‘ಜೀವನಾಂಶ ಬಾಕಿ ಇದೆ ಎಂದು ಮಗುವಿನೊಂದಿಗಿನ ತಂದೆಯ ಸಂಬಂಧ ಕಡಿದು ಹೋಗಬಾರದು. ಅದೇ ವೇಳೆ, ಮಗುವನ್ನು ಭೇಟಿಯಾಗುವ ಹಕ್ಕು ಪಡೆದ ತಂದೆಯು ಜೀವನಾಂಶದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತೆಯೂ ಇಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.
ಆ ಮೂಲಕ ಪತಿ ಜೀವನಾಂಶ ಬಾಕಿ ಉಳಿಸಿಕೊಂಡಿದ್ದರೂ ಅದನ್ನು ಮುಂದಿಟ್ಟುಕೊಂಡು ಪತ್ನಿ, ಪತಿ ಮಗುವನ್ನು ಭೇಟಿ ಮಾಡುವುದನ್ನು ದೂರವಿಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಪತ್ನಿ ಮತ್ತು ಮಗುವಿಗೆ ನೀಡಬೇಕಾದ ಜೀವನಾಂಶದ ಬಾಕಿ ಕುರಿತು ವಿವಾದವಿದ್ದರೂ, ತಂದೆಗೆ ಮಗಳೊಂದಿಗೆ ಸಂಬಂಧ ಉಳಿಸಿಕೊಳ್ಳುವ ಅವಕಾಶ ನಿರಾಕರಿಸಲಾಗದು ಎಂದು ನ್ಯಾಯಮೂರ್ತಿ ರಾಜೇಶ್ವರಿ ಎನ್ .ಹೆಗಡೆ ಅವರಿದ್ದ ಏಕಸದಸ್ಯಪೀಠ ಧಾರವಾಡದಲ್ಲಿಆದೇಶಿಸಿದೆ.
ಭೇಟಿಯ ವ್ಯವಸ್ಥೆಯಲ್ಲಿಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಯೇ ಪ್ರಧಾನವಾಗಿರಬೇಕು ಎಂದು ತಿಳಿಸಿರುವ ಪೀಠ, ಪತ್ನಿ-ಮಗುವಿಗೆ ಒಟ್ಟಾರೆ ಮಾಸಿಕ 60 ಸಾವಿರ ರೂ. ಜೀವನಾಂಶ ನೀಡುವ ಹಿಂದಿನ ಆದೇಶದಂತೆ ಎಲ್ಲಬಾಕಿ ಪಾವತಿಸುವಂತೆಯೂ ತಂದೆಗೆ ನಿರ್ದೇಶಿಸಿದೆ.
ತಂದೆ-ಮಗುವಿನ ಸಂಬಂಧ ಉಳಿಯಬೇಕು:
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ‘‘ತಂದೆಗೆ ಮಗುವಿನೊಂದಿಗೆ ಸಂಬಂಧ ಉಳಿಸಿಕೊಳ್ಳುವ ಅವಕಾಶವನ್ನು ನಿರಾಕರಿಸಬಾರದು. ಭೇಟಿಯ ಹಕ್ಕು ಚಲಾಯಿಸುವಾಗ ಮಗುವಿನ ಕಲ್ಯಾಣ ಮತ್ತು ಹಿತಾಸಕ್ತಿಯೇ ಮುಖ್ಯ ಪರಿಗಣನೆಯಾಗಬೇಕು’’ ಎಂದು ಹೇಳಿದೆ.
ಅಲ್ಲದೆ, ಪರಿಸ್ಥಿತಿಯಲ್ಲಿನ ಬದಲಾವಣೆ, ಮಗುವಿನ ಪ್ರಸ್ತುತ ವಯಸ್ಸು ಮತ್ತು ಅಗತ್ಯಗಳು ಹಾಗೂ ಎರಡೂ ಪಕ್ಷಗಳ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಕೆಳ ನ್ಯಾಯಾಲಯ ನಿಗದಿಪಡಿಸಿದ್ದ ಭೇಟಿಯ ವ್ಯವಸ್ಥೆಯಲ್ಲಿಬದಲಾವಣೆ ಮಾಡುವುದು ಅಗತ್ಯ ಎಂದು ಭೇಟಿಯ ಆದೇಶ ಮಾರ್ಪಾಡು ಮಾಡಿದೆ.
