20 ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಇಂದು ಚಾಲನೆವಿಕ ಸುದ್ದಿಲೋಕ ಅಜ್ಜಂಪುರ
ತಾಲೂಕಿನಲ್ಲಿಭದ್ರಾ ಮೇಲ್ದಂಡೆ ಯೋಜನೆಯಡಿ ಕೆರೆ ತುಂಬಿಸುವ ಕಾರ್ಯಕ್ರಮದಿಂದ ಹೊರಗುಳಿದಿದ್ದ ಹಲವು ಗ್ರಾಮಗಳು ಕೆಲವು ವರ್ಷಗಳಿಂದ ತೀವ್ರ ಜಲ ಸಂಕಷ್ಟವನ್ನು ಎದುರಿಸುತ್ತಿದ್ದವು. ಬಹುತೇಕ ಕೆರೆಗಳಲ್ಲಿನೀರಿಲ್ಲದೆ ಅಂತರ್ಜಲ ಮಟ್ಟ 800-1000 ಅಡಿಗಳವರೆಗೆ ಕುಸಿದಿತ್ತು. ಪ್ರತಿ ಬೇಸಿಗೆಯಲ್ಲಿಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದ ತಾಲೂಕಿನ ಜನತೆಗೆ ಶಾಶ್ವತ ಜಲಭದ್ರತೆ ಕಲ್ಪಿಸುವ ನಿಟ್ಟಿನಲ್ಲಿತರೀಕೆರೆ ಶಾಸಕ ಜಿ.ಎಚ್ .ಶ್ರೀನಿವಾಸ ಜಲಸಂಕಲ್ಪವನ್ನು ಕೈಗೊಂಡಿದ್ದಾರೆ.
ಮಳೆಗಾಲದಲ್ಲಿವ್ಯರ್ಥವಾಗಿ ಹರಿದುಹೋಗುವ ನೀರನ್ನು ಸಂಗ್ರಹಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ, ಭವಿಷ್ಯದ ನೀರಿನ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ತಾಲೂಕಿನಲ್ಲಿಸರಣಿ ಚೆಕ್ ಡ್ಯಾಂ, ಬ್ರಿಡ್ಜ್ ಕಂ ಚೆಕ್ ಡ್ಯಾಂಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಬೋರ್ ವೆಲ್ ಗಳು ಬತ್ತುವುದು, ಕುಡಿಯುವ ನೀರಿಗೆ ತತ್ವಾರ, ಜಾನುವಾರುಗಳಿಗೆ, ಕೃಷಿ ಚಟುವಟಿಕೆಗೆ ಸಮಸ್ಯೆ ಸಾಮಾನ್ಯವಾಗಿತ್ತು. ಪ್ರತಿ ವರ್ಷ ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುವುದಕ್ಕಿಂತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ದೂರದೃಷ್ಟಿಯಿಂದ ಸಮಗ್ರ ಜಲಸಂರಕ್ಷಣೆ ಮತ್ತು ಜಲಮರು ಪೂರಣಕ್ಕೆ ಒತ್ತು ನೀಡಲಾಗಿದೆ.
