ನಾಲವಾರದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮವರ್ಧಂತಿ ಮಹೋತ್ಸವ ನಡೆಯಿತು.
ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮವರ್ಧಂತಿ ಮಹೋತ್ಸವನಾಲವಾರ ಶ್ರೀಗಳು ಸಲಹೆ
ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದಿರಿ
ವಿಕ ಸುದ್ದಿಲೋಕ ನಾಲವಾರ
ಕಲ್ಯಾಣ ಕರ್ನಾಟಕ ಭಾಗದ ಪ್ರಸಿದ್ಧ ಪುಣ್ಯಕ್ಷೇತ್ರ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿಆಯುಧ ಪೂಜೆಯ ಪುಣ್ಯದಿನದಂದು ಪೀಠಾಧಿಪತಿ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಜನ್ಮವರ್ಧಂತಿ ಮಹೋತ್ಸವ ಹಾಗೂ ಲಿಂ.ತೋಟೇಂದ್ರ ಶಿವಯೋಗಿಗಳ ಪುಣ್ಯಸ್ಮರಣೋತ್ಸವ ನಡೆಯಿತು.
ಪುಣ್ಯ ಸ್ಮರಣೋತ್ಸವದ ಅಂಗವಾಗಿ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಶ್ರೀಮಠದ ಮುಂಭಾಗದ ಆವರಣದಲ್ಲಿನಿರ್ಮಿಸಲಾಗಿದ್ದ ಭವ್ಯ ವೇದಿಕೆಯ ಮೇಲೆ ಶ್ರೀಗಳ ವರ್ಧಂತಿ ಮಹೋತ್ಸವ ಜರುಗಿತು.
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ನಾಡಿನ ರೈತರು ಬರಗಾಲಕ್ಕೆ ಹೆದರಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಭಗವಂತ ನಮ್ಮ ಜೊತೆಗಿದ್ದಾನೆ ಎಂಬ ದೃಢ ನಂಬಿಕೆಯಿಂದ ಮುನ್ನಡೆದಾಗ ಯಾವುದೇ ಆತಂಕ ಎದುರಾಗುವುದಿಲ್ಲ. ಮುಂಗಾರು ಮಳೆ ಕೈಕೊಟ್ಟು ಭೂಮಿ ಬರಡಾಗಿದೆ, ಹಿಂಗಾರಿನ ಮೂಲಕವಾದರೂ ವರುಣದೇವ ಧರೆಯನ್ನು ತಣಿಸಲಿ ಎಂದು ಭಗವಂತನಲ್ಲಿಪ್ರಾರ್ಥನೆ ಮಾಡೋಣ ಎಂದು ಹೇಳಿದರು.
ಕಾರ್ಯಕ್ರಮದ ನೇತೃತ್ವವನ್ನು ಮುದನೂರಿನ ಸಿದ್ಧಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಸೂಗೂರಿನ ಚನ್ನರುದ್ರಮುನಿ ಶಿವಾಚಾರ್ಯರು, ಚಟ್ನಳ್ಳಿಯ ವಿಶ್ವಾರಾಧ್ಯ ಸ್ವಾಮಿಗಳು ವಹಿಸಿದ್ದರು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಮುಖಂಡರಾದ ಸಂಗಾರೆಡ್ಡಿಗೌಡ ಮಲ್ಹಾರ, ಸಾಯಿನಾಥ್ , ಮಹೇಶ ಸ್ವಾಮಿ ಚಿಂಚೋಳಿ, ಪ್ರದೀಪ ಪುರಾಣಿಕ, ಶಿವಲಿಂಗ ಭೀಮನಹಳ್ಳಿ, ಶ್ರೀಕಾಂತಗೌಡ ಮಡ್ನಾಳ ಇಬ್ರಾಹಿಂಪುರ, ಮಹಾದೇವ ಗಂವ್ಹಾರ ಸೇರಿ ಅನೇಕ ಗಣ್ಯರು, ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆದರು.
ಮಂಜುನಾಥ ಶಾಸ್ತ್ರಿ ನೇತೃತ್ವದ ವೈದಿಕ ತಂಡದಿಂದ ಉತ್ತರ ಭಾರತದ ಪ್ರಸಿದ್ಧ ಗಂಗಾರತಿ ಕಾರ್ಯಕ್ರಮವು ಭಕ್ತರಲ್ಲಿಭಕ್ತಿ ಭಾವವನ್ನು ಇಮ್ಮಡಿಗೊಳಿಸಿತು. ವಾರ್ಕರಿ ಸಂಪ್ರದಾಯದ ವಿಶೇಷ ಭಜನಾ ಮೇಳದ ಭಜನಾ ಕಾರ್ಯಕ್ರಮ ವಿಶಿಷ್ಟವಾಗಿ ಮೂಡಿ ಬಂದಿತು. ಈಶಾ ಪಡಶೆಟ್ಟಿ ತಂಡ, ಪ್ರತೀಕಾ ಚಿತ್ತಾಪುರ, ನಿತ್ಯಶ್ರೀ ಪಾಟೀಲ್ ಅವರಿಂದ ಭರತನಾಟ್ಯ ಸೇರಿ ಹಲವಾರು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪತ್ರಕರ್ತ ಡಾ.ಸಿದ್ಧರಾಜರೆಡ್ಡಿ ಯಾದಗಿರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ನೂತನ ಒಳಾಂಗಣ ಪ್ರಾಕಾರದ ನಿರ್ಮಾಣ ಕಾಮಗಾರಿಗೆ ಪೂಜ್ಯರ ಸಮ್ಮುಖದಲ್ಲಿಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಗುದ್ದಲಿ ಪೂಜೆ ನೆರವೇರಿಸಿದರು.