ನಿನ್ನೆ ವಿಜಯದಶಮಿ ಸರಿಯಿತು. ಆ ಶುಭದಿನದಂದು ‘ಸೀಮೋಲ್ಲಂಘನ’ ಮಾಡುವ ಪರಂಪರೆ ನಮ್ಮ ನಾಡಿನಲ್ಲಿದೆ. ಪ್ರಾಚೀನ ಕಾಲದಲ್ಲಿರಾಜ- ಮಹಾರಾಜರು ವಿಜಯವನ್ನು ಅಪೇಕ್ಷಿಸಿ, ರಾಜ್ಯ ವಿಸ್ತಾರಕ್ಕಾಗಿ ತಮ್ಮ ರಾಜ್ಯದ ಗಡಿಗಳನ್ನು ದಾಟುತ್ತಿದ್ದರು. ಆದರೆ, ಕೇವಲ ಭೌತಿಕ ಗಡಿಗಳನ್ನು ದಾಟುವ ಆ ವಿಚಾರವನ್ನು ಪಕ್ಕಕ್ಕಿಟ್ಟು, ಸೀಮೋಲ್ಲಂಘನದ ನೈಜ ಹಾಗೂ ಆಧ್ಯಾತ್ಮಿಕ ಅಂತರಾರ್ಥದ ಬಗ್ಗೆ ಚಿಂತನೆ ಮಾಡಲು ಈ ದಿನ ಅತ್ಯಂತ ಸಕಾಲವಾಗಿದೆ.
ನಾವೆಲ್ಲರೂ ಜಗನ್ಮಾತೆಯನ್ನು ವಿವಿಧ ರೂಪಗಳಲ್ಲಿಆರಾಧಿಸಿ ಆಕೆಯ ಕೃಪೆಗೆ ಪಾತ್ರರಾಗಿದ್ದೇವೆ. ಈ ಪುಣ್ಯ ಸಂದರ್ಭದಲ್ಲಿ, ‘ನಮ್ಮ ಪಾಲಿಗೆ ನಿಜವಾದ ಸೀಮೋಲ್ಲಂಘನ ಎಂದರೇನು?’ ಎನ್ನುವ ಮೌಲ್ಯಯುತ ಪ್ರಶ್ನೆಯನ್ನು ನಮ್ಮಷ್ಟಕ್ಕೆ ನಾವೇ ಕೇಳಿಕೊಂಡು, ಚಿಂತನೆ ನಡೆಸಬೇಕಿದೆ.ನಮ್ಮ ಋುಷಿಮುನಿಗಳ ಚಿಂತನೆಯ ಪ್ರಕಾರ, ಮಾನವ ಅಸ್ತಿತ್ವದ ಭೌತಿಕ ಮಿತಿಗಳನ್ನು ದಾಟಿ ಅನಂತವಾದ ದೈವಿಕ ಅನುಭವದತ್ತ ಸಾಗುವುದೇ ನಿಜವಾದ ಸೀಮೋಲ್ಲಂಘನ. ಶಿರಡಿ ಸಾಯಿಬಾಬಾ ಅವರು ಕೂಡ ಇದೇ ವಿಜಯದಶಮಿಯಂದು ತಮ್ಮ ಭೌತಿಕ ದೇಹವನ್ನು ತ್ಯಜಿಸಿ, ದೇಹಭಾವದಿಂದ ಆತ್ಮಭಾವಕ್ಕೆ ಸಾಗಿದರು. ಆ ವಿಶ್ವಾತ್ಮನಲ್ಲಿನಾವು ಒಂದಾದಾಗ ಮಾತ್ರ ನಮಗೆ ಶಾಶ್ವತವಾದ ಹಾಗೂ ನಿಜವಾದ ಪರಮಾನಂದದ ಅನುಭೂತಿಯಾಗುತ್ತದೆ. ಅಧ್ಯಾತ್ಮದಿಂದ ನಮಗೆ ಸಿಗಬಹುದಾದ ಬಹುದೊಡ್ಡ ಪ್ರಯೋಜನವೇ ಅದು.
ಆದರೆ, ನಮ್ಮ ಮನಸ್ಸು ಮತ್ತು ಇಂದ್ರಿಯಗಳ ಗಡಿಯನ್ನು ದಾಟಿ, ಆತ್ಮದ ಸಾಮ್ರಾಜ್ಯವನ್ನು ಪ್ರವೇಶಿಸುವವರೆಗೆ ಈ ನೈಜ ಸೀಮೋಲ್ಲಂಘನ ಖಂಡಿತ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಇದೇನು ಅಸಾಧ್ಯವಾದ ಕಾರ್ಯವೂ ಅಲ್ಲ. ನಿಯಮಿತ ಹಾಗೂ ಸತತವಾದ ಆಧ್ಯಾತ್ಮಿಕ ಪ್ರಯತ್ನದಿಂದ ಇದು ಖಂಡಿತ ಸಾಧ್ಯವಿದೆ.