* 48 ಕೋಟಿ ವೆಚ್ಚದಲ್ಲಿ20 ಕೆರೆಗಳಿಗೆ ನೀರು: ಜಾಕ್ ವೆಲ್ , ಪೈಪ್ ಲೈನ್ , ಅಂತರ್ಜಲಮಟ್ಟ ವೃದ್ಧಿಯ ಪ್ರಯತ್ನದ ಭಾಗವಾಗಿ ಏತ ನೀರಾವರಿ ಯೋಜನೆಯ ಪ್ರಧಾನ ಕಾಮಗಾರಿಯಲ್ಲಿಬುಕ್ಕಾಂಬುಧಿ, ಬೇಗೂರು ದೊಡ್ಡಹಳ್ಳದಲ್ಲಿವೇದಾ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ಹರಿಯುವ ನೀರನ್ನು ಸದ್ಬಳಕೆ ಮಾಡಿಕೊಂಡು, ಅಜ್ಜಂಪುರ ತಾಲೂಕಿನ ಗಡಿರಂಗಾಪುರ ಸೇರಿದಂತೆ ಒಟ್ಟು 20 ಕೆರೆಗಳಿಗೆ ನೀರು ತುಂಬಿಸುವ ಮಹತ್ವದ ಯೋಜನೆಗೆ 48 ಕೋಟಿ ರೂ. ಅನುದಾನ ಮಂಜೂರಾಗಿದೆ. ಅಜ್ಜಂಪುರದ ಜಲಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಈ ಮಹತ್ವದ ಯೋಜನೆಯ ಕಾಮಗಾರಿಗೆ ಸೆ.1ರಂದು ಚಾಲನೆ ದೊರೆಯಲಿದ್ದು ಜಾಕ್ ವೆಲ್ , ಪೈಪ್ ಲೈನ್ ನಿರ್ಮಾಣ ಕಾಮಗಾರಿಗೆ ಜಿ.ಎಚ್ .ಶ್ರೀನಿವಾಸ ಚಾಲನೆ ನೀಡಲಿದ್ದಾರೆ.
ಒಂದು ಕೆರೆ ತುಂಬಿದರೆ ಒಂದು ಗ್ರಾಮದ ಬದುಕು ಬದಲಾಗುತ್ತದೆ. ಅದೇ 20 ಕೆರೆಗಳು ತುಂಬಿದರೆ ಇಡೀ ತಾಲೂಕಿನ ಜಲಭವಿಷ್ಯವೇ ಬದಲಾಗಬಹುದು. ಆದ್ದರಿಂದ ಈ ಯೋಜನೆಯನ್ನು ಅಜ್ಜಂಪುರದ ಪಾಲಿಗೆ ಕೇವಲ ನೀರಾವರಿ ಕಾಮಗಾರಿಯಾಗಿ ನೋಡದೆ, ಕುಡಿಯುವ ನೀರು, ಕೃಷಿ, ಅಂತರ್ಜಲ ಮತ್ತು ಗ್ರಾಮೀಣ ಬದುಕಿನ ಭದ್ರತೆಯನ್ನು ಒಟ್ಟಾಗಿ ಖಾತ್ರಿಪಡಿಸುವ ಸಮಗ್ರ ಜಲಸಂಕಲ್ಪವಾಗಿ ಪರಿಗಣಿಸಬಹುದಾಗಿದೆ.
======
ಬಾಕ್ಸ್
ಯೋಜನೆ ವ್ಯಾಪ್ತಿಯ ಕೆರೆಗಳು
ಗಡೀಹಳ್ಳಿ, ಕಲ್ಲಾಪುರ, ಅಣ್ಣಾಪುರ, ಗರಗದಹಳ್ಳಿ, ಭೂತನಹಳ್ಳಿ, ಅರಬಲ, ನಂದಿಪುರ, ಅರಸಿನಘಟ್ಟ, ಬಸವಾಪುರ, ಶಂಭೈನೂರು, ತಗ್ಗಿನಹಳ್ಳಿ, ಗಡಿಗಿರಿಯಾಪುರ, ಗಡಿರಂಗಾಪುರ, ಗಿಜೇಕಟ್ಟೆ, ಶಿವನಿ ಕಾವಲು, ದಂದೂರು, ಹುಚ್ಚೇನಹಟ್ಟಿ, ದಾಸರಹಟ್ಟಿ, ಭಕ್ತನಕಟ್ಟೆ ಸೇರಿ 20 ಕೆರೆಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ.
31ಅಜ್ಜಂಪುರ02
ಅಜ್ಜಂಪುರ ತಾಲೂಕು ಗಡಿರಂಗಾಪುರ ಮತ್ತು ಇತರೆ 19 ಕೆರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಯೋಜನೆ ಕಾಮಗಾರಿ.