ತಂದೆ ತಿಂಗಳಲ್ಲಿಗರಿಷ್ಠ ಮೂರು ದಿನ ಅಂದರೆ ಯಾವುದೇ ಶನಿವಾರ, ಭಾನುವಾರ ಅಥವಾ ಸಾರ್ವಜನಿಕ ರಜೆಯ ದಿನದಂದು ತಲಾ ಮೂರು ಗಂಟೆ ಮಗುವನ್ನು ಭೇಟಿಯಾಗಬಹುದು. ಭೇಟಿ ಇಬ್ಬರಿಗೂ ಅನುಕೂಲವಾದ ಸ್ಥಳದಲ್ಲಿನಡೆಯಬೇಕು. ಶಾಲೆ ಆಯೋಜಿಸುವ ಮಗುವಿನ ಕಾರ್ಯಕ್ರಮಗಳಲ್ಲಿತಂದೆ ಭಾಗವಹಿಸಬಹುದು. ಹುಟ್ಟುಹಬ್ಬದಂದು ಒಂದು ಗಂಟೆ ಮಗುವನ್ನು ಭೇಟಿ ಮಾಡಬಹುದು ಎಂದು ಆದೇಶಿಸಿದೆ.
ಜೀವನಾಂಶ ನೀಡದೆ ಭೇಟಿಯ ಹಕ್ಕಿಲ್ಲ:
ಪತ್ನಿ ಪರ ವಕೀಲರು ‘‘ಪತ್ನಿ ಮತ್ತು ಮಗುವಿಗೆ ಒಟ್ಟಾರೆ ತಿಂಗಳಿಗೆ 60 ಸಾವಿರ ಜೀವನಾಂಶ ಪಾವತಿಸುವಂತೆ ಆದೇಶವಿದ್ದರೂ ಪತಿ ಪೂರ್ಣ ಮೊತ್ತವನ್ನು ನೀಡುತ್ತಿಲ್ಲ. ಕೇವಲ ಮಗುವಿನ ಜೀವನಾಂಶವನ್ನು ಮಾತ್ರ ಪಾವತಿಸುತ್ತಿದ್ದಾರೆ. ನ್ಯಾಯಾಲಯದ ಜೀವನಾಂಶ ಆದೇಶ ಪಾಲಿಸದೆ, ತನ್ನ ಪರ ನೀಡಲಾಗಿರುವ ಭೇಟಿಯ ಆದೇಶವನ್ನು ಜಾರಿಗೊಳಿಸಲು ಪತಿಗೆ ಒತ್ತಾಯಿಸುವ ಹಕ್ಕಿಲ್ಲ. ಜತೆಗೆ ನಿಗದಿತ ವಿಡಿಯೊ ಕರೆ ಮತ್ತು ಆಗಾಗ್ಗೆ ಭೇಟಿಗಳು ಮಗುವಿನ ಓದು, ಆರೋಗ್ಯ ಹಾಗೂ ಭಾವನಾತ್ಮಕ ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು’’ ಎಂದು ವಾದಿಸಿದ್ದರು.
ಆದರೆ ಪತಿಯ ಪರ ವಕೀಲರು, ಮಗುವಿನ ಜೀವನಾಂಶವನ್ನು ಪಾವತಿಸಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದರು. ನ್ಯಾಯಾಲಯ ಭೇಟಿಗೆ ಅವಕಾಶ ನೀಡಿದ್ದರೂ ಪತ್ನಿ ಸಹಕರಿಸುತ್ತಿಲ್ಲ. ಮಗುವನ್ನು ಭೇಟಿಯಾಗಬೇಕಾದ ಸ್ಥಳವನ್ನೂ ತಿಳಿಸುತ್ತಿಲ್ಲ. ಜೀವನಾಂಶದ ಬಾಕಿ ಇದ್ದರೂ ಅದೊಂದೇ ಕಾರಣಕ್ಕೆ ಮಗುವನ್ನು ಭೇಟಿಯಾಗುವ ಹಕ್ಕನ್ನು ನಿರಾಕರಿಸಲಾಗದು ಎಂದು ವಾದಿಸಿ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಉಲ್ಲೇಖಿಸಿದರು.