ಇದು ಸಾಧ್ಯವಾಗಬೇಕಾದರೆ, ನಾವು ಈ ವಾಕ್ಯವನ್ನು ಸ್ಮರಿಸಬೇಕು: ‘ಅಂತರ್ಬಹಿಶ್ಚ ತತ್ ಸರ್ವಂ ವ್ಯಾಪ್ಯ ನಾರಾಯಣಃ ಸ್ಥಿತಃ’. ಅಂದರೆ, ಈ ಜಗತ್ತಿನಲ್ಲಿಕಣ್ಣಿಗೆ ಕಾಣಿಸುವ ಅಥವಾ ಕಿವಿಗೆ ಕೇಳಿಸುವ ಯಾವುದೇ ವಸ್ತುವಾಗಲಿ, ಜೀವಿಯಾಗಲಿ, ಅವೆಲ್ಲದರ ಒಳಗೂ ಮತ್ತು ಹೊರಗೂ ಆ ಪರಮಾತ್ಮನಾದ ನಾರಾಯಣನೇ ವ್ಯಾಪಿಸಿದ್ದಾನೆ ಎನ್ನುವ ಋುಷಿವಾಣಿಯನ್ನು ನಾವು ಸದಾ ಸ್ಮರಿಸಬೇಕು. ಆದ್ದರಿಂದ, ನಾವು ಮಾಡುವ ಪ್ರತಿಯೊಂದು ಕರ್ಮವನ್ನೂ ದೇವರ ಪೂಜೆ ಎಂದೇ ಭಾವಿಸಬೇಕು. ಕಷ್ಟದಲ್ಲಿರುವವರಿಗೆ ಸ್ಪಂದಿಸಿ, ನಮ್ಮ ಆ ನಿಸ್ವಾರ್ಥ ಸೇವೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.
ಬದುಕನ್ನು ನೋಡುವ ನಮ್ಮ ಈ ದೃಷ್ಟಿಕೋನ ಬದಲಾದರೆ, ನಮ್ಮನ್ನು ನಾವು ಗೆಲ್ಲುವ ನಿಜವಾದ ಸೀಮೋಲ್ಲಂಘನದತ್ತ ಮೊದಲ ಹೆಜ್ಜೆ ಇಟ್ಟಂತೆಯೇ ಸರಿ.
- - -
(ತಗೋ ಕನ್ನಡ)
ಸಖೇದಾಶ್ಚರ್ಯ
ಸಖೇದ ಎಂದರೆ ‘ದುಃಖದಿಂದ ಕೂಡಿದ, ಖೇದದಿಂದ ಕೂಡಿದ’ ಎಂದು ಅರ್ಥ. ಇದಕ್ಕೆ ಆಶ್ಚರ್ಯ ಸೇರಿದರೆ ‘ದುಃಖದೊಡನೆ ಮಿಶ್ರಿತವಾದ ವಿಸ್ಮಯ’ ಎನ್ನುವ ಅರ್ಥಕೊಡುವ ಕೂಡುಪದವಾಗುತ್ತದೆ. ಜೀವನದಲ್ಲಿಇಂಥ ಘಟನೆಗಳು ನಮಗೆ ಎದುರಾಗುತ್ತವೆ. ಬಿ.ಸಿ. ರಾಮಚಂದ್ರಶರ್ಮರ ‘ತಂದೆ’ ಕವನದ ಕೊನೆಯ ಸಾಲುಗಳು: ‘‘ಗಕ್ಕನವತರಿಸಿ ಅವಸರದಲ್ಲಿಹೋದವನ/ ಕುರುಹಿದೆಯಾದರೂ ಅಸ್ಪಷ್ಟ ಅವನ ವದನ.’’ ಇಲ್ಲಿತಂದೆಯ ನೆನಪಾಗಿ ವಿಸ್ಮಯವಾಗಿದೆ; ಆದರೆ ಅವಸರದಲ್ಲಿಹೋದ ಅವರ ಅಸ್ಪಷ್ಟಮುಖ ಒಂದು ನೋವನ್ನು ಚಿತ್ರಿಸುತ್ತದೆ. ಜಿ.ಎಸ್ . ಶಿವರುದ್ರಪ್ಪನವರ ‘ಜಡೆ’ ಕವನದ ಕೊನೆಯ ಸಾಲುಗಳು: ‘ಎಲ್ಲವೂ ರಮ್ಯವೆಲ್ಲ!/ ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ/ ಕಾಣದಲ್ಲ!’ ಇಲ್ಲಿಜಡೆಯಿಂದಾಗಿ ತಾಯಿಯ ನೆನಪಿನ ವಿಸ್ಮಯವಿದೆ. ಆದರೆ, ಅದು ಕಾಣದ ದುಃಖವೂ ಜತೆಯಲ್ಲೇ ಮೂಡಿದೆ. ಇವುಗಳಲ್ಲಿರುವ ದುರಂತ ಚಿತ್ರಗಳು ಓದುಗರಲ್ಲಿಸಖೇದಾಶ್ಚರ್ಯವನ್ನು ಉಂಟುಮಾಡುತ್ತವೆ.
- ಜಿ.ವಿ. ಅರುಣ
ಪದ ಸೂಚಿಸಿದವರು: ಎನ್ .ಎಸ್ . ವೆಂಕಟೇಶ ಉಡುಪ, ಬೆಂಗಳೂರು
ಧಿ- - -
(ಜೋಕ್ ಫಾಲ್ಸ್ )
ಡಾಕ್ಟರ್ : ದಿನಕ್ಕೆ ಒಂದೇ ಕಪ್ ಕಾಫಿ ಕುಡೀಬೇಕು.
ಸಂಗ್ಯಾ ಮರುದಿನವೇ ಅರ್ಧ ಲೀಟರ್ ಹಿಡಿಸುವ ಕಾಫಿ ಕಪ್ ಅನ್ನು ಮನೆಗೆ ತಂದಿಟ್ಟುಕೊಂಡ.