*ಬೆಂಗಳೂರು ಗ್ರಾಮಾಂತರದ ಎಸಿ,ಡಿಸಿಗಳ ಕಂದಾಯ ಕರಾಮತ್ತು !
ವಿಕ ಸುದ್ದಿಲೋಕ ಬೆಂಗಳೂರು
ನಿವೃತ್ತ ಐಎಎಸ್ ಅಧಿಕಾರಿಗಳು ಸೇರಿದಂತೆ ಎಸಿ, ತಹಸೀಲ್ದಾರ್ ಗಳು ಸೇರಿದಂತೆ ಹಲವರ ವಿರುದ್ಧದ 38 ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿರುವುದು ಸರಕಾರಕ್ಕೆ ತೀವ್ರ ಇರುಸುಮುರುಸು ತಂದಿದೆ. ಈ ಪೈಕಿ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಹಲವರ ವಿರುದ್ಧದ ಪ್ರಕರಣಗಳ ಇಲಾಖಾ ವಿಚಾರಣೆಗಳೂ ಸೇರಿವೆ. ನಿವೃತ್ತ ಐಎಎಸ್ ಅಧಿಕಾರಿಗಳಾದ ಎಂ.ಕೆ.ಅಯ್ಯಪ್ಪ, ಎಂ.ಎ.ಸಾಧಿಕ್ , ಜಿ.ಎನ್ .ಶಿವಮೂರ್ತಿ ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯಡಿ ದಾಖಲಾದ ಪ್ರಕರಣದ ಬಗ್ಗೆ ಇಲಾಖಾ ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ. ನ್ಯಾಯಾಲಯದಲ್ಲಿಭೂವಿವಾದ ಬಾಕಿಯಿದ್ದರೂ ಬಿಲ್ಡರ್ ಗಳ ಜತೆಗೂಡಿ ವಾರಸುದಾರರಲ್ಲ5 ಮಂದಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಖಾತೆ ಮಾಡಿರುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ವಿ.ಶಂಕರ್ ಹಾಗೂ ಹರೀಶ್ ನಾಯಕ್ ವಿರುದ್ಧ ಪ್ರಕರಣ.
ಸಾವಿರಾರು ಕೋಟಿ ರೂ. ನಷ್ಟ: ಬೆಂಗಳೂರು ಉತ್ತರ ಹಾಗೂ ದಕ್ಷಿಣ ತಾಲೂಕಿನಲ್ಲಿಬೋಗಸ್ ದಾಖಲೆ ಪಡೆದು ಸರಕಾರಿ ಜಮೀನು ಮಂಜೂರು ಮಾಡಿರುವುದು. ಬೆಂಗಳೂರು ಉತ್ತರ ತಾಲೂಕಿನ ಉಪ ವಿಭಾಗಾಧಿಕಾರಿ ಎಷ್ಟು ಸರಕಾರಿ ಭೂಮಿ ಮಂಜೂರು ಮಾಡಿದ್ದಾರೆ ಎಂಬುದನ್ನು ಇನ್ನೂ ಲೆಕ್ಕ ಮಾಡಲು ಸಾಧ್ಯವಾಗದಿರುವುದು. ಕನಿಷ್ಠ 5 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಭೂಮಿಯನ್ನೇ ಮಂಜೂರು ಮಾಡಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು, ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಯಿಂದ ಸರಕಾರಕ್ಕೆ 100 ಕೋಟಿ ರೂ. ನಷ್ಟ ಉಂಟಾಗಿರುತ್ತದೆ. 8-10 ಬೆರಳೆಣಿಕೆ ಅಧಿಕಾರಿಗಳಿಂದ ಸರಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿರುವ ಸಾಧ್ಯತೆ ಇದೆ. ತಹಶೀಲ್ದಾರ್ , ಎಸಿ ಮಾಡಿದ ಆದೇಶ ಸುಪ್ರೀಂ ಕೋರ್ಟ್ ಗೆ ಹೋದರೂ ರದ್ದಾಗುವುದು ಕಷ್ಟ. ಶೀಘ್ರವಾಗಿ ವಿಚಾರಣೆ ಪೂರ್ಣಗೊಳಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
29 ಎಸಿಗಳೇ ಇದ್ದಾರೆ
16 ಜಿಲ್ಲೆಗಳ ವ್ಯಾಪ್ತಿಯಲ್ಲಿ29 ಉಪ ವಿಭಾಗಾಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿಸ್ವಯಂಪ್ರೇರಿತ ಪ್ರಕರಣ ದಾಖಲು. ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿ. 1 ಲಕ್ಷ ರೂ. ಲಂಚ ಪಡೆದು ದೂರುದಾರರ ಪರ ಆದೇಶ ನೀಡಿ ನಂತರ ಎರಡೇ ತಿಂಗಳ ಬಳಿಕ ಆ ಆದೇಶ ತಿರುಚಿ ಮತ್ತೊಬ್ಬರಿಗೆ ಕಾನೂನುಬಾಹಿರವಾಗಿ ಆದೇಶ ಹೊರಡಿಸಿರುವುದು.
ಅರಣ್ಯ ಭೂಮಿಯನ್ನು ಅನಧಿಕೃತವಾಗಿ ಗೋಮಾಳವೆಂದು ಇಂದೀಕರಿಸಲು ಆದೇಶ. ಕಾನೂನುಬಾಹಿರವಾಗಿ ರಾಜಕೀಯ ಪ್ರಭಾವಿರುವ ವ್ಯಕ್ತಿಗಳಿಗೆ ಹಕ್ಕುಪತ್ರ ನೀಡಿರುವುದು. ಹಿರಿಯ ಅಧಿಕಾರಿಗಳ ವಿರುದ್ಧ ಕಿರಿಯ ಅಧಿಕಾರಿಗಳೇ ನೀಡಿರುವ ದೂರಿನ ಪ್ರಕರಣ. ಸುಳು ಜಾತಿ ಪ್ರಮಾಣ ಪತ್ರದ ಪ್ರಕರಣ. ಕರ್ತವ್ಯ ನಿರ್ಲಕ್ಷ್ಯ. ನ್ಯಾಯಾಂಗ ನಿಂದನಾ ಪ್ರಕರಣವನ್ನು ದಾಖಲಿಸಿ ಸರಕಾರಕ್ಕೆ ಮುಜುಗರ ಉಂಟು ಮಾಡಿರುವುದು. ಹೈಕೋರ್ಟ್ ಆದೇಶ ಪಾಲಿಸದಿರುವುದು. 1979ರ ಇನಾಂ ರದ್ದತಿ ನಿಯಮ 5ರ ಉಲ್ಲಂಘನೆ. ಸರಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿರುವುದು.
-----------------------
ಎಸಿ-ಡಿಸಿಗಳ ಭ್ರಷ್ಟ ಕೈಚಳಕ !
-ಸರಕಾರಿ ಭೂಮಿಯನ್ನು ಖಾಸಗಿಯವರಿಗೆ ನೀಡಿರುವುದು.
-ಸರಕಾರಿ ಆಸ್ತಿ ಖಾಸಗಿ ವ್ಯಕ್ತಿಗೆ ಪರಭಾರೆ.
-ದೋಷಯುಕ್ತ ಅರೆನ್ಯಾಯಿಕ ಪ್ರಕರಣಗಳಲ್ಲಿಆದೇಶ ಹೊರಡಿಸಿರುವುದು.
-ಅರಣ್ಯ- ಡೀಮ್ ್ಡ ಅರಣ್ಯ ಪ್ರದೇಶವನ್ನು ಭೂಮಂಜೂರಾತಿ ಮಾಡಿ ಆದೇಶ ಹೊರಡಿಸಿರುವುದು.
-ಕಾನೂನುಬಾಹಿರವಾಗಿ ಖಾತೆ ಮಾಡಿ, ಕೆಲವು ಕೇಸುಗಳನ್ನು ಇತ್ಯರ್ಥಪಡಿಸಿರುವುದು.
-ಸರಕಾರಿ ‘ಬಿ- ಖರಾಬು’ ಭೂಮಿಯನ್ನು ಖಾಸಗಿ ವ್ಯಕ್ತಿ ಹೆಸರಿನಲ್ಲಿಖಾತೆ ಮಾಡಿಕೊಟ್ಟಿರುವುದು.
ಇಲಾಖೆ ವಿಚಾರಣೆ ಇತ್ಯರ್ಥವಾಗಲಿ
ಕಂದಾಯ ಇಲಾಖೆಯ ನಾನಾ ನ್ಯಾಯಾಲಯಗಳಲ್ಲಿನ ಪ್ರಕರಣಗಳಾಗಲಿ, ಇಲಾಖೆ ಅಧಿಕಾರಿಗಳ ವಿರುದ್ಧ ವಿಚಾರಣೆಯಾಗಲಿದೆ ತ್ವರಿತವಾಗಿ ಇತ್ಯರ್ಥವಾಗಬೇಕು. ಅದರಂತೆ ಅಧಿಕಾರಿಗಳ ವಿರುದ್ಧದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕಂದಾಯ ಇಲಾಖೆಯಲ್ಲಿನಡೆದಿರುವ ಇಲಾಖಾ ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಏಕೆಂದರೆ ಆರೋಪ ಹೊತ್ತವರನ್ನು ವ್ಯವಸ್ಥಿತವಾಗಿ ರಕ್ಷಿಸುವ ವ್ಯವಸ್ಥೆಯೊಂದು ರೂಪುಗೊಂಡು ಬಿಟ್ಟಿದೆ. ನಿವೃತ್ತಿಯಾಗುವವರೆಗೆ ವಿಳಂಬ ಮಾಡುವುದು, ಬಡ್ತಿ ಸಿಗುವಾಗ ಆರೋಪ ಪ್ರಕರಣಗಳನ್ನು ಮರೆಮಾಚುವಂತಹ ಪ್ರಯತ್ನಗಳಾಗುತ್ತವೆ. ಹಾಗಾಗಿ ಹಲವು ವರ್ಷಗಳಿಂದ ಬಾಕಿಯಿರುವ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
- ಕೃಷ್ಣ ಬೈರೇಗೌಡ, ಕಂದಾಯ ಸಚಿವ