ಪ್ರಕರಣದ ಹಿನ್ನೆಲೆ:
ದಂಪತಿಯು 2017ರ ಡಿ.4ರಂದು ವಿವಾಹವಾಗಿದ್ದರು. 2019ರ ಜ.30ರಂದು ಮಗು ಜನಿಸಿತ್ತು. ಬಳಿಕ ವೈವಾಹಿಕ ಜೀವನದಲ್ಲಿಭಿನ್ನಾಭಿಪ್ರಾಯ ಉಂಟಾಗಿ ಪತ್ನಿ ಮಗುವಿನೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ವಿವಾಹ ವಿಚ್ಛೇದನ ಕೋರಿ ಅವರು ಕಾರವಾರದ ನ್ಯಾಯಾಲಯದಲ್ಲಿ2020ರಲ್ಲಿಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಮಗುವನ್ನು ಭೇಟಿಯಾಗಲು ಅವಕಾಶ ನೀಡುವಂತೆ ಪತಿ ಹಿಂದೂ ವಿವಾಹ ಕಾಯಿದೆಯ ಕಲಂ 26ರ ಅಡಿಯಲ್ಲಿಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ 2024ರ ನ.25ರಂದು ನೀಡಿದ್ದ ನಿರ್ದೇಶನದ ಬಳಿಕ ಅಧೀನ ನ್ಯಾಯಾಲಯವು ಭೇಟಿಯ ಅರ್ಜಿ ಪರಿಗಣಿಸಿ, 2025ರ ಫೆ.3ರಂದು ಅನುಮತಿ ನೀಡಿತ್ತು. ಈ ಮಧ್ಯೆ, ಕೆಳ ನ್ಯಾಯಾಲಯವು 2021ರಲ್ಲಿತಿಂಗಳಿಗೆ 40 ಸಾವಿರ ರೂ. ಜೀವನಾಂಶ ನಿಗದಿಪಡಿಸಿತ್ತು. ಹೈಕೋರ್ಟ್ 2022ರ ಡಿ.16ರಂದು ಪತ್ನಿ ಮತ್ತು ಮಗುವಿಗೆ ಸೇರಿ ಜೀವನಾಂಶವನ್ನು 60 ಸಾವಿರಕ್ಕೆ ಹೆಚ್ಚಿಸಿತ್ತು.
ತಿಂಗಳ ಮೊದಲ ಮತ್ತು ಮೂರನೇ ಶನಿವಾರ ತಲಾ ಮೂರು ಗಂಟೆ ಮಗುವನ್ನು ಭೇಟಿಯಾಗಲು ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8ರಿಂದ 9ರ ನಡುವಿನ ಅವಧಿಯಲ್ಲಿಪ್ರತಿದಿನ 10 ನಿಮಿಷ ವಿಡಿಯೊ ಕರೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಮಗುವಿನ ಹುಟ್ಟುಹಬ್ಬದಂದು ಭೇಟಿ, ಶಾಲಾ ಕಾರ್ಯಕ್ರಮಗಳಲ್ಲಿಭಾಗವಹಿಸುವಿಕೆ ಮತ್ತು ಬೇಸಿಗೆ ರಜೆಯ ಮೊದಲ 10 ದಿನ ಮಗುವನ್ನು ತಂದೆಯೊಂದಿಗೆ ಕಳುಹಿಸುವ ವ್ಯವಸ್ಥೆಯನ್ನೂ ಆದೇಶ ಒಳಗೊಂಡಿತ್ತು. ಈ ಆದೇಶವನ್ನು ಪತ್ನಿ ಹೈಕೋರ್ಟ್ ನಲ್ಲಿಪ್ರಶ್ನಿಸಿದ್ದರು.