳಕೆಯಾಗುತ್ತವೆ.
ಏನೆಲ್ಲಇವೆ?
ಶುದ್ಧ ಬೆಳ್ಳಿ ಅಥವಾ ಚಿನ್ನದ ಲೇಪನ ಹೊಂದಿರುವ ವಿನ್ಯಾಸಗಳ ವಿಭಿನ್ನ ಚಿತ್ತಾರ ಒಳಗೊಂಡ ರಾಖಿಗಳು ರಕ್ಷಣಾ ಕವಚ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿ ಶೋಭಿಸುತ್ತವೆ. ಸರಳತೆ ಮತ್ತು ನವೀನತೆಯನ್ನು ಬಯಸುವ ಯುವಕರಿಗಾಗಿ ಲಾಕ್ ಡಿಸೈನ್ ಹಾಗೂ ಅಡ್ಜಸ್ಟಬಲ್ ಬೆಲ್ಟ್ ಗಳು ಬಂದಿವೆ. ಬೀಜದ ರಾಖಿಗಳು ಪ್ರಸ್ತುತ ಜನಪ್ರಿಯವಾಗಿರುವ ಸುಸ್ಥಿರ ವಿನ್ಯಾಸ. ಮರುಬಳಕೆಯ ಕಾಗದದಿಂದ ತಯಾರಿಸಲಾಗುವ ಈ ರಾಖಿಗಳ ಒಳಗೆ ತಕಾರಿ, ಹೂವು ಅಥವಾ ತುಳಸಿ, ಟೊಮೆಟೊ, ಮೆಣಸಿನಕಾಯಿಯಂತಹ ಗಿಡಗಳ ಬೀಜಗಳನ್ನು ಇಡಲಾಗಿರುತ್ತದೆ. ಹಬ್ಬ ಮುಗಿದ ನಂತರ ಈ ರಾಖಿಯನ್ನು ಕುಂಡದಲ್ಲೋ ಅಥವಾ ತೋಟದ ಮಣ್ಣಿನಲ್ಲೋ ನೆಟ್ಟು ನೀರೆರೆದರೆ, ಅದು ಸುಂದರ ಗಿಡವಾಗಿ ಬೆಳೆಯುತ್ತದೆ. ಸಹೋದರ-ಸಹೋದರಿಯರ ಪ್ರೀತಿಯ ಸಂಕೇತವಾಗಿ ಗಿಡ ಬೆಳೆಯುವುದು ಈ ಕಲ್ಪನೆಯ ಸಾರ್ಥಕತೆ. ನೈಸರ್ಗಿಕ ದಾರ ಹಾಗೂ ಬಣ್ಣಗಳಿಂದ ಸಿಂಗಾರಗೊಂಡ ರಾಖಿ ಆಕರ್ಷಕ. ಚರ್ಮಕ್ಕೂ ಸುರಕ್ಷಿತ. ಜೇಡಿಮಣ್ಣಿನಿಂದ ತಯಾರಾದ ಹಾಗೂ ನೈಸರ್ಗಿಕ ಬಣ್ಣಗಳಿಂದ ಸಿಂಗರಿಸಲಾಗುವ ರಾಖಿಗಳು ಮಣ್ಣಿನಲ್ಲಿಸುಲಭವಾಗಿ ವಿಲೀನಗೊಳ್ಳುತ್ತವೆ. ಸಾಮಾನ್ಯ ರಾಖಿಗಳಿಗೆ ಹೋಲಿಸಿದರೆ ಇವುಗಳ ವಿನ್ಯಾಸ, ಬಣ್ಣ ಸೇರಿದಂತೆ ಒಟ್ಟಾರೆ ಆಕರ್ಷಣೆ ವ್ಯಾಪಕವಾಗಿಲ್ಲ. ಅದೇ ರೀತಿ ಆನ್ ಲೈನ್ ಮಾರುಕಟ್ಟೆಯಲ್ಲೇ ಹೆಚ್ಚು ಇವು ಗಮನ ಸೆಳೆಯುತ್ತವೆ